ಕೋಮುವಾದ-ನಕಲಿ ಜಾತ್ಯತೀತತೆಯ ರಾಜಕಾರಣದ ಮಧ್ಯೆ ಒಂದೇ ಪರ್ಯಾಯ ಎಸ್.ಡಿ.ಪಿ.ಐ: ಅಫ್ಸರ್ ಕೊಡ್ಲಿಪೇಟೆ

Prasthutha|

ಭಟ್ಕಳ: ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ 2023ರ ಕಾವೇರುತ್ತಿದೆ. ಸ್ವತಂತ್ರ ಭಾರತದಲ್ಲಿ ಹಲವು ಚುನಾವಣೆಗಳು ಬಂದು ಹೋಗಿವೆ. ನಾವು ಮತ ಕೊಟ್ಟು ಗೆಲ್ಲಿಸಿದ ವಿವಿಧ ಪಕ್ಷಗಳ ಶಾಸಕರು ಗೆದ್ದು ಬಂದಿದ್ದಾರೆ ಹೋಗಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆ.ಡಿ.ಎಸ್ ಪಕ್ಷಗಳ‌ ಸರ್ಕಾರಗಳು ಬಂದಿವೆ ಹೋಗಿವೆ. ಆದರೇ, ಜನರ ಸಮಸ್ಯೆಗಳು ಮಾತ್ರ ಇನ್ನೂ ಹಾಗೆಯೇ ಜೀವಂತವಾಗಿವೆ ಎಂದು ಎಸ್’ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ.

- Advertisement -

 ಭಟ್ಕಳದಲ್ಲಿ ಬಿಜೆಪಿ ಶಾಸಕ ಸುನೀಲ ನಾಯ್ಕ ಕಳೆದ ಬಾರಿ ಕೇವಲ ಕೋಮುವಾದದ ವಿಷದ ಮೇಲೆ ಚುನಾವಣೆ ಗೆದ್ದಿದ್ದಾರೆ. ಅಭಿವೃದ್ಧಿ ಎಂಬುದು ಭೂತಗನ್ನಡಿ ಹಿಡಿದು ಹುಡುಕಿದರೂ ಕಾಣಲು ಸಿಗುವುದಿಲ್ಲ.  ಬಿಜೆಪಿಯದು ಈ ಸ್ಥಿತಿಯಾದರೆ ಇನ್ನು ಕಾಂಗ್ರೆಸ್ ಒಡೆದ ಮನೆಯಾಗಿದೆ. ದಿನಬೆಳಗಾದರೆ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುವುದರಲ್ಲೇ ವರ್ಷ ಕಳೆಯುತ್ತಾರೆ. ಸ್ಥಳೀಯ ಮುಖಂಡ ಮಂಕಾಳ ವೈದ್ಯ ಅವರು ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿರುವುದಿಲ್ಲ ಎಂಬ ಆರೋಪ ದೊಡ್ಡ ಮಟ್ಟದಲ್ಲಿದೆ. ಇಲ್ಲಿನ ಎರಡೂ ರಾಷ್ಟ್ರೀಯ ಪಕ್ಷಗಳ ಈ ಸ್ಥಿತಿಯಿಂದ ಇಲ್ಲಿನ ಜನ ಬೇಸತ್ತಿದ್ದಾರೆ. ಈ ಬಾರಿ ಬದಲಾವಣೆಗೆ ಕಾಯುತ್ತಿದ್ದಾರೆ ಎಂದು ಅಫ್ಸರ್ ಕೊಡ್ಲಿಪೇಟೆ ಹೇಳಿದರು.

ಎಸ್‌’ಡಿಪಿಐ ವತಿಯಿಂದ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಪ್ರಸ್ತಾವನೆ ರಾಜ್ಯ ಸಮಿತಿಗೆ ಬಂದಿದೆ. ಈ ಕ್ಷೇತ್ರಕ್ಕೆ ಅಭ್ಯರ್ಥಿಯ ಆಯ್ಕೆ ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಅಭ್ಯರ್ಥಿಯನ್ನು ಘೋಷಣೆ ಮಾಡುವುದಾಗಿ ತಿಳಿಸಿದರು. ಈಗಾಗಲೇ ಎರಡು ಹಂತಗಳಲ್ಲಿ ಹತ್ತೊಂಬತ್ತು ಕ್ಷೇತ್ರಗಳ ಅಭ್ಯರ್ಥಿಗಳನ್ನು ರಾಷ್ಟ್ರೀಯ ಅಧ್ಯಕ್ಷರು ಘೋಷಿಸಿದ್ದಾರೆ ಮತ್ತು ಆ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಬಿರುಸಿನಿಂದ ನಡೆಯುತ್ತಿದೆ ಎಂದು ಅವರು ತಿಳಿಸಿದರು.

- Advertisement -

ಎಸ್‌’ಡಿಪಿಐ ಎಲ್ಲರನ್ನೂ ಸಮಾನವಾಗಿ ಕಾಣುವ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಭರವಸೆ ನೀಡುತ್ತದೆ. ನಮ್ಮ ಪಕ್ಷ ಅಧಿಕಾರ ನಡೆಸುತ್ತಿರುವ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಆಡಳಿತವನ್ನು ಗಮನಿಸಿದರೆ ಅದು ನಿಮಗೆ ಸ್ಪಷ್ಟವಾಗುತ್ತದೆ ಎಂದು ಅಫ್ಸರ್ ತಿಳಿಸಿದರು.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‌’ಡಿಪಿಐ ಕಾರ್ಯದರ್ಶಿ ಅಶ್ರಫ್ ಮಾಚಾರ್ ಮಾತನಾಡಿ, ಭ್ರಷ್ಟಾಚಾರ, ಕೋಮುವಾದ, ಜಾತಿವಾದ ಮತ್ತು ಸಾಮಾಜಿಕ ಅಸಮಾನತೆಗಳು ಇಂದಿಗೂ ತಾಂಡವಾಡುತ್ತಿವೆ. ಇವು ಜನರನ್ನು ನಿತ್ಯ ಕೊಲ್ಲುತ್ತಿವೆ. ಜನರ ತೆರಿಗೆ ಹಣ ನಿರಂತರ ಲೂಟಿಯಾಗುತ್ತಿದೆ. ಜಾತಿ ಬಲ, ಹಣ ಬಲ, ತೋಳ್ಬಲಗಳ ಮೆರೆದಾಟದಲ್ಲಿ ಜನರನ್ನು ಹೆದರಿಸಿ, ಬೆದರಿಸಿ ಆತಂಕದ ಬೆಂಕಿಯಲ್ಲಿ ಬೇಯಿಸಲಾಗುತ್ತಿದೆ.  ಇದನ್ನು ತಡೆಯಲು, ಶುದ್ಧ ರಾಜಕಾರಣ ಮಾಡಲು, ಬಾಬಾ ಸಾಹೇಬ್ ಅಂಬೇಡ್ಕರ್‌’ರವರ ಸಂವಿಧಾನವನ್ನು ನಿಜ ಅರ್ಥದಲ್ಲಿ ಜಾರಿ ಮಾಡಲು, ಎಲ್ಲರಿಗೂ ಸಮಾನ ಅವಕಾಶದ ಜೊತೆಗೆ ಭ್ರಷ್ಟಾಚಾರದಿಂದ ಮುಕ್ತವಾದ ಸಮಾಜವನ್ನು ಕಟ್ಟಲು, ಜನಪರವಾದ ಪ್ರಾಮಾಣಿಕ ಮತ್ತು ನಿಸ್ವಾರ್ಥ ಮನಸ್ಸಿನ ಶಾಸಕರುಗಳನ್ನು ನಾವು ಆಯ್ಕೆ ಮಾಡಬೇಕಾಗಿದೆ ಎಂದು ತಿಳಿಸಿದರು.

SDPI ಪಕ್ಷ ಕಳೆದ 13 ವರ್ಷಗಳಿಂದ ದೇಶದ 20 ರಾಜ್ಯಗಳಲ್ಲಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ SDPI ನ  300ಕ್ಕೂ ಹೆಚ್ಚು ಸ್ಥಳೀಯ ಜನಪ್ರತಿನಿಧಿಗಳು ಜನ ಸೇವೆಯಲ್ಲಿ ತೊಡಗಿದ್ದಾರೆ. ಎಲ್ಲಾ ಜಾತಿ ಧರ್ಮದವರಲ್ಲಿ ಯಾವ ಭೇದವೆಣಿಸದೆ ನಿಷ್ಪಕ್ಷಪಾತವಾಗಿ‌ ಜನಸೇವೆಯಲ್ಲಿ ನಿರತರಾಗಿದ್ದಾರೆ ಎಂದು ಅವರು ಹೇಳಿದರು.

Join Whatsapp