ಮಂಗಳೂರು : ಕಳೆದ ಡಿ.30 ರಂದು ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ದಿನ ಉಜಿರೆಯ ಮತ ಎಣಿಕೆ ಕೇಂದ್ರದ ಹೊರಗೆ ‘ಪಾಕ್ ಪರ ಘೋಷಣೆ’ ಕೂಗಲಾಗಿದೆ ಎನ್ನಲಾದ ಘಟನೆಗೆ ಸಂಬಂಧಿಸಿ ನೈಜ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಶುಕ್ರವಾರ SDPI ಎಸ್ ಪಿ ‘ಕಚೇರಿ ಚಲೋ’ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ. ಅವರು ಈ ಸಂಬಂಧ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದಾರೆ.
ಡಿ.30ರಂದು ಬೆಳ್ತಂಗಡಿಯ ಉಜಿರೆಯ ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆ ನಡೆಯುತ್ತಿದ್ದ ವೇಳೆ ತಮ್ಮ ಅಭ್ಯರ್ಥಿಗಳು ಜಯಶಾಲಿಯಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿರುವಾಗ, ನಮ್ಮ ಕಾಯಕರ್ತರು ಪಾಕ್ ಪರ ಘೋಷಣ್ ಕೂಗಿದ್ದಾರೆ ಎಂಬ ಸುಳ್ಳು ಸುದ್ದಿಯೊಂದನ್ನು ‘ದಿಗ್ವಿಜಯ ನ್ಯೂಸ್’ ಎಂಬ ಕನ್ನಡ ಟಿವಿ ಚಾನೆಲೊಂದು ಪ್ರಸಾರ ಮಾಡಿತ್ತು. ಆ ಕೂಡಲೇ ನಮ್ಮ ಪಕ್ಷದ ಸ್ಥಳೀಯ ನಾಯಕರು ಈ ಬಗ್ಗೆ ‘ದಿಗ್ವಿಜಯ ನ್ಯೂಸ್’ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದೂರನ್ನು ನೀಡಿದರೂ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದರು. ಆ ನಂತರ ಪೊಲೀಸರು ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಅಂದು ರಾತ್ರಿ 12 ಮಂದಿ ಎಸ್ ಡಿಪಿಐ ಕಾರ್ಯಕರ್ತರನ್ನು ಅವರ ಮನೆಗಳಿಗೆ ನುಗ್ಗಿ ಅಮಾನುಷವಾಗಿ ಬಂಧಿಸಿ ಅವರಲ್ಲಿ 3 ಮಂದಿಯ ವಿರುದ್ದ ದೇಶದ್ರೋಹದ ಕೇಸು ದಾಖಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ನಾವು ಎಸ್ ಡಿಪಿಯ ವತಿಯಿಂದ ಜಿಲ್ಲಾಧ್ಯಂತ ಪತ್ರಿಕಾಗೋಷ್ಠಿ ಹಾಗೂ ಪ್ರತಿಭಟನೆ ಮಾಡಿ ಪೊಲೀಸರ ಪಕ್ಷಪಾತ ಧೋರಣೆಯನ್ನು ಖಂಡಿಸಿದೆವು. ಅಲ್ಲದೆ, ಇದರ ಹಿಂದೆ ಸಂಘಪರಿವಾರ ಹಾಗೂ ‘ದಿಗ್ವಿಜಯ ಚಾನೆಲ್’ನ ವ್ಯವಸ್ಥಿತ ಷಡ್ಯಂತ್ರ ಅಡಗಿದೆ ಎಂಬ ಸಂಶಯಗಳು ಗಾಢವಾಗಿ ಕಾಡತೊಡಗಿದವು. ಇದೇ ಸಂದರ್ಭದಲ್ಲಿ ಉಜಿರೆಯ ಎಣಿಕಾ ಕೇಂದ್ರದ ಹೊರಗಡೆ ಬಿಜೆಪಿ-ಸಂಘಪರಿವಾರದ ಕಾರ್ಯಕರ್ತರು ಪಾಕ್ ಪರವಾಗಿ ಘೋಷಣೆ ಕೂಗುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದವು.
ಈ ಬಗ್ಗೆ ನಾವು ಜಿಲ್ಲಾದ್ಯಂತ ಇನ್ನಷ್ಟು ಪ್ರತಿಭಟನೆಗಳನ್ನು ನಡೆಸಿ ನೈಜ ಆರೋಪಿಗಳಾದ ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಲು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆವು. ಆದರೆ ಆರೋಪಿಗಳು ಬಿಜೆಪಿ ಕಾರ್ಯಕರ್ತರೆನ್ನುವ ನೆಲೆಯಲ್ಲಿ ಪೊಲೀಸರು ದೂರು ದಾಖಲಿಸಲು ನಿರಾಕರಿಸಿದರು ಎಂದು ಅವರು ಆಪಾದಿಸಿದ್ದಾರೆ.
ಇದರ ವಿರುದ್ಧ ಜ.7 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯ ಮುಂದೆ ಮುಷ್ಕರವನ್ನು ಹಮ್ಮಿಕೊಂಡಿದ್ದ ಸಂಧರ್ಭದಲ್ಲಿ ಅಲ್ಲಿಗೆ ಬಂದ ಉನ್ನತ ಪೊಲೀಸ್ ಅಧಿಕಾರಿಗಳು, ನಮ್ಮ ನಾಯಕರೊಂದಿಗೆ ಮಾತುಕತೆ ನಡೆಸಿ ನಮಗೆ ನಾಲ್ಕು ದಿನಗಳ ಕಾಲಾವಕಾಶ ಕೊಡಿ, ಖಂಡಿತ ನಾವು ನೈಜ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹೇಳಿದ್ದರು. ಪೊಲೀಸ್ ಅಧಿಕಾರಿಗಳ ವಿನಂತಿಗೆ ಗೌರವ ಕೊಟ್ಟು ಅಂದಿನ ಪ್ರತಿಭಟನೆಯನ್ನು ಕೈ ಬಿಟ್ಟಿದ್ದೆವು. ಆದರೆ, ಇದೀಗ ಅಧಿಕಾರಿಗಳು ಕೊಟ್ಟ ನಾಲ್ಕು ದಿನಗಳ ಕಾಲಾವಕಾಶ ಮುಗಿದಿದ್ದು ಇನ್ನೂ ಕೂಡಾ ಯಾವುದೇ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಸುಳ್ಳು ಸುದ್ದಿ ಆಧಾರದಲ್ಲಿ ಬಂಧಿತರಾಗಿರುವ ಅಮಾಯಕರಾದ ಮೂರು ಮಂದಿಯನ್ನು ಕೂಡಲೇ ಬಿಡುಗಡೆಗೊಳಿಸಬೇಕು, ನೈಜ ಆರೋಪಿಗಳಾದ ಬಿಜೆಪಿ ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಬೇಕು ಹಾಗೂ ಸುಳ್ಳು ಮೊಕದ್ದಮೆ ದಾಖಲಿಸಿ ಅಮಾಯಕ ಯುವಕರನ್ನು ಜೈಲಿಗಟ್ಟಿದ ಬೆಳ್ತಂಗಡಿ ಪೊಲೀಸ್ ಉಪ ನಿರೀಕ್ಷಕರಾದ ನಂದಕುಮಾರ್ ರವರನ್ನು ಕೂಡಲೇ ಸೇವೆಯಿಂದ ಅಮಾನತು ಗೊಳಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜ.15ರ ಶುಕ್ರವಾರದಂದು ಮಧ್ಯಾಹ್ನ 2.30 ಗಂಟೆಗೆ ಮಂಗಳೂರಿನ ಕ್ಲಾಕ್ ಟವರ್ ನಿಂದ ಎಸ್.ಪಿ. ಕಚೇರಿ ವರೆಗೆ ‘ಎಸ್.ಪಿ. ಕಚೇರಿ ಚಲೋ’ ಎಂಬ ಜನಾಂದೋಲನವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಹೋರಾಟಕ್ಕೆ ಪ್ರಜ್ಞಾವಂತ ನಾಗರಿಕರೆಲ್ಲರೂ ಭಾಗವಹಿಸುವ ಮೂಲಕ ಪೊಲೀಸ್ ಇಲಾಖೆಯ ದ್ವಿಮುಖ ಧೋರಣೆಯನ್ನು ಖಂಡಿಸಿ, ಅಮಾಯಕ ಯುವಕರಿಗೆ ನ್ಯಾಯ ಒದಗಿಸಲು ಸಹಕರಿಸಬೇಕೆಂದು ಎಂದು ಪಕ್ಷದ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಮನವಿ ಮಾಡಿದ್ದಾರೆ.