ಹೊಸದಿಲ್ಲಿ : ದೇಶದ ಪ್ರತಿ ನಾಗರಿಕನಿಗೂ ಉಚಿತವಾಗಿ ಸಿಗುವಂತೆ ದೇಶಾದ್ಯಂತ ಏಕರೂಪದ ಕೋವಿಡ್ -19 ವ್ಯಾಕ್ಸಿನೇಷನ್ ನೀತಿಯನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮೇ 10ರಂದು ಹಿರಿಯ ವಕೀಲರಾದ ಎ. ಸೆಲ್ವಿನ್ ರಾಜಾ ಅವರ ಮೂಲಕ ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ-ಪಿಐಎಲ್ ಸಲ್ಲಿಸಿದೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಉಚಿತ ಮತ್ತು ಏಕರೂಪದ ವ್ಯಾಕ್ಸಿನೇಷನ್ ಪ್ರಕ್ರಿಯೆಯ ನೇರ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಸ್ವತಂತ್ರ ಸಂಸ್ಥೆಯನ್ನು ರಚಿಸುವಂತೆಯೂ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್ಗೆ ಮನವಿ ಮಾಡಲಾಗಿದೆ.
ಸಂವಿಧಾನದ 21ರ ಕಲಂನಡಿಯಲ್ಲಿ, ಭಾರತದ ಪ್ರತಿಯೊಬ್ಬ ವ್ಯಕ್ತಿಯೂ ಉಚಿತವಾಗಿ ಲಸಿಕೆ ಪಡೆಯುವ ಹಕ್ಕನ್ನು ಹೊಂದಿದ್ದಾನೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಸಾಂಕ್ರಾಮಿಕ ರೋಗವು ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಸಕಾಲಿಕ ಚಿಕಿತ್ಸೆ ದೊರೆಯದೆ ಸಾಯುತ್ತಿದ್ದಾರೆ. ಸ್ಮಶಾನಗಳು ಹಗಲು ರಾತ್ರಿ ಕಾರ್ಯಾಚರಿಸುತ್ತಿದ್ದು, ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲು ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಜನರು ಕೋವಿಡ್ ಲಸಿಕೆಯ ಮೇಲೆ ಮಾತ್ರ ಭರವಸೆ ಹೊಂದಿದ್ದಾರೆ. ಆದರೆ, ಲಸಿಕೆ ವೆಚ್ಚ ಅತ್ಯಂತ ದುಬಾರಿಯಾಗಿದ್ದು, ಸರ್ಕಾರ ನಿಗದಿಪಡಿಸಿದ ವಿವಿಧ ತರದ ಬೆಲೆಯನ್ನು ಭರಿಸಲು ಹೆಚ್ಚಿನ ಜನರಿಗೆ ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಬಡವರು ಸೇರಿದಂತೆ ಹೆಚ್ಚಿನ ಜನವರ್ಗಕ್ಕೆ ಉಚಿತವಾಗಿ ಲಸಿಕೆ ನೀಡಿದರೆ, ಅದು ನಾಗರಿಕರಲ್ಲಿ ಪ್ರತಿರೋಧ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.