ಬೆಂಗಳೂರು: ಸರಕಾರದ ರೈತ ವಿರೋಧಿ ನೀತಿಯ ವಿರುದ್ಧ ರೈತ ಸಂಘಟನೆ, ಎಸ್.ಡಿ.ಪಿ.ಐ ಮತ್ತು ಇತರ ಸಂಘಟನೆಗಳ ಪ್ರತಿಭಟನೆ

Prasthutha|

ಬೆಂಗಳೂರು: ರಾಜ್ಯ ಹಾಗೂ ಕೇಂದ್ರ ಸರಕಾರಗಳು ಭೂ ಸುಧಾರಣೆ ಮತ್ತು ಎ.ಪಿ.ಎಂ.ಸಿ ಕಾಯ್ದೆಗೆ ತಂದ ತಿದ್ದುಪಡಿಯನ್ನು  ಪ್ರತಿಭಟಿಸುವುದಕ್ಕಾಗಿ ರೈತರು, ಎಸ್.ಡಿ.ಪಿ.ಐ ಹಾಗೂ ಕನ್ನಡ ಪರ ಕಾರ್ಯಕರ್ತರು ಮತ್ತು ಹಲವು ಸಂಘಟನೆಗಳ ಸದಸ್ಯರು ಟೌನ್ ಹಾಲ್ ಮುಂದೆ ಒಟ್ಟು ಸೇರಿದರು.

ರೈತ ಸಂಘದ ಅಧ್ಯಕ್ಷ ಕೋಡಿ ಹಳ್ಳಿ ಚಂದ್ರಶೇಖರ್, ಎಸ್.ಡಿ.ಪಿ.ಐ ರಾಜ್ಯ ನಾಯಕರಾದ ಅಡ್ವೊಕೇಟ್ ಮಜೀದ್ ಖಾನ್, ಅಬ್ದುಲ್ ಜಲೀಲ್ ಮತ್ತು ಸಲೀಂ ಅಹ್ಮದ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

- Advertisement -

ನೂರಾರು ಮಂದಿ ಪ್ರತಿಭಟನಕಾರರು ಸುಮನಹಳ್ಳಿಯಲ್ಲಿ ಒಟ್ಟು ಸೇರಿದ್ದು, ಅಲ್ಲಿಂದ ಕಾರು ಮತ್ತು ಬೈಕುಗಳ ಮೂಲಕ ಟೌನ್ ಹಾಲ್ ಗೆ ತೆರಳಿದರು.
ರ್ಯಲಿಯ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್.ಡಿ.ಪಿ.ಐ ನಾಯಕ ಅಡ್ವೊಕೇಟ್ ಮಜೀದ್ ಖಾನ್, ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರು, ದಲಿತರು, ಯುವಕರು, ಕಾರ್ಮಿಕರ ವಿರುದ್ಧ ನಿಂತಿವೆ. ಈಗ ತಂದಿರುವಂತಹ ಸುಗ್ರೀವಾಜ್ನೆಗಳು ರೈತರಿಗೆ ಮರಣ ಶಾಸನಗಳಾಗಿವೆ. ಸರಕಾರ ಕೂಡಲೇ ಈ ಸುಗ್ರೀವಾಜ್ನೆಗಳನ್ನು ಹಿಂಪಡೆಯಬೇಕು ಎಂದರು.

“ಸರಕಾರ ಎ.ಪಿ.ಎಂ.ಸಿಗೆ ಮಾಡಿದ ತಿದ್ದುಪಡಿಯನ್ನು ರದ್ದುಗೊಳಿಸಬೇಕು. ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಉತ್ತೇಜಿಸಬೇಕು. ರೈತರ ಭೂಮಿಯನ್ನು ಕಾರ್ಪೊರೇಟ್ ವಲಯಕ್ಕೆ ಮಾರುವಂತಹ ಶಾಸನಗಳನ್ನು ಹಿಂಪಡೆಯಬೇಕು” ಎಂದು ನುಡಿದರು.

ಕೋಡಿಹಳ್ಳಿ ಚಂದ್ರಶೇಖರ್ ರವರು ಕೆ.ಆರ್. ಪುರಂ ನಿಂದ ಟೌನ್ ಹಾಲ್ ಗೆ ರ್ಯಾಲಿಯನ್ನು ಕೊಂಡೊಯ್ಯಲು ಪ್ರಯತ್ನಿಸಿದ್ದು, ಪೊಲೀಸರು ಅವರನ್ನು ತಡೆದಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಪ್ರತಿಭಟನೆಯ ಕಾರಣದಿಂದ ಟೌನ್ ಹಾಲ್ ಸುತ್ತಮುತ್ತ ಫ್ರೀಡಂ ಪಾರ್ಕ್, ಮೈಸೂರು ಬ್ಯಾಂಕ್ ಸರ್ಕಲ್, ಸುಮನಹಳ್ಳಿ, ಮಾಗಡಿ ರಸ್ತೆ, ಕೆ.ಆರ್.ಪುರಂಗಳಲ್ಲಿ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಸುಮಾರು 300 ಮಂದಿಯನ್ನು ಇದುವರೆಗೆ ಪೊಲೀಸರು ಬಂಧಿಸಿದ್ದಾರೆ.

- Advertisement -