ಮಂಜೇಶ್ವರ : ಕಾಸರಗೋಡು ಹಾಗೂ ಆಸುಪಾಸಿನ ಗಡಿ ಪ್ರದೇಶದ ನಾಗರಿಕರು ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಹಾಗೂ ಇನ್ನಿತರ ಆವಶ್ಯಕತೆಗಳಿಗೆ ಉಪಯೋಗಿಸುವ ಮಂಗಳೂರಿನ ವಿಮಾನ ನಿಲ್ದಾಣದ ಅಧಿಕಾರಿಗಳು ತಪಾಸಣೆ ನೆಪದಲ್ಲಿ ಪ್ರಯಾಣಿಕರಿಗೆ ತೊಂದರೆ ಕೊಡುವ ಚಾಳಿಯನ್ನು ಮುಂದುವರಿಸಿದ್ದು ಕರ್ನಾಟಕ ಸರಕಾರದ ಆಡಳಿತ ಪಕ್ಷದ ಶಾಸಕರು ಮತ್ತು ಸಂಸದರಿರುವ ದಕ್ಷಿಣ ಕನ್ನಡದ ಈ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಕಂಟಕವಾಗಿ ಪರಿಣಮಿಸಿದೆ ಎಂದೂ ಈ ಬಗ್ಗೆ ಸರಕಾರ ಅನಗತ್ಯ ಕಿರುಕುಳ ಕೊಡುವ ಅಧಿಕಾರಿಗಳ ವಿರುದ್ದ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲಾಧ್ಯಕ್ಷ ಅಶ್ರಫ್ ಬಡಾಜೆ ಆಗ್ರಹಿಸಿದ್ದಾರೆ.
ಉದ್ಯೋಗ ನಿಮಿತ್ತ ಕಾಸರಗೋಡು ಹಾಗೂ ಮಂಗಳೂರು ಆಸುಪಾಸಿನ ನಾಗರಿಕರು ಹೆಚ್ಚಿಗೆ ಕೊಲ್ಲಿ ರಾಷ್ಟ್ರಗಳನ್ನೇ ಅವಲಂಬಿಸಿದ್ದು ಹೆಚ್ಚಿನವರು ತಮ್ಮ ಕುಟುಂಬದ ಜೊತೆ ನೆಲೆಸಿದ್ದು ರಜೆಯ ನಿಮಿತ್ತ ಕುಟುಂಬದೊಂದಿಗೆ ಊರಿಗೆ ಮರಳುವ ಸಂದರ್ಭ “ತಪಾಸಣೆ ” ಎಂಬ ನೆಪವನ್ನಿಟ್ಟು ಅನಗತ್ಯ ಕಿರುಕುಳ ಕೊಟ್ಟು ಲಗೇಜ್ಗಳನ್ನು ಬಿಚ್ಚಿಸಿ ಪ್ರತಿಯೊಂದಕ್ಕೂ ದಂಡ ವಿಧಿಸುವ ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳ ವರ್ತನೆ ಬೇಜವಾಬ್ದಾರಿತನ ಎಂದು ಹೇಳಿದರು. ದೀರ್ಘ ಪ್ರಯಾಣದಿಂದಾಗಿ ಆಯಾಸದಿಂದಿರುವ ಮಗು ಹಾಗೂ ಹೆಂಗಸರಿರುವ ಕುಟುಂಬವನ್ನು ಕೋವಿಡ್ ತಪಾಸಣೆ ಹೆಸರೇಳಿ ಗಂಟೆಗಟ್ಟಲೆ ಕಾಯಿಸಿ ಚಿತ್ರಹಿಂಸೆ ನೀಡುವುದನ್ನು ಇದೇ ಸಂದರ್ಭದಲ್ಲಿ ಖಂಡಿಸಿದರು.