ಮಂಗಳೂರು: ಮರವೂರು ಸೇತುವೆ ಕುಸಿದ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತೊಂದರೆಯಾಗಿದೆ. ಆದ್ದರಿಂದ ಕಳವಾರು ಮಾರ್ಗವಾಗಿ SEZ ಕಾರಿಡಾರ್ ರಸ್ತೆಯನ್ನು ಬಳಸಲು ಅವಕಾಶ ಕಲ್ಪಿಸುವಂತೆ ಎಸ್.ಡಿ.ಪಿ.ಐ ಮುಲ್ಕಿ-ಮೂಡಬಿದ್ರೆ ಕ್ಷೇತ್ರ ಸಮಿತಿಯು ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಕಟೀಲು, ಬಜ್ಪೆಯಿಂದ ಮಂಗಳೂರು ಸಂಚರಿಸುವ ಮಾರ್ಗದಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಇದ್ದ ಮರವೂರು ಸೇತುವೆಯು ಕುಸಿದಿದೆ. ಇದರಿಂದ ಮಂಗಳೂರಿಗೆ ಚಲಿಸುವ ಬಜ್ಪೆಯ ನಾಗರಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಪರ್ಯಾಯ ರಸ್ತೆಗಳಾದ ಗುರುಪುರ ರಸ್ತೆಯು ಭಾರಿ ದೂರವಿರುವುದರಿಂದ ಅದಕ್ಕೆ ಹೆಚ್ಚಿನ ಸಮಯ ಮತ್ತು ಇಂಧನ ವ್ಯಯಿಸಬೇಕಾಗುತ್ತದೆ. ಇನ್ನೊಂದು ರಸ್ತೆ ಜೋಕಟ್ಟೆ ಮೂಲಕವಿದ್ದು ಅದು ಕಿರಿದಾಗಿರುವುದರಿಂದ ಮತ್ತು ರೈಲ್ವೆ ಕ್ರಾಸಿಂಗ್ ಇರುವುದರಿಂದ ಭಾರಿ ಸಂಚಾರ ದಟ್ಟನೆ ಉಂಟಾಗಿ ಪ್ರಯಾಣಿಕರು ಪರದಾಡಬೇಕಾಗುತ್ತದೆ.
ಆದರೆ ಕಳವಾರು ಮಾರ್ಗವಾಗಿ SEZ ಕಾರಿಡಾರ್ ರಸ್ತೆಯಲ್ಲಿ ಸಾರ್ವಜನಿಕ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೆ ಈ ಬಾಗದ ಜನರಿಗೆ ಸ್ವಲ್ಪ ನೆಮ್ಮದಿ ಸಿಗಬಹುದು ಎಂದು ಎಸ್ ಡಿಪಿಐ ಜಿಲ್ಲಾಧಿಕಾರಿ ಗಮನಕ್ಕೆ ತಂದಿತು. ಸಾವಧಾನದಿಂದ ಮನವಿ ಆಲಿಸಿದ ಜಿಲ್ಲಾಧಿಕಾರಿ ಶೀಘ್ರವೇ ಸಮಸ್ಯೆ ಇತ್ಯರ್ಥಕ್ಕೆ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ನಿಯೋಗದಲ್ಲಿ ಎಸ್.ಡಿ.ಪಿ.ಐ ಮುಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ಸಮಿತಿಯ ಅದ್ಯಕ್ಷ ಆಸಿಫ್ ಕೋಟೆಬಾಗಿಲು, ಜಿಲ್ಲಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಎಸ್.ಡಿ.ಪಿ.ಐ ಮುಖಂಡ ಇಸ್ಮಾಯಿಲ್ ಇಂಜಿನಿಯರ್, ಎಸ್.ಡಿ.ಪಿ.ಐ.ಜೋಕಟ್ಟೆ ಗ್ರಾಮ ಸಮಿತಿಯ ಅದ್ಯಕ್ಷ ಮತ್ತು ಗ್ರಾಮ ಪಂಚಾಯತ್ ಸದಸ್ಯ ಶಿಹಾಬ್ ಜೋಕಟ್ಟೆ, ಹಾಗೂ ಜೋಕಟ್ಟೆ ಗ್ರಾಮ ಸಮಿತಿಯ ಉಪಾದ್ಯಕ್ಷ ಮತ್ತು ಗ್ರಾಮ ಪಂಚಾಯತ್ ಸದಸ್ಯ ಫರ್ವೀಝ್ ಅಲಿ ಜೋಕಟ್ಟೆ ಇದ್ದರು.
ಎಸ್ ಡಿಪಿಐ ಮನವಿಯ ಬೆನ್ನಲ್ಲೇ ಜಿಲ್ಲಾಧಿಕಾರಿ ಮಧ್ಯಾಹ್ನ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮಾತ್ರವಲ್ಲ ಎಸ್ ಇಝಡ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪರ್ಯಾಯ ರಸ್ತೆಯ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ್ದಾರೆ.