SDPI ‘ಎಸ್.ಪಿ. ಕಚೇರಿ ಚಲೋ’ಗೆ ಪೊಲೀಸ್ ತಡೆ | ರಸ್ತೆಯಲ್ಲೇ ಪ್ರತಿಭಟನೆ; ಕಮೀಷನರ್ ರಿಂದ ಮನವಿ ಸ್ವೀಕಾರ

Prasthutha|

ಮಂಗಳೂರು : ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆಯ ದಿನ ಡಿ.30ರಂದು ಬೆಳ್ತಂಗಡಿಯ ಉಜಿರೆಯ ಮತ ಎಣಿಕೆ ಕೇಂದ್ರದ ಹೊರಗೆ ಪಾಕ್ ಪರ ಘೋಷಣೆ ಕೂಗಲಾಗಿದೆ ಎನ್ನಲಾದ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ SDPI ವತಿಯಿಂದ ‘ಎಸ್.ಪಿ. ಕಚೇರಿ ಚಲೋ’ ಬೃಹತ್ ಹೋರಾಟ ಇಂದು ನಗರದಲ್ಲಿ ನಡೆಯಿತು. ನಗರದ ಕ್ಲಾಕ್ ಟವರ್ ಬಳಿ ಸಾವಿರಾರು ಜನರು ನೆರೆದು, ನ್ಯಾಯಕ್ಕಾಗಿ ಆಗ್ರಹಿಸಿದರು.

- Advertisement -

ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಘೋಷಣೆ ಕೂಗುವ ಮೂಲಕ ಹೋರಾಟಕ್ಕೆ ಚಾಲನೆ ನೀಡಿದರು.  

ಪಾಕ್ ಪರ ಘೋಷಣೆ ಕೂಗಿದ ನೈಜ ಆರೋಪಿಗಳನ್ನು ಬಂಧಿಸಬೇಕು. ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿರುವ ಅಮಾಯಕರನ್ನು ಬಿಡುಗಡೆಗೊಳಿಸಬೇಕು, ಅಮಾಯಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ ಬೆಳ್ತಂಗಡಿ ಪೊಲೀಸರ ವಿರದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನಕಾರರು ಆಗ್ರಹಿಸಿದರು.

- Advertisement -

ಪ್ರತಿಭಟನೆಯಲ್ಲಿ ವಿಶಿಷ್ಟವಾದ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನಕಾರರು ತಮ್ಮ ಆಕ್ರೋಶವನ್ನು ಹೊರಹಾಕಿದರು.

ಪ್ರತಿಭಟನಕಾರರನ್ನು ಮಿನಿ ವಿಧಾನಸೌದದ ಬಳಿ ಪೊಲೀಸರು ತಡೆದರು. ಹೀಗಾಗಿ, ಪ್ರತಿಭಟನಕಾರರು ರಸ್ತೆಯಲ್ಲೇ ಕುಳಿತು ತಮ್ಮ ಪ್ರತಿಭಟನೆ ಮುಂದುವರಿಸಿದರು. ಈ ವೇಳೆ ಎಸ್ ಡಿಪಿಐ ಪ್ರಮುಖರು ಮಾತನಾಡಿದರು.

ಬೆಳ್ತಂಗಡಿ ಘಟನೆ ತಾರತಮ್ಯದಿಂದ, ಅನ್ಯಾಯದಿಂದ ಕೂಡಿದ ಘಟನೆ ಆಗಿದೆ. ಇದು ಸತ್ಯ ಮತ್ತು ಅಸತ್ಯದ ನಡುವಿನ ಹೋರಾಟ, ನ್ಯಾಯ ಮತ್ತು ಅನ್ಯಾಯದ ನಡುವಿನ ಹೋರಾಟ ಎಂದು ಎಸ್ ಡಿಪಿಐ ಮುಖಂಡ ಶಾಫಿ ಬೆಳ್ಳಾರೆ ಹೇಳಿದರು.

ಇಲ್ಲಿ ಆರೋಪಿಗಳು ಯಾರೆಂದು ಪೊಲೀಸರಿಗೆ ಗೊತ್ತಿದೆ. ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ ನೈಜ ಆರೋಪಿಗಳನ್ನು ಪತ್ತೆಹಚ್ಚಿ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆ ನಡೆಯುವ ಸ್ಥಳಕ್ಕೆ ಡಿಐಜಿ ಬರಬೇಕೆಂದು ಪ್ರತಿಭಟನಕಾರರು ಪಟ್ಟು ಹಿಡಿದಿದ್ದರು. ಆದರೆ, ಕೊನೆಗೆ ಪೊಲೀಸ್ ಆಯಕ್ತ ಎನ್. ಶಶಿ ಕುಮಾರ್ ಆಗಮಿಸಿ, ಮನವಿ ಸ್ವೀಕರಿಸಿದರು. ಮನವಿಯನ್ನು ಡಿಐಜಿಯವರಿಗೆ ತಲುಪಿಸುವುದಾಗಿ ಅವರು ಭರವಸೆ ನೀಡಿದರು. ಅಲ್ಲದೆ, ಎಸ್ ಡಿಪಿಐ ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೊ ಫ್ರಾಂಕೊ, ಇಕ್ಬಾಲ್ ಬೆಳ್ಳಾರೆ, ರಾಜ್ಯ ಸಮಿತಿ ಸದಸ್ಯ ಆನಂದ ಮಿತ್ತಬೈಲು ಮತ್ತಿತರ ಪ್ರಮುಖರು ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಯಕರ್ತರು, ನಾಗರಿಕರು ಭಾಗವಹಿಸಿದರು.



Join Whatsapp