ಎರಡು ದಿನಗಳ ಎಸ್.ಡಿ.ಪಿ.ಐ ರಾಜ್ಯ ಪ್ರತಿನಿಧಿ ಸಮಾವೇಶಕ್ಕೆ ಬೆಂಗಳೂರಿನಲ್ಲಿ ಚಾಲನೆ

Prasthutha|

► ಸಂಘಪರಿವಾರದ ವಿರುದ್ಧ ಎಸ್ ಡಿಪಿಐನಿಂದ ಸೈದ್ಧಾಂತಿಕ ಹೋರಾಟ; ಎಂ.ಕೆ.ಫೈಝಿ

- Advertisement -

ಬೆಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -ಎಸ್.ಡಿ.ಪಿ.ಐನ ಎರಡು ದಿನಗಳ ರಾಜ್ಯ ಪ್ರತಿನಿಧಿ ಸಭೆಗೆ ಬೆಂಗಳೂರಿನಲ್ಲಿ ಶನಿವಾರ ಚಾಲನೆ ದೊರೆತಿದ್ದು, ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಪಾಲ್ಗೊಂಡಿದ್ದಾರೆ.

- Advertisement -

ಪಕ್ಷದ ರಾಷ್ಟ್ರಿಯ ಅಧ್ಯಕ್ಷ  ಎಮ್. ಕೆ. ಫೈಝಿ, ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್, ರಾಷ್ಟ್ರೀಯ ನಾಯಕರಾದ ಇಲ್ಯಾಸ್ ಮುಹಮ್ಮದ್ ತುಂಬೆ, ಅಬ್ದುಲ್ ಮಜೀದ್ ಮೈಸೂರು ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದಾರೆ.

ಎಸ್ ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಮೋದಿ-ಶಾ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಪ್ರಮುಖ ಪ್ರತಿಪಕ್ಷಗಳು ಧ್ವನಿ ಎತ್ತದೆ ಮೌನವಾಗಿದ್ದು, ಸರ್ಕಾರದ ದುಷ್ಟ ಅಜೆಂಡಾಗಳಿಗೆ ಪರೋಕ್ಷವಾಗಿ ಬೆಂಬಲ ಸೂಚಿಸುತ್ತಿವೆ. ಇಂತಹ ಸಂದರ್ಭದಲ್ಲಿ ಎಸ್ ಡಿಪಿಐ ಮಾತ್ರ ಸಂಘಪರಿವಾರ ನೇತೃತ್ವದ ಸರ್ಕಾರದ ವಿರುದ್ಧ ಸೈದ್ಧಾಂತಿಕವಾಗಿ ಹೋರಾಟ ನಡೆಸುತ್ತಿದೆ ಎಂದು ಹೇಳಿದರು.

ನೋಟು ಅಮಾನ್ಯೀಕರಣ, ಜಿಎಸ್ ಟಿಯಿಂದ ದೇಶದ ಅರ್ಥವ್ಯವಸ್ಥೆ ಹದಗೆಟ್ಟಿದ್ದು, ಬಿಜೆಪಿ ಸರ್ಕಾರ ದೇಶದ ಆಸ್ತಿಗಳ ಮಾರಾಟದಲ್ಲಿ ತೊಡಗಿದೆ. ದೇಶದ ಸಾರ್ವಜನಿಕ ವಲಯದ ಬ್ಯಾಂಕ್ ಗಳಿಂದ ಮಿಲಿಯನ್ ಗಟ್ಟಲೆ ಸಾಲ ಮಾಡಿ ಮಲ್ಯ ಮತ್ತಿತರ ಮೋದಿಯ ಆಪ್ತರು ಪರಾರಿಯಾಗಿದ್ದಾರೆ. ಬ್ರಾಹ್ಮಣ್ಯ ರಾಷ್ಟ್ರ ನಿರ್ಮಿಸುವ ಯತ್ನ ತೀವ್ರಗತಿಯಲ್ಲಿ ನಡೆಯುತ್ತಿದೆ. ತ್ರಿವಳಿ ತಲಾಖ್ ಮಸೂದೆ ತಂದು ಮುಸ್ಲಿಮ್ ಮಹಿಳೆಯರ ಹಕ್ಕುಗಳ ಸಂರಕ್ಷಣೆ ಎಂಬ ಸುಂದರ ಹೆಸರಿಡಲಾಗಿದೆ. ಈ ಬಗ್ಗೆ ಮುಸ್ಲಿಮರು ಧ್ವನಿ ಎತ್ತಲಿಲ್ಲ. ನಂತರ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದು ಮಾಡಲಾಯಿತು. ರಾಜ್ಯದ ಸ್ಥಾನಮಾನ ನೀಡುವುದಾಗಿ ಹೇಳಿ ಇದುವರೆಗೆ ನೀಡಿಲ್ಲ. ಕಾಶ್ಮೀರವನ್ನು ಎರಡು ವಿಭಜನೆ ಮಾಡಿ ಕೇಂದ್ರದ ಅಧೀನದಲ್ಲಿ ತರಲಾಯಿತು. ಕಾಶ್ಮೀರವನ್ನು ನರಕಸದೃಶವಾಗಿ ಮಾಡಲಾಯಿತು. ಇಷ್ಟೆಲ್ಲಾ ನಡೆಯುತ್ತಿದ್ದರೂ ದೇಶದ ಇತರ ಪಕ್ಷಗಳು ಧ್ವನಿ ಎತ್ತದೆ ದಿವ್ಯ ಮೌನಕ್ಕೆ ಶರಣಾಗಿವೆ ಎಂದು ಆರೋಪಿಸಿದರು.

ರೈತ ವಿರೋಧಿ ಕೃಷಿ ಕಾಯ್ದೆ ವಿರುದ್ಧ ಕಳೆದ 11 ತಿಂಗಳುಗಳಿಂದ ರೈತರು ದೆಹಲಿಯ ಗಡಿಗಳಲ್ಲಿ  ಕುಳಿತು ಹೋರಾಟ ಮಾಡುತ್ತಿದ್ದಾರೆ. ಅವಕಾಶವಂಚಿತ ಜನಸಮುದಾಯಗಳು ವಿಶೇಷವಾಗಿ ಮುಸ್ಲಿಮರು, ದಲಿತರು ಸಂಕಷ್ಟದಲ್ಲಿದ್ದಾರೆ. ಎನ್ ಆರ್ ಸಿ ಜಾರಿಗೆ ತಂದು ದೇಶದ ಮುಸ್ಲಿಮರ ಪೌರತ್ವ ರದ್ದುಗೊಳಿಸುವ ಸಂಚು ನಡೆಯುತ್ತಿದೆ. ಬಿಜೆಪಿ ಬೆಂಬಲಿತ ಗೂಂಡಾಗಳು ದೇಶದೆಲ್ಲೆಡೆ ಅಶಾಂತಿ ಸೃಷ್ಟಿಸುತ್ತಿದ್ದಾರೆ. ತ್ರಿಪುರದಲ್ಲಿ ದೊಡ್ಡ ಮಟ್ಟದಲ್ಲಿ ಹಿಂಸಾಚಾರ ನಡೆದಿದೆ. ಅಲ್ಲಿಗೆ ಭೇಟಿ ನೀಡಿದ್ದ ಸತ್ಯಶೋಧನಾ ತಂಡದ ಸ್ವತಂತ್ರ ವ್ಯಕ್ತಿಗಳ ವಿರುದ್ಧ ಕರಾಳ ಕಾನೂನು ಯುಎಪಿಎ ಹಾಕಲಾಗಿದೆ.

ಮಧ್ಯಪ್ರದೇಶದ ಉಜ್ಜಯಿನಿ ಎಂಬಲ್ಲಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಪ್ರಚೋದನಾಕಾರಿ ಅಂಶವಿದೆ ಎಂಬ ನೆಪದಲ್ಲಿ ಸುಳ್ಳು ದೂರು ದಾಖಲಿಸಲಾಗಿದೆ. ಹಿಂಸೆಯ ವಿರುದ್ಧ ಹೇಳಿಕೆ ನೀಡಿದರೆ, ಸಂತ್ರಸ್ತರಿಗೆ ಸಾಂತ್ವನ ಹೇಳಲು ಭೇಟಿ ನೀಡಿದರೆ ಕೇಸು ದಾಖಲಾಗುತ್ತದೆ. ಸಂತ್ರಸ್ತರನ್ನೇ ಅಪರಾಧಿಗಳನ್ನಾಗಿ ಮಾಡಲಾಗುತ್ತಿದೆ. ಅಪರಾಧಿಗಳನ್ನು ರಕ್ಷಿಸಲಾಗುತ್ತಿದೆ. ಹತ್ರಾಸ್ ನಲ್ಲಿ  ತೀರಾ ಅಮಾನವೀಯವಾಗಿ ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರವೆಸಗಿ ಕೊಲ್ಲಲಾಯಿತು. ಈ ಬಗ್ಗೆ ಧ್ವನಿ ಎತ್ತಿದವರ ಮೇಲೆ ಸುಳ್ಳು ಕೇಸು ಜಡಿದು ಜೈಲಿಗಟ್ಟಲಾಯಿತು ಎಂದು ಎಂ.ಕೆ.ಫೈಝಿ ಹೇಳಿದರು.

ಕ್ರೈಸ್ತರ ವಿರುದ್ಧವೂ ಕರ್ನಾಟಕ ಸಹಿತ ಹಲವು ರಾಜ್ಯಗಳಲ್ಲಿ ದೌರ್ಜನ್ಯ ನಡೆಯುತ್ತಿದೆ. ಮತಾಂತರದ ಹೆಸರಿನಲ್ಲಿ ಚರ್ಚ್ ಗಳ ಮೇಲೆ ದಾಳಿ ನಡೆಸಲಾಗಿದೆ. ದಲಿತರ ಮೇಲೆ ಅತ್ಯಾಚಾರ, ಕೊಲೆ ನಿರಂತರವಾಗಿ ನಡೆಯುತ್ತಿದೆ. ಇನ್ನೊಂದೆಡೆ ಸರಕಾರಿ ಹುದ್ದೆಗಳಲ್ಲಿ ಮೀಸಲಾತಿ ಕಡಿತಗೊಳಿಸಲಾಗುತ್ತಿದೆ. ಖಾಸಗೀಕರಣದ ಮೂಲಕ ಮೀಸಲಾತಿ ರದ್ದುಗೊಳಿಸಲಾಗುತ್ತಿದೆ. ಇವೆಲ್ಲವೂ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದರು.

ನೂತನ ಶಿಕ್ಷಣ ವ್ಯವಸ್ಥೆಯ ಮೂಲಕ ಜಾತಿವಾದಿ ಚಾತುರ್ವರ್ಣ ನೀತಿ ತರಲು ಯತ್ನಿಸಲಾಗುತ್ತಿದೆ. ಜಾತಿ ಆಧಾರಿತ ಕುಲ ಕಸುಬುಗಳಿಗೆ ಸೀಮಿತಗೊಳಿಸುವ ಹುನ್ನಾರ ಇದರ ಹಿಂದೆ ಅಡಗಿದೆ. ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ದೇಶದ ಎಲ್ಲಾ ಜನ ಸಮುದಾಯಗಳು ತೊಂದರೆಯಲ್ಲಿವೆ. ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ಬೆಲೆ ಏರಿಕೆಯಿಂದ ಕೇವಲ ದಲಿತ, ಮುಸ್ಲಿಮರಿಗೆ ಮಾತ್ರವಲ್ಲ ಇಡೀ ದೇಶದ ಜನರಿಗೆ ತೊಂದರೆಯಾಗಿದೆ. ಅದಾನಿ, ಅಂಬಾನಿ ಸಹಿತ ಕಾರ್ಪೊರೇಟ್ ಕಂಪನಿಗಳಿಗೆ ಮಾತ್ರ ಮೋದಿ ಸರ್ಕಾರದ ನೀತಿಗಳಿಂದ ಲಾಭವಾಗಿದೆ. ದೇಶದ ಭೂಮಿ, ಆಕಾಶ, ರೈಲು, ವಿಮಾನ ನಿಲ್ದಾಣ, ಒಂದೊಂದಾಗಿ ಮಾರಾಟ ಮಾಡಲಾಗುತ್ತಿದೆ. ಮೋದಿ-ಬಿಜೆಪಿ ದೇಶವನ್ನು ಮತ್ತೆ ಬ್ರಿಟಿಷರಿಗೆ ಕೊಟ್ಟರೂ ಆಶ್ಚರ್ಯವಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಹೊಸದಾಗಿ ಕೇಂದ್ರದಿಂದ ಹೊರಡಿಸಿರುವ ಸುತ್ತೋಲೆ ಪ್ರಕಾರ, ಸ್ಥಳೀಯ ಮೈದಾನ, ನಿಲ್ದಾಣ, ಪಾರ್ಕ್ ಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ 11 ಲಕ್ಷ ಕೋಟಿ ರೂ.ಸಂಗ್ರಹಿಸುವ ಗುರಿ ನೀಡಲಾಗಿದೆ. ಸಂಘಿಗಳು ಕಾಶ್ಮೀರದಲ್ಲಿ ಹೋಗಿ ಆಸ್ತಿ ಖರೀದಿಸಬಹುದೆಂದು ಖುಷಿ ಪಟ್ಟಿದ್ದರು. ವಾಸ್ತವದಲ್ಲಿ ಅವರಿಗೆ ತನ್ನ ಸ್ವಂತ ಊರಿನಲ್ಲಿ ಜಮೀನು ಖರೀದಿಸಲು ಸಾಧ್ಯವಿಲ್ಲ. ಕಾರ್ಪೋರೇಟ್ ಕಂಪೆನಿಗಳು ಆಸ್ತಿ ಖರೀದಿಸಲು ಯತ್ನಿಸುತ್ತಿವೆ. ಸಿಬಿಐ, ಎನ್ಐಎ, ಇಡಿ, ನಾರ್ಕೋಟಿಕ್ ಸೆಲ್ ಸರ್ಕಾರಿ ಏಜೆನ್ಸಿಗಳ ದುರುಪಯೋಗ ಮಾಡಿ ಒಕ್ಕೂಟ ವ್ಯವಸ್ಥೆ ದುರ್ಬಲಗೊಳಿಸುವ ಹುನ್ನಾರ ನಡೆಯುತ್ತಿದೆ. ರಾಜ್ಯಗಳ ಅಧಿಕಾರ, ತೆರಿಗೆ ಪಾಲು ಕಸಿಯಾಗುತ್ತಿದೆ. ಈ ಎಲ್ಲಾ ಜನವಿರೋಧಿ ಕುಕೃತ್ಯಗಳು ಹಾಡಹಗಲೇ ನಡೆಯುತ್ತಿದ್ದರೂ ಜಾತ್ಯತೀತವಾದಿ ಪ್ರತಿಪಕ್ಷಗಳು ಮೌನವಾಗಿರುವುದು ಆಶ್ಚರ್ಯಕರವಾಗಿದೆ. ಈ ಎಲ್ಲಾ ಪರೋಕ್ಷವಾಗಿ ಸಂಘಪರಿವಾರದ ನೀತಿಗಳಿಗೆ ಬೆಂಬಲಿಗರಂತೆ ಕಂಡುಬರುತ್ತಿದೆ. ಈ ಪಕ್ಷಗಳು ಮೃದು ಹಿಂದುತ್ವ ನೀತಿ ಅನುಸರಿಸುತ್ತಿದೆ. ಅರವಿಂದ ಕೇಜ್ರಿವಾಲ್ ಅಯೋಧ್ಯೆ ರಾಮಮಂದಿರ ಭೇಟಿ ನೀಡಿದರು. ದೆಹಲಿ ಜನತೆಗೆ ಉಚಿತ ಅಯೋಧ್ಯೆ ಪ್ರಯಾಣದ ಬಗ್ಗೆ ಹೇಳಿಕೆ ನೀಡಿದ್ದಾರೆ. ಬಾಬರಿ ಮಸೀದಿ ನೆಲಸಮ ಮಾಡಿ ಕಟ್ಟಲಾಗುತ್ತಿರುವ ಮಂದಿರದ ಭೇಟಿಗಾಗಿ ಕೇಜ್ರಿವಾಲ್ ಈ ಯೋಜನೆ ಹಾಕಿಕೊಂಡಿದ್ದಾರೆ. ಈ ಮೂಲಕ ಹಿಂದುತ್ವವಾದ ಎದುರು ಮೃದು ಹಿಂದುತ್ವವನ್ನು ಮುನ್ನೆಲೆಗೆ ತಂದಿದ್ದಾರೆ ಎಂದರು.

ಕೇಂದ್ರದ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳನ್ನು ದೇಶದ 14 ರಾಜ್ಯಗಳಲ್ಲಿ ಎಸ್ ಡಿಪಿಐ ಬೀದಿ ಹೋರಾಟ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಕೇವಲ ಸಂಘಪರಿವಾರ ಮತ್ತು ಎಸ್ ಡಿಪಿಐ ನಡುವೆ ಮಾತ್ರ ಸೈದ್ಧಾಂತಿಕ ಹೋರಾಟ ನಡೆಯಲಿದೆ. ಎಸ್ ಡಿಪಿಐ ಧ್ವನಿ ಇಲ್ಲದ ಜನ ಸಮುದಾಯಗಳ ಧ್ವನಿಯಾಗಿದೆ. ಪಕ್ಷದ ಕಾರ್ಯಕರ್ತರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಸಂಘಪರಿವಾರಕ್ಕೆ ಎಸ್ ಡಿಪಿಐ ಶಕ್ತಿಯ ಬಗ್ಗೆ ಅರಿವಾಗಿದೆ. ಮೋದಿ, ಅಮಿತ್ ಶಾ, ಯೋಗಿ ಹೆಸರಲ್ಲಿ ಕೆಲವರು ನಮ್ಮನ್ನು ಭಯಪಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಎಸ್ ಡಿಪಿಐಗೆ ಯಾವ ಭಯವೂ ಇಲ್ಲ. ಎಲ್ಲಾ ರೀತಿಯ ಅನ್ಯಾಯಗಳ ವಿರುದ್ಧ ಪಕ್ಷ ಧ್ವನಿ ಎತ್ತುತ್ತಿದೆ. ಯೋಗಿ, ಮೋದಿ, ಅಮಿತ್ ಶಾ ಆಗಾಗ ಎಸ್ ಡಿಪಿಐ ಹೆಸರೆತ್ತುತ್ತಿದ್ದಾರೆ. ಅವರಿಗೂ ಪಕ್ಷದ ಶಕ್ತಿ ಸಾಮರ್ಥ್ಯದ ಬಗ್ಗೆ ಅರಿವಾಗಿದೆ. ಜಗತ್ತಿನ ಇತಿಹಾಸದಲ್ಲಿ ಎಲ್ಲಾ ಸಮುದಾಯದಲ್ಲೂ ದುಷ್ಟ ಜನರಿದ್ದರು. ಅವರನ್ನು ಎದುರಿಸಲು ಸಜ್ಜನರೂ ಬಂದಿದ್ದರು. ನಮ್ಮ ಹಲವು ನಿರಪರಾಧಿಗಳ ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸು ಹಾಕಿ ಬಂಧಿಸಲಾಗಿದೆ. ನಾವು ಒಂಟಿಯಲ್ಲ, ನಮ್ಮೊಂದಿಗೆ ದೊಡ್ಡ ಸಮೂಹವಿದೆ. ಜನರ ಬೆಂಬಲವಿದೆ ಎಂದು ಎಂ.ಕೆ.ಫೈಝಿ ಹೇಳಿದರು.

ಕರ್ನಾಟಕದಲ್ಲಿ ಚುನಾವಣೆ ಮೂಲಕ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದರು.

ಚುನಾವಣೆ ಉಸ್ತುವಾರಿಗಳಾಗಿ ರಾಷ್ಟ್ರೀಯ ಉಪಾಧ್ಯಕ್ಷ ದಹ್ಲಾನ್ ಬಾಖವಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಫಿ   ರಾಷ್ಟ್ರೀಯ ಸಮಿತಿ ಸದಸ್ಯ ಮಜೀದ್ ಫೈಝಿ ಮತ್ತು ರಾಜ್ಯ, ರಾಷ್ಟ್ರ ಮತ್ತು ಜಿಲ್ಲಾ ನಾಯಕರು ಉಪಸ್ಥಿತರಿದ್ದರು.



Join Whatsapp