ಮಂಗಳೂರು: ಕಳೆದ ಮಂಗಳವಾರ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಜಾಗೃತಿ, ಅರಿವು ಕಾರ್ಯಾಗಾರದಲ್ಲಿ ಲಿಂಗತ್ವ ಅಲ್ಪಸಂಖ್ಯಾತೆಯೊಬ್ಬರು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ದ.ಕ ಜಿಲ್ಲೆಯ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜೆ ರವರ ಸಮಕ್ಷಮದಲ್ಲಿ “ಮಂಗಳೂರು ನಗರದ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ರಾತ್ರಿ ತನ್ನನ್ನು ಸೆಕ್ಸ್ಗೆ ಆಹ್ವಾನಿಸಿದ್ದರು ಎಂಬ ವಿಚಾರದ ಬೆಳಕಿಗೆ ಬಂದಿದ್ದು, ಈ ಬಗ್ಗೆ ಮಹಿಳಾ ಆಯೋಗ ಸೇರಿದಂತೆ ಸರ್ಕಾರದ ಹಲವು ಉನ್ನತ ಇಲಾಖೆಗಳಿಗೆ SDPI ವತಿಯಿಂದ ಲಿಖಿತವಾಗಿ ದೂರು ನೀಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆಸಿರುವ ಎಸ್’ಡಿಪಿಐ ದ.ಕ ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು ಅವರು, ಲಿಂಗತ್ವ ಅಲ್ಪಸಂಖ್ಯಾತೆಯರು ಮಾಡಿದ ಆರೋಪ ಅತೀ ಗಂಭೀರ ಸ್ವರೂಪದ್ದಾಗಿರುತ್ತದೆ. ಕಾನೂನು ರಕ್ಷಣೆ ಮಾಡಬೇಕಾದವರೇ ಲಿಂಗತ್ವ ಅಲ್ಪಸಂಖ್ಯಾತೆಯರನ್ನು ಕಾಮ ದೃಷ್ಟಿಯಲ್ಲಿ ನೋಡಿದರೆ ಇನ್ನು ಇಂತಹ ಅಧಿಕಾರಿಯ ಬಳಿ ನ್ಯಾಯಕ್ಕಾಗಿ ತೆರಳುವ ಸಾಮಾನ್ಯ ನಿರ್ಗತಿಕ ಮಹಿಳೆಯರ ಪರಿಸ್ಥಿತಿ ಮತ್ತು ಅಧಿಕಾರಿಯ ದೃಷ್ಟಿ ಹೇಗಿರಬಹುದು ಎಂದು ಊಹಿಸಬಹುದಾಗಿದೆ. ಇಂತಹ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆಯಾಗಿದ್ದಾರೆ, ಅಲ್ಲದೆ ಇಂತಹ ಅಧಿಕಾರಿಗಳು ಅಧಿಕಾರದಲ್ಲಿ ಮುಂದುವರಿಯಲು ಅನರ್ಹರಾಗಿದ್ದಾರೆ. ಅಲ್ಲದೆ ಈ ವರ್ತನೆಯು ಅಧಿಕಾರದ ದುರ್ಬಳಕೆಯೂ ಆಗಿದೆ. ನ್ಯಾಯ ಪಾಲನೆ ಮಾಡಬೇಕಾದವರೆ ಈ ರೀತಿ ವರ್ತಿಸಿದರೆ ಇಂತಹವರಿಂದ ಯಾವ ರೀತಿಯ ನ್ಯಾಯವನ್ನು ನಿರೀಕ್ಷೆ ಮಾಡಬಹುದು ಅಥವಾ ಇವರಿಗೆ ಇವರು ಕೇಳುವ ಬೇಡಿಕೆಯನ್ನು ಪೂರೈಸಿದರೆ ಮಾತ್ರ ಮಹಿಳೆಯರಿಗೆ ಮತ್ತು ನಾಗರಿಕರಿಗೆ ನ್ಯಾಯವನ್ನು ಪಡೆಯುವಂತಹ ಪರಿಸ್ಥಿತಿ ಬಂದೊದಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಹಾಗಾಗಿ ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸುಮೊಟೊ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಲಿಂಗತ್ವ ಅಲ್ಪಸಂಖ್ಯಾತೆ ಆರೋಪಿಸಿರುವ ತಪ್ಪಿತಸ್ಥ ಹಿರಿಯ ಪೋಲಿಸ್ ಅಧಿಕಾರಿಯನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕ ಹಿತದೃಷ್ಟಿಯಿಂದ ನಾವು ಮಹಿಳಾ ಆಯೋಗ ಸೇರಿದಂತೆ ಸಂಬಂಧಪಟ್ಟ ಹಲವು ಇಲಾಖೆಗಳಿಗೆ ಲಿಖಿತವಾಗಿ ದೂರು ನೀಡಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತೆಯನ್ನು ಸೆಕ್ಸ್’ಗೆ ಆಹ್ವಾನಿಸಿದ ಹಿರಿಯ ಪೊಲೀಸ್ ಅಧಿಕಾರಿಯ ವಿರುದ್ಧ ಮಹಿಳಾ ಆಯೋಗಕ್ಕೆ SDPI ದೂರು
Prasthutha|