ಅಶಾಂತಿ ಸೃಷ್ಟಿಸಲು ಸಂಘಪರಿವಾರ ಷಡ್ಯಂತ್ರ ಆರೋಪ: ಪುತ್ತೂರಿನಲ್ಲಿ SDPI ಪ್ರತಿಭಟನೆ

Prasthutha|

ಪುತ್ತೂರು: ಪುತ್ತೂರಿನಲ್ಲಿ ಅಶಾಂತಿ ಸೃಷ್ಟಿಸಲು ಸಂಘಪರಿವಾರ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿ ಎಸ್ ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ದರ್ಬೆ ವೃತ್ತದ ಬಳಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ಹೇಡಿ ಸಾವರ್ಕರ್, ಬ್ರಿಟಿಷರಿಗೆ ಹೆದರಿದ ಸಾವರ್ಕರ್, ಬೂಟಿಗೆ ಹೆದರಿದ ಸಾವರ್ಕರ್ ಮುಂತಾದ ಘೋಷಣೆ ಕೂಗಲಾಯಿತು.

- Advertisement -

ಎಸ್ ಡಿಪಿಐ ರಾಜ್ಯ ನಾಯಕ ಶಾಫಿ ಬೆಳ್ಳಾರೆ ಮಾತನಾಡಿ, ಕಬಕ ಗ್ರಾಮ ಪಂಚಾಯತ್ ನಲ್ಲಿ ನಡೆದ ಸಣ್ಣ ಘಟನೆಯನ್ನು ಮುಂದಿಟ್ಟುಕೊಂಡು ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ಸಂಘಪರಿವಾರ ಪ್ರಯತ್ನಿಸುತ್ತಿದೆ. ಇದಕ್ಕೆ ಜಿಲ್ಲಾಡಳಿತ ಅವಕಾಶ ನೀಡಬಾರದು. ಕಬಕ ಗ್ರಾಮ ಪಂಚಾಯತ್ ಗೆ ಸಂಬಂಧಿಸಿದ ರಥ ಯಾತ್ರೆಯನ್ನು ಪುತ್ತೂರಿಗೆ ತರುವ ಉದ್ದೇಶ ಏನಿತ್ತು ಎಂಬುದನ್ನು ಪಂಚಾಯತ್ ಅಭಿವೃದ್ಧಿ ಸ್ಪಷ್ಟಪಡಿಸಬೇಕು. ಈ ಎಲ್ಲಾ ಗೊಂದಲಗಳಿಗೆ ಕಾರಣರಾದ ಪಂಚಾಯತ್ ಅಧಿಕಾರಿ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.


ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಾವರ್ಕರ್ ಕೊಟ್ಟ ಕೊಡುಗೆಯಾದರೂ ಏನು? ಎಂದು ಪ್ರಶ್ನಿಸಿದ ಅವರು, ಸಾವರ್ಕರ್ ಬ್ರಿಟಿಷರಿಗೆ ಆರು ಬಾರಿ ಕ್ಷಮಾಪಣೆ ಪತ್ರ ಬರೆದಿದ್ದಾರೆ. ಕ್ಷಮೆ ನೀಡಿದರೆ ಬ್ರಿಟಿಷರ ಪರವಾಗಿ ಕೆಲಸ ಮಾಡುವುದಾಗಿ ಪತ್ರ ಬರೆದು ಜೈಲಿನಿಂದ ಹೊರಬಂದ ಬಳಿಕ ಬ್ರಿಟಿಷರ ಪರವಾಗಿ ಕೆಲಸ ಮಾಡಿದ್ದರು. ಇಂತಹವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆಯಲು ನಾವು ಸಿದ್ಧರಿಲ್ಲ ಎಂದು ಹೇಳಿದರು.

- Advertisement -


ಮಹಾತ್ಮ ಗಾಂಧಿ ಕೊಲೆ ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ಸಾವರ್ಕರ್ ಹೆಸರಿದೆ. ಇಂತಹ ಹೇಡಿಯನ್ನು ಹೀರೋ ಮಾಡಲು ಹೊರಟಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ನಿಮ್ಮ ಪಾತ್ರ ಏನು ಎಂದು ಹೇಳಿದರೆ ಸಂಘಪರಿವಾರದವರ ಬಳಿ ಒಂದೇ ಒಂದು ಹೆಸರು ಇಲ್ಲ. ಆದ್ದರಿಂದ ಆತನನ್ನು ಹೀರೋ ಮಾಡಲು ಮುಂದಾಗಿದ್ದಾರೆ ಎಂದು ಶಾಫಿ ಆರೋಪಿಸಿದರು. ದೇಶ ವಿಭಜನೆಯ ನೋವನ್ನು ಮರೆಯಲು ಸಾಧ್ಯವಿಲ್ಲ ಎಂದು ಇತ್ತೀಚೆಗೆ ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ ದೇಶವನ್ನು ಎರಡು ಭಾಗ ಮಾಡುವಂತೆ ಮೊದಲ ಬಾರಿಗೆ ಪ್ರಸ್ತಾಪ ಇಟ್ಟವರೇ ಸಾವರ್ಕರ್ ಎಂಬುದನ್ನು ಯಾರೂ ಮರೆಯುವಂತಿಲ್ಲ ಎಂದು ಹೇಳಿದರು. ಸಂಘಪರಿವಾರದ ಕಾರ್ಯಕರ್ತರು ಘೋಷಣೆಗಳನ್ನು ಕೂಗುವ ಮೂಲಕ ನಮ್ಮನ್ನು ಹೆದರಿಸಬಹದು ಎಂದು ಭಾವಿಸಿದ್ದರೆ ಅದು ಅವರ ಮೂರ್ಖತನ. ನಾವು ಟಿಪ್ಪು ಸುಲ್ತಾನ್, ವಾರಿಯನ್ ಕುನ್ನತ್ ಮುಂತಾ ವೀರ ಸ್ವಾತಂತ್ರ್ಯ ಹೋರಾಟಗಾರರ ಅನುಯಾಯಿಗಳು. ಫಾಶಿಸ್ಟರ ಎಲ್ಲಾ ಪ್ರತಿರೋಧವನ್ನು ಎದುರಿಸಲು ನಾವು ಸಮರ್ಥರಿದ್ದೇವೆ ಎಂದು ಎಚ್ಚರಿಸಿದರು.

ಎಸ್ ಡಿಪಿಐ ವಲಯ ಸಮಿತಿಯ ಅಬೂಬಕ್ಕರ್ ಸಿದ್ದೀಕ್ ಪುತ್ತೂರು ಮಾತನಾಡಿ, ಒಂದು ಚಿಕ್ಕ ಘಟನೆಯನ್ನು ಇಟ್ಟುಕೊಂಡು ಫ್ಯಾಶಿಸ್ಟ್ ಸಂಘಪರಿವಾರ ಗಲಭೆ ಸೃಷ್ಟಿಸಲು ಮುಂದಾಗಿದೆ. ಇದರ ವಿರುದ್ಧ ಈ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಕಬಕ ಗ್ರಾಮ ಪಂಚಾಯತ್ ನಲ್ಲಿ ಇಬ್ಬರು ಎಸ್ ಡಿಪಿಐ ಬೆಂಬಲಿತ ಸದಸ್ಯರಿದ್ದು, ಸಾಮಾನ್ಯ ಸಭೆಯಲ್ಲಿ ತೀರ್ಮಾನವಾಗದೆ ವಾಹನ ಜಾಥಾದಲ್ಲಿ ಹೇಡಿ ಸಾವರ್ಕರ್ ಫೋಟೋವನ್ನು ಇರಿಸುವ ಮೂಲಕ ಸಮಸ್ಯೆ ಸೃಷ್ಟಿಸಲಾಗಿದೆ. ಸಾವರ್ಕರ್ ಫೋಟೋ ಇದ್ದುದನ್ನು ಕಂಡಾಗ ಎಸ್ ಡಿಪಿಐ ಸದಸ್ಯರು ಸಾವಧಾನದಿಂದಲೇ ಪ್ರಶ್ನಿಸುತ್ತಿದ್ದಾಗ ಅವರ ಮೇಲೆ ವಾಹನ ಹರಿಸಲು ಪ್ರಯತ್ನಿಸಲಾಗಿದೆ. ಈ ಮೂಲಕ ಉದ್ರೇಕಗೊಳಿಸುವ ಯತ್ನ ನಡೆಸಲಾಯಿತು. ಇದು ಅಲ್ಲಿ ನಡೆದ ನೈಜ ಘಟನೆ ಎಂದು ವಿವರಿಸಿದರು.


ಸಾವರ್ಕರ್ ಹೇಡಿ ಎಂದು ನೈಜ ಸ್ವಾತಂತ್ರ್ಯ ಹೋರಾಟಗಾರರು, ಇತಿಹಾಸಕಾರರೇ ಹೇಳಿದ್ದಾರೆ. ಇದನ್ನೇ ಎಸ್ ಡಿಪಿಐ ಕಾರ್ಯಕರ್ತರು ಕೂಡ ಹೇಳಿದ್ದಾರೆ. ಅದರಲ್ಲಿ ಏನು ತಪ್ಪಿದೆ ಎಂದು ಪ್ರಶ್ನಿಸಿದರು. ಎಸ್ ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಇಬ್ರಾಹೀಂ ಸಾಗರ್, ಹಮೀದ್ ಸಾಲ್ಮರ್, ಪ್ರಧಾನ ಕಾರ್ಯದರ್ಶಿ ಅಶ್ರಫ್ ಬಾವ ಮತ್ತಿತರರು ಭಾಗವಹಿಸಿದ್ದರು. ಪೊಲೀಸರಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Join Whatsapp