ದೇಶದ ಸಂವಿಧಾನವನ್ನು ಯಾವ ಬೆಲೆ ತೆತ್ತಾದರೂ ರಕ್ಷಿಸಲು ಎಸ್ ಡಿಪಿಐ ಬದ್ಧ: ಅಬ್ದುಲ್ ಮಜೀದ್ ಮೈಸೂರು

Prasthutha|

ಮಂಗಳೂರು: ದೇಶದ ಸಂವಿಧಾನವನ್ನು ಯಾವ ಬೆಲೆ ತೆತ್ತಾದರೂ ರಕ್ಷಿಸಲು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಟಿಬದ್ಧವಾಗಿದೆ. ಜನರು ಪಕ್ಷದ ಮೇಲೆ ನಂಬಿಕೆ ಇಟ್ಟು ಪಕ್ಷವನ್ನು ಬಲಪಡಿಸಿದರೆ ದೇಶ ಎದುರಿಸುತ್ತಿರುವ ಪ್ರಸ್ತುತ ಸಂಕಷ್ಟದ ಪರಿಸ್ಥಿತಿಯನ್ನು ಬದಲಾಯಿಸಿ, ಎಲ್ಲರಿಗೂ ಸಮಾನ ಅವಕಾಶವಿರುವಂತಹ, ಎಲ್ಲರಿಗೂ ಸಮಪಾಲು-ಎಲ್ಲರಿಗೂ ಸಮಬಾಳು ಇರುವ ಭಾರತವನ್ನು ನಿರ್ಮಿಸುತ್ತೇವೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಹೇಳಿದ್ದಾರೆ.
ಬಿಜೆಪಿ ಸರ್ಕಾರದ ದ್ವೇಷ ಮತ್ತು ದುರಾಡಳಿತದ ವಿರುದ್ಧ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್ ಡಿಪಿಐ ಶುಕ್ರವಾರ ಮಂಗಳೂರಿನ ಹೊರವಲಯ ಕಣ್ಣೂರಿನ ಮರ್ಹೂಮ್ ಕೆ.ಎಂ.ಶರೀಫ್ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಜನಾಧಿಕಾರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಚ್ಛೇ ದಿನ್ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ ಪರಿಸ್ಥಿತಿಯನ್ನು ಅಧಃಪತನಕ್ಕೆ ಕೊಂಡೊಯ್ದಿದೆ. ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕದ ಮಣ್ಣಿನಲ್ಲಿ ಅನೈತಿಕ ರಾಜಕಾರಣದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಇತಿಹಾಸದಲ್ಲಿ ಕಂಡು ಕೇಳರಿಯದ ಭ್ರಷ್ಟಾಚಾರ, ಕೋಮುವಿದ್ವೇಷ, ಅರಾಜಕತೆಯಲ್ಲಿ ತೊಡಗಿದೆ. ಇವೆಲ್ಲವನ್ನೂ ಸಮರ್ಥವಾಗಿ ಎದುರಿಸಬೇಕಾಗಿದ್ದ ವಿರೋಧ ಪಕ್ಷಗಳೂ ಮೌನಕ್ಕೆ ಶರಣಾಗಿವೆ. ರಾಜ್ಯದಲ್ಲಿ ವಿರೋಧ ಪಕ್ಷಗಳೇ ಇಲ್ಲದಂತಹ ನಿರ್ವಾತ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಸರ್ವ ಜನರ ಅಭಿವೃದ್ಧಿಯ ದಿಕ್ಸೂಚಿಯಾಗಬೇಕಾಗಿದ್ದ ನಮ್ಮ ಸಂವಿಧಾನ ಇಂದು ಕೋಮುವಾದಿಗಳು, ಭ್ರಷ್ಟರು ಮತ್ತು ಅಸಮರ್ಥರ ಕೈವಶವಾಗಿ ಸಂಪೂರ್ಣ ನಾಶವಾಗುವ ಅಪಾಯದಲ್ಲಿದೆ. ದೇಶದ ಪ್ರಜಾಪ್ರಭುತ್ವ, ಸಂವಿಧಾನ ವ್ಯವಸ್ಥೆ ಶಿಥಿಲವಾಗುವ ಪರಿಸ್ಥಿತಿಯನ್ನು ನೋಡಿಕೊಂಡು ನಾವು ಮೌನವಹಿಸಿದರೆ, ದುಷ್ಟ ಫ್ಯಾಶಿಸ್ಟ್ ಶಕ್ತಿಗಳು ದೇಶವನ್ನು ಆಹುತಿ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಈ ಫ್ಯಾಶಿಸ್ಟ್ ಶಕ್ತಿಯನ್ನು ಎದುರಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅಬ್ದುಲ್ ಮಜೀದ್ ಮೈಸೂರು ಹೇಳಿದರು.
ಯಾವ ಬೆಲೆ ತೆತ್ತಾದರೂ ಈ ದೇಶದ ಸಂವಿಧಾನವನ್ನು ಎಸ್ ಡಿಪಿಐ ರಕ್ಷಿಸಲು ಪಣ ತೊಟ್ಟಿದೆ. ಸಂಘಪರಿವಾರದ ಆಟೋಟಗಳಿಗೆ ಕಾಂಗ್ರೆಸ್, ಜೆಡಿಎಸ್ ನವರು ಭಯಪಡಬಹುದು. ಆದರೆ ಇಂತಹ ಗೊಡ್ಡು ಬೆದರಿಕೆಗಳಿಗೆ ಎಸ್ ಡಿಪಿಐ ಹೆದರುವುದಿಲ್ಲ ಎಂದು ಹೇಳಿದ ಅಬ್ದುಲ್ ಮಜೀದ್, ಬಿಜೆಪಿ ಸರ್ಕಾರದ ವೈಫಲ್ಯ, ದುರಾಡಳಿತ, ವಿರೋಧ ಪಕ್ಷಗಳ ನಿರ್ಲಕ್ಷ್ಯದ ಬಗ್ಗೆ ನಾಡಿನ ಜನರಿಗೆ ಅರಿವು ಮೂಡಿಸಲು, ಅವರನ್ನು ಎಚ್ಚರಿಸಲು ಪಕ್ಷದ ವತಿಯಿಂದ ಜನಾಧಿಕಾರಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಹಿಜಾಬ್, ಹಲಾಲ್ ವಿಷಯ ಮುಂದಿಟ್ಟು ಸಂಘಪರಿವಾರ ಗದ್ದಲವೆಬ್ಬಿಸಿದಾಗ ಮುಸ್ಲಿಮರ ಮತ ಪಡೆದ ರಾಜಕೀಯ ಪಕ್ಷಗಳು ಮೌನಕ್ಕೆ ಶರಣಾಗಿದ್ದವು. ಮಾತ್ರವಲ್ಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಹಿಜಾಬ್, ಹಲಾಲ್, ಮಳಲಿ ಮಸೀದಿ ವಿಷಯಗಳಲ್ಲಿ ಯಾರೂ ಹೇಳಿಕೆ ನೀಡಬಾರದು ಎಂದು ಫರ್ಮಾನು ಹೊರಡಿಸಿದ್ದರು. ಮುಸ್ಲಿಮರಿಗೆ ಅನ್ಯಾಯವಾದಾಗ ಕಾಂಗ್ರೆಸ್ ಶಾಸಕರಿಗೆ ಮಾತನಾಡುವ ಧಮ್ ಇರಲಿಲ್ಲ. ನ್ಯಾಯದ ಪರವಾಗಿ ನಿಲ್ಲಲು ಕಾಂಗ್ರೆಸ್ ತಯಾರಿಲ್ಲ ಎಂದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಒಂದು ಕಡೆ ಸಂಘಪರಿವಾರದ ಕಾರ್ಯಕರ್ತರು ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಹಾಕಿ ಅವರ ಅಂಗಡಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬೊಮ್ಮಾಯಿ ದಾವೋಸ್ ನಲ್ಲಿ ಮುಸ್ಲಿಮ್ ಉದ್ಯಮಿ ಯೂಸುಫಲಿ ಅವರೊಂದಿಗೆ 2000 ಕೋಟಿ ರೂ. ಹೂಡಿಕೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಬೊಮ್ಮಾಯಿ ವಿರುದ್ಧ ಬಜರಂಗದಳದವರು ಯಾವಾಗ ಪ್ರತಿಭಟನೆ ಆರಂಭಿಸುತ್ತಾರೆ ಎಂದು ಅವರು ವ್ಯಂಗ್ಯವಾಡಿದರು.
ಮಂಗಳೂರಿನ ಮಳಲಿ ಮಸೀದಿಯ ಹೆಸರಿನಲ್ಲಿ ಈಗ ತಾಂಬೂಲ ಪ್ರಶ್ನೆ ಕೇಳಲಾಗಿದೆ. ಮಳಲಿ ಮಸೀದಿ ನೂರಾರು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಈ ಮಸೀದಿಯ ಒಂದು ಹಿಡಿ ಮಣ್ಣು ಕೂಡ ಬಿಟ್ಟು ಕೊಡುವುದಿಲ್ಲ ಎಂದು ಅಬ್ದುಲ್ ಮಜೀದ್ ಹೇಳಿದರು.
ಪಕ್ಷದ ಕೇರಳ ರಾಜ್ಯಾಧ್ಯಕ್ಷ ಅಶ್ರಫ್ ಮೌಲವಿ ಮುವಾಟ್ಟುಪುಝ ಮಾತನಾಡಿ, ದೇಶದಲ್ಲಿ ಕೋಮು ಆಧಾರದಲ್ಲಿ ಸಮಾಜವನ್ನು ವಿಭಜಿಸಿ, ಪರಸ್ಪರ ಹೊಡೆದಾಡಿಕೊಳ್ಳುವಂತೆ ಮಾಡುವ ಬ್ರಾಹ್ಮಣ್ಯವನ್ನು ಸೋಲಿಸಬೇಕಾಗಿದೆ. ಕಾಂಗ್ರೆಸ್ , ಜೆಡಿಎಸ್ ಗಾಗಿ ಅಹರ್ನಿಶಿ ದುಡಿದ ಮುಸ್ಲಿಮರು, ಜಾತ್ಯತೀತ ಎಂಬ ನೆಲೆಯಲ್ಲಿ ಶಾಸಕರನ್ನು ವಿಧಾನಸಭೆಗೆ ಕಳುಹಿಸಿಕೊಟ್ಟರು. ಆದರೆ ಆ ಶಾಸಕರು ಯಾವುದೇ ನಾಚಿಕೆ ಇಲ್ಲದೆ ಬಿಜೆಪಿಗೆ ಸೇರಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿದರು. ಆದ್ದರಿಂದ ಎಸ್ ಡಿಪಿಐ ಮಾತ್ರ ಇಲ್ಲಿ ಪರ್ಯಾಯವಾಗಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಅವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ , ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸೋ ಫ್ರಾಂಕೋ, SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಆರ್. ಭಾಸ್ಕರ್ ಪ್ರಸಾದ್ ನೆಲಮಂಗಲ. ಪಕ್ಷದ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ನಂಜಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಲತೀಫ್ ಪುತ್ತೂರು, ಅಫ್ಸರ್ ಕೊಡ್ಲಿಪೇಟೆ, ಅಶ್ರಫ್ ಮಾಚಾರ್, ವುಮೆನ್ ಇಂಡಿಯಾ ಮೂವ್ ಮೆಂಟ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಮ್, ಆಯಿಶಾ ಬಜ್ಪೆ, ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಅಥಾವುಲ್ಲಾ ಪೂಂಜಾಲಕಟ್ಟೆ, ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಜ್ಯಾಧ್ಯಕ್ಷೆ ಫರ್ಝಾನಾ ಮಹಮ್ಮದ್ , ಮುಖಂಡರಾದ ಅಬ್ದುಲ್ ಮಜೀದ್ ಖಾನ್, ಅಕ್ಬರಲಿ, ರಿಯಾಝ್ ಕಡಂಬು, ಅಬೂಬಕ್ಕರ್ ಕುಳಾಯಿ, ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್, ಉತ್ತರ ಕನ್ನಡ ತೌಫೀಕ್ ಬ್ಯಾರಿ, ಚಿಕ್ಕಮಗಳೂರಿನ ಗೌಸ್, ಸಕಲೇಶಪುರ ಸಲೀಂ, ಕಸಾರಗೋಡು ಮುಹಮ್ಮದ್, ನಸ್ರೀಯಾ ಬೆಳ್ಳಾರೆ, ಮಿಸ್ರಿಯಾ ಕಣ್ಣೂರು, ವಿಕ್ಟರ್ ಮಾರ್ಟೀಸ್, ಮುನೀಬ್ ಬೆಂಗರೆ, ಸಂಶಾದ್ ಅಬೂಬಕರ್, ಅಬ್ದುಲ್ ಹಮೀದ್ , ಪಕ್ಷದ ಜನಪ್ರತಿನಿಧಿಗಳು ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇದಕ್ಕೂ ಮೊದಲು ಬಿಜೆಪಿ ಸರ್ಕಾರದ ದುರಾಡಳಿತವನ್ನು ಬಿಂಬಿಸುವ ನಾಟಕ ಪ್ರದರ್ಶನ ನಡೆಯಿತು.

- Advertisement -

- Advertisement -

Join Whatsapp