ಶೃಂಗೇರಿಯಲ್ಲಿ ಗೋ ಸಾಗಾಟಗಾರನ ಮೇಲೆ ದಾಳಿ | ವಿವಾದಿತ ಕಾಯ್ದೆಯಡಿ ಆರೋಪಿಗಳ ರಕ್ಷಣೆ ಆತಂಕಕಾರಿ : ಪಾಪ್ಯುಲರ್ ಫ್ರಂಟ್

Prasthutha|

ಬೆಂಗಳೂರು : ಶೃಂಗೇರಿಯಲ್ಲಿ ಗೋರಕ್ಷಕ ಗೂಂಡಾಗಳಿಂದ ದಾಳಿಗೊಳಗಾದ ವ್ಯಕ್ತಿಯ ವಿರುದ್ಧವೇ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದು ಮಾತ್ರವಲ್ಲ, ವಿವಾದಿತ ಕಾಯ್ದೆಯಡಿ ಆರೋಪಿಗಳ ರಕ್ಷಣೆಗೆ ನಿಂತಿರುವುದು ಆತಂಕಕಾರಿಯಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಷ ತಿಳಿಸಿದ್ದಾರೆ.

- Advertisement -

ದಾವಣಗೆರೆಯ ಆಬಿದ್ ಅಲಿ ಎಂಬಾತ ಹಲವಾರು ವರ್ಷಗಳಿಂದ ಅಧಿಕೃತವಾಗಿ ಜಾನುವಾರು ಸಾಗಾಟದ ವೃತ್ತಿಯನ್ನು ನಡೆಸುತ್ತಿದ್ದಾರೆ. ಅದೇ ರೀತಿ ನೂತನ ಕಾಯ್ದೆಯ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಜನವರಿ 7ರ ಗುರುವಾರದಂದು ರಾಣಿಬೆನ್ನೂರಿನಿಂದ ಮಂಗಳೂರಿಗೆ ಕೆಲವು ಜಾನುವಾರುಗಳನ್ನು ಸಾಗಿಸುತ್ತಿದ್ದರು. ಈ ನಡುವೆ ಶೃಂಗೇರಿಯ ತನಿಕೋಡ್ ಚೆಕ್‌ ಪೋಸ್ಟ್‌ ಬಳಿ ಲಾರಿಯನ್ನು ತಡೆಗಟ್ಟಿದ ಗುಂಪೊಂದು ಆಬಿದ್ ಅಲಿಯವರಿಗೆ ಕಬ್ಭಿಣದ ರಾಡ್‌ ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದೆ. ಇದೀಗ ಹಲ್ಲೆಗೊಳಗಾದ ಆಬಿದ್‌ ಅಲಿಯ ಮೇಲೆಯೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಪ್ರಕರಣದ ಮಾಹಿತಿ ನೀಡಿದ್ದಾರೆ.

ಗೋ ಹತ್ಯೆ ನಿಷೇಧದ ವಿವಾದಿತ ಕಾಯ್ದೆಯು ಸಕ್ರಮ ಜಾನುವಾರು ಸಾಗಾಟಗಾರರ ಮೇಲೆ ದಾಳಿ ನಡೆಸಲು ಸಂಘಪರಿವಾರದ ಗೂಂಡಾಗಳಿಗೆ ಮುಕ್ತ ಅವಕಾಶವನ್ನು ನೀಡುತ್ತದೆ ಎಂಬ ಆತಂಕ ಇದೀಗ ನಿಜವಾಗಿದೆ. ಅದೇ ರೀತಿ ಅಧಿಕೃತ ದಾಖಲೆಗಳಿದ್ದರೂ ದಾಳಿಗೊಳಗಾದ ಯುವಕನ ವಿರುದ್ಧವೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವುದು ಪೊಲೀಸರ ಕೋಮುವಾದಿ ಹಾಗೂ ಪೂರ್ವಾಗ್ರಹಪೀಡಿತ ಮನೋಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಅಲ್ಲದೆ, ಹೊಸದಾಗಿ ಜಾರಿಗೆ ತಂದ ಗೋ ಹತ್ಯಾ ನಿಷೇಧ ಕಾಯ್ದೆಯನ್ನು ಗೋರಕ್ಷಕ ಗೂಂಡಾಗಳ ದುಷ್ಕೃತ್ಯವನ್ನು ಸಮರ್ಥಿಸಲು ಯಾವ ರೀತಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದು ಅವರು ಹೇಳಿದ್ದಾರೆ.

- Advertisement -

ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು. ಕಾನೂನುಬದ್ಧ ಜಾನುವಾರು ಸಾಗಾಟಗಾರರ ರಕ್ಷಣೆಯನ್ನು ಖಾತರಿಪಡಿಸಬೇಕು. ಕಾನೂನು ಕೈಗೆತ್ತಿಕೊಳ್ಳುವ ಸಂಘಪರಿವಾರದ ಗೂಂಡಾಗಳ ಬೆಂಬಲಕ್ಕೆ ನಿಲ್ಲದೇ ಪೊಲೀಸರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಜನರ ಬದುಕುವ ಹಕ್ಕಿಗೆ ಮತ್ತು ಕಾನೂನು ಸುವ್ಯವಸ್ಥೆಗೆ ಮಾರಕವಾಗಿರುವ ಇಂತಹ ಕಾನೂನುಗಳನ್ನು ಸರಕಾರವು ಕೂಡಲೇ ಹಿಂಪಡೆಯುವ ನಿಟ್ಟಿನಲ್ಲಿ ಜನರು ಬಲವಾಗಿ ಧ್ವನಿ ಎತ್ತಬೇಕೆಂದು ನಾಸಿರ್ ಪಾಷ ಒತ್ತಾಯಿಸಿದ್ದಾರೆ.

Join Whatsapp