ಕೃಷಿ ಕಾಯ್ದೆ ಹಿಂಪಡೆಯುವವರೆಗೂ ದೃಢವಾದ ಹೋರಾಟ ನಡೆಸಿದ ರೈತರಿಗೆ ಅಭಿನಂದನೆ ಸಲ್ಲಿಸಿ ಪ್ರದರ್ಶನ ನಡೆಸಿದ SDPI

Prasthutha|

ಮಂಗಳೂರು: ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ದೃಢವಾದ ಹೋರಾಟ ನಡೆಸಿದ ರೈತರಿಗೆ ಅಭಿನಂದನೆ ಸಲ್ಲಿಸಿ ಹಾಗೂ ಪ್ರಧಾನಿ ನರೇಂದ್ರ ಮೋದಿ ರೈತರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಶುಕ್ರವಾರ ಮಂಗಳೂರಿನಲ್ಲಿ ಪ್ರದರ್ಶನ ನಡೆಸಿದರು.

- Advertisement -

ಇದೇ ವೇಳೆ ಕಾರ್ಯಕರ್ತರು ಸಿಹಿ ತಿಂಡಿ ವಿತರಿಸಿ, ಘೋಷಣೆ ಕೂಗಿದರು.

  ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಮಾತನಾಡಿ, ಫ್ಯಾಶಿಸ್ಟ್ ಸರಕಾರದ ಪತನ ಪ್ರಾರಂಭವಾಗಿದೆ. ಸರ್ವಾಧಿಕಾರದಿಂದ ಕೈಗೊಂಡ ತೀರ್ಮಾನಗಳು ಒಕ್ಕೂಟ ಸರ್ಕಾರಕ್ಕೆ ಮುಳುವಾಗಿ ಪರಿಣಮಿಸಿವೆ. ಕಳೆದ ಒಂದು ವರ್ಷದ ಅನ್ನದಾತನ ಹೋರಾಟದಲ್ಲಿ 750 ರೈತರು ಹುತಾತ್ಮರಾಗಿದ್ದಾರೆ. ಕೇಂದ್ರ ಸರಕಾರಕ್ಕೆ ರೈತರ ಪರ ನೈಜ ಕಾಳಜಿ ಇದ್ದರೆ ಹುತಾತ್ಮರಾದ ರೈತ ಕುಟುಂಬಗಳಿಗೆ ಅವರ ಜೀವನಾಧಾರಕ್ಕಾಗಿ ಪರಿಹಾರ ಘೋಷಿಸಬೇಕು. ಒಕ್ಕೂಟ ಸರಕಾರ ಸುಗ್ರೀವಾಜ್ಞೆ ಮುಖಾಂತರ ಜಾರಿಗೆ ತಂದ ಪ್ರಥಮ ದಿನದಂದೇ ಕಾಯ್ದೆಯನ್ನು ವಿರೋಧಿಸಿ ಎಸ್ ಡಿಪಿಐ ಹೋರಾಟ ನಡೆಸಿದೆ ಎಂದು ಹೇಳಿದರು.

- Advertisement -

ಪ್ರತಿಭಟನೆಯ ನೇತೃತ್ವವನ್ನು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.

ರಾಜ್ಯ ಸಮಿತಿ ಸದಸ್ಯ ಜಲೀಲ್ ಕೆ, ಜಿಲ್ಲಾ ಸಮಿತಿ ಸದಸ್ಯರಾದ ಅಶ್ರಫ್ ಕೆಸಿರೋಡ್, ಝಕೀರ್ ಉಳ್ಳಾಲ್, ಕಾದರ್ ಫರಂಗಿಪೇಟೆ,  ಮೂಡಬಿದ್ರೆ ಕ್ಷೇತ್ರ ಅಧ್ಯಕ್ಷ ಆಸಿಫ್ ಕೋಟೆಬಾಗಿಲು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಯೂಸುಫ್ ಆಲಡ್ಕ ಧನ್ಯವಾದಗೈದರು ಅಕ್ಬರ್ ಕುದ್ರೋಳಿ ನಿರೂಪಿಸಿದರು.

Join Whatsapp