ಮಂಗಳೂರಿನಲ್ಲಿ ಎಸ್ ಡಿಪಿಐನಿಂದ ‘ಒಲವಿನ ಕರ್ನಾಟಕ’ ಎಂಬ ಹೆಸರಿನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

Prasthutha|

ಮಂಗಳೂರು: ಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕ ಎಸ್.ಡಿ.ಪಿ.ಐ ಸಂಕಲ್ಪ ಎಂಬ ಶೀರ್ಷಿಕೆ ಅಡಿಯಲ್ಲಿ ಎಸ್.ಡಿ.ಪಿ.ಐ ರಾಜ್ಯಾದ್ಯಂತ ಒಂದು ತಿಂಗಳ ಕಾಲ ಒಲವಿನ ಕರ್ನಾಟಕ, ಕರ್ನಾಟಕ ರಾಜ್ಯೋತ್ಸವ ಅಭಿಯಾನ ಹಮ್ಮಿಕೊಂಡಿದೆ. ಇದರ ಅಂಗವಾಗಿ ಎಸ್.ಡಿ.ಪಿ.ಐ ದ.ಕ ಜಿಲ್ಲಾ ಸಮಿತಿ ವತಿಯಿಂದ ಮಂಗಳೂರಿನ ಪುರಭವನದ ಮುಂಭಾಗದ ತೆರೆದ ವೇದಿಕೆಯಲ್ಲಿ ಮಂಗಳವಾರ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

- Advertisement -

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಪಿ.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಕರ್ನಾಟಕದ ಏಕೀಕರಣಕ್ಕಾಗಿ ಇಲ್ಲಿನ ನಾಡು ನುಡಿಯ ಅಸ್ಮಿತೆಗಾಗಿ ಅನೇಕ ಮೇಧಾವಿ ಹೋರಾಟಗಾರರು ವಿವಿಧ ರೀತಿಯಲ್ಲಿ ಹೋರಾಟ ನಡೆಸಿದ್ದಾರೆ. ಆದರೆ ಒಕ್ಕೂಟ ಸರಕಾರ ನಮ್ಮ ರಾಜ್ಯದ ಅಸ್ಮಿತೆಯನ್ನು ಕಬಳಿಸಿ ಉತ್ತರ ಭಾರತದವರಿಗೆ ಅವಕಾಶ ಮಾಡಿಕೊಟ್ಟು ಎಲ್ಲಾ ವರ್ಗದ ಕನ್ನಡಿಗ ಜನರನ್ನು ವಂಚಿಸುತ್ತಿದೆ. ಆ ಮೂಲಕ ಇಲ್ಲಿನ ಸೌಹಾರ್ದತೆ, ಶಾಂತಿ, ಭ್ರಾತೃತ್ವಕ್ಕೆ ಒಕ್ಕೂಟ ಸರಕಾರ ಕೊಳ್ಳಿ ಇಡುತ್ತಿದೆ. ಒಕ್ಕೂಟ ಸರಕಾರದ ಈ ನೀತಿಯನ್ನು ಕನ್ನಡಿಗೆರಲ್ಲರೂ ಮೆಟ್ಟಿ ನಿಲ್ಲಬೇಕಾಗಿದೆ ಎಂದರು.

ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ಮಾತನಾಡಿ, ಕನ್ನಡ ನಾಡು ವಿವಿಧತೆಯಲ್ಲಿ ಏಕತೆ, ಭ್ರಾತೃತ್ವದ ತವರೂರಾಗಿದೆ. ಇದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ವಿಚಾರ ಎಂದು ತನ್ನ ಉದ್ಘಾಟನಾ ಭಾಷಣದಲ್ಲಿ ಸಂದೇಶ ನೀಡಿದರು.

- Advertisement -

ಹಿರಿಯ ಸಾಹಿತಿ ಮುಹಮ್ಮದ್ ಬಡ್ದೂರು, ನಿವೃತ ಪ್ರಾಧ್ಯಾಪಕ ಮುಹಮ್ಮದ್ ಹನೀಫ್ ಅವರು ಕನ್ನಡ ನಾಡು ನುಡಿಯ ಸಂರಕ್ಷಣೆ ಮತ್ತು ಸ್ವಾಭಿಮಾನದ ಅಸ್ಮಿತೆಯ ಉಳಿವಿಗಾಗಿ ಹೋರಾಟ ನಡೆಸಲು ಕನ್ನಡಿಗರಿಗೆ ಕರೆ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜ್ಯೂನಿಯರ್ ಡಾ. ರಾಜ್ ಕುಮಾರ್ ಖ್ಯಾತಿಯ ಅಬ್ಬಾಸ್  ಮತ್ತು ಎಸ್ಡಿಪಿಐ ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್ ರವರು ಕನ್ನಡದ ವಿವಿಧ ಹಾಡುಗಳನ್ನು ಹಾಡಿದರು. ವೈರಲ್ ಸ್ಟಾರ್ ಇಲ್ಯಾಸ್ ಮಿಮಿಕ್ರಿಯಿಂದ ನೆರೆದ ಜನರನ್ನು ರಂಜಿಸಿದರು. ಆಸೀಫ್ ಕೋಟೆ ಬಾಗಿಲು ಸ್ವಾಗತಿಸಿದರು. ಖಾದರ್ ನಾವೂರು ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಕಾರ್ಮಿಕ ಸಂಘಟನೆಯ ಮುಖಂಡರಾದ ಷರೀಫ್ ಪಾಂಡೇಶ್ವರ , ಖಾದರ್ ಅಮ್ಮೆಮಾರ್, SDPI ಜಿಲ್ಲಾ ನಾಯಕರಾದ ಜಮಾಲ್ ಜೋಕಟ್ಟೆ, ಅಕ್ಬರ್ ಬೆಳ್ತಂಗಡಿ, ಶಾಕಿರ್ ಅಳಕೆ ಮಜಲು ಹಾಗೂ ಇತರರು ಉಪಸ್ಥಿತರಿದ್ದರು.



Join Whatsapp