ಬೆಂಗಳೂರು: ಮೈಸೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಆರಾಧನಾಲಯಗಳ ಧ್ವಂಸ ಕಾರ್ಯಕ್ಕೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ನೇರಹೊಣೆ. ಯಾವುದೇ ಧರ್ಮದ ಆರಾಧನಾ ಕೇಂದ್ರಗಳನ್ನು ಧ್ವಂಸ ಮಾಡುವ ಸಂಸ್ಕೃತಿ ನಮ್ಮ ದೇಶದ್ದಲ್ಲ ಬದಲಾಗಿ ಮಂದಿರ,ಮಸೀದಿ, ಚರ್ಚ್‌ಗಳನ್ನು ಕೆಡುವುದರ ಮೊದಲು ಅಕ್ರಮವಾಗಿ ಕಟ್ಟಿದ ಕಟ್ಟಡಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆ ಮತ್ತು ವಕ್ಫ್ ಇಲಾಖೆಯಿಂದ ಕಬಳಿಕೆ ಮಾಡಿರುವ ಆಸ್ತಿಗಳ ಬಗ್ಗೆ ಕ್ರಮ ಕೈಗೊಳ್ಳದ ಭಾ.ಜ.ಪ ಸರಕಾರ ಜನರ ಭಾವನೆಗಳನ್ನು ಧ್ವಂಸ ಮಾಡುತ್ತಿದೆ. ಈ ದೇಶದ ಸಂಸ್ಕೃತಿ ಶಾಂತಿ, ಸೌಹಾರ್ದತೆಯಿಂದ ಕೂಡಿದೆ. ಮುಂದೆ ಯಾವುದೇ ಕಾರಣಕ್ಕೂ ದೇವಸ್ಥಾನಗಳು, ಮಸೀದಿ, ಚರ್ಚ್‌ಗಳನ್ನು ತೆರವುಗೊಳಿಸಬಾರದು, ಇದನ್ನು ಮುಂದುವರಿಸಿದರೆ ಸರ್ಕಾರದ ವಿರುದ್ಧ ಜನಾಂದೋಲನ ಮಾಡಬೇಕಾಗುತ್ತದೆ’ ಎಂದು ಅಪ್ಸರ್ ಕೊಡ್ಲಿಪೇಟೆ ಎಚ್ಚರಿಸಿದ್ದಾರೆ.
ರಾಜ್ಯ ಸರ್ಕಾರ ಮತ್ತು ಮೈಸೂರು ಜಿಲ್ಲಾಡಳಿತ ಯಾವುದೇ ಮುನ್ಸೂಚನೆ ನೀಡದೆ ದೇವಸ್ಥಾನಗಳನ್ನು ಏಕಾಏಕಿ ತೆರವುಗೊಳಿಸುತ್ತಿರುವುದು ಖಂಡನೀಯ. ಸುಪ್ರೀಂ ಕೋರ್ಟ್ ತೀರ್ಪಿನ ಕಾರಣದಿಂದ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ನೆಪವೊಡ್ಡಿ ದೇವಸ್ಥಾನಗಳನ್ನು ತೆರವು ಗೊಳಿಸುತ್ತಿರುವುದು ಸರಿಯಲ್ಲ. ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ಆರಾಧನಾ ಕೇಂದ್ರಗಳನ್ನು ಸಂರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.