ಸಿದ್ದೀಕ್ ಕಾಪ್ಪನ್ ಅರ್ಜಿ ವಿಚಾರಣೆ : ಉತ್ತರ ಪ್ರದೇಶ ಸರ್ಕಾರಕ್ಕೆ ನೋಟೀಸು ಜಾರಿ ಮಾಡಿದ ಸುಪ್ರೀಂ ಕೋರ್ಟ್

Prasthutha|

ನವದೆಹಲಿ: ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ಉತ್ತರ ಪ್ರದೇಶದ ಪೊಲೀಸರಿಂದ ಬಂಧಿಸಲ್ಪಟ್ಟ ಕೇರಳ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರು ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್,  ಉತ್ತರ ಪ್ರದೇಶ ಸರ್ಕಾರಕ್ಕೆ ನೋಟೀಸು ಜಾರಿ ಮಾಡಿದೆ.

- Advertisement -

ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 9 ರಂದು ನಡೆಸುವುದಾಗಿ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಮತ್ತು ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಅವರ ನೇತೃತ್ವದ ನ್ಯಾಯಪೀಠವು ತಿಳಿಸಿದೆ.

ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ವರದಿ ಮಾಡಲು ಹತ್ರಾಸ್ ಗೆ ಮಾಡಲು ತೆರಳಿದಕ್ಕಾಗಿ ಅಕ್ಟೋಬರ್ 5, 2020 ರಂದು ಉತ್ತರ ಪ್ರದೇಶ ಪೊಲೀಸರು  ಸಿದ್ದೀಕ್ ಕಾಪ್ಪನ್ ಮತ್ತು ಇತರ ಮೂವರನ್ನು ಬಂಧಿಸಿದ್ದರು.

- Advertisement -

ವಕೀಲ ಹ್ಯಾರಿಸ್ ಬೀರನ್ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠವು ಈ ತಿಂಗಳ ಆರಂಭದಲ್ಲಿ ಆಗಸ್ಟ್ 2 ರಂದು ಕಾಪ್ಪನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ಸಿಜೆಐ ಯು. ಯು. ಲಲಿತ್ ಮತ್ತು ಜಸ್ಟಿಸ್ ರವೀಂದ್ರ ಭಟ್ ಅವರಿದ್ದ ಸರ್ವೋಚ್ಚ ನ್ಯಾಯಾಲಯದ ಪೀಠವು, ಪತ್ರಕರ್ತ ಸಿದ್ದೀಕ್ ಕಾಪ್ಪನ್ ಜಾಮೀನು ಅರ್ಜಿ ಸಂಬಂಧ ಪ್ರತಿಕ್ರಿಯೆ ತಿಳಿಸುವಂತೆ ಉತ್ತರ ಪ್ರದೇಶ ಸರಕಾರಕ್ಕೆ ನೋಟಿಸ್ ಜಾರಿ ಮಾಡಿತು.

  ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ-ಯುಎಪಿಎಯಡಿ ಕಳೆದ ಎರಡು ವರುಷಗಳಿಂದ ಜೈಲಿನಲ್ಲಿರುವ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರ ಜಾಮೀನು ಅರ್ಜಿಯ ಅಂತಿಮ ನಿರ್ಧಾರಕ್ಕೆ ಸೆಪ್ಟೆಂಬರ್ 9ನ್ನು ಗೊತ್ತು ಪಡಿಸಿದ ಸುಪ್ರೀಂ ಕೋರ್ಟು , ಆಗಸ್ಟ್ 29ರಂದು ಉತ್ತರ ಪ್ರದೇಶ ಸರಕಾರಕ್ಕೆ ನೋಟಿಸ್ ರವಾನಿಸಿತು.

ಹಿರಿಯ ವಕೀಲರಾದ ಕಪಿಲ್ ಸಿಬಲ್, ದುಷ್ಯಂತ್ ದವೆ ಹಾಗೂ ಹ್ಯಾರಿಸ್ ಬೀರನ್ ಮೂವರೂ ಕಾಪ್ಪನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, 2020ರ ಅಕ್ಟೋಬರ್ 6ರಿಂದ ವಿಚಾರಣೆ ಇಲ್ಲದೆ, ಚಾರ್ಜ್ ಶೀಟ್ ಇಲ್ಲದೆ ಬಂಧನದಲ್ಲಿ ಇಟ್ಟಿರುವುದಾಗಿ ಅರ್ಜಿಯಲ್ಲಿ ವಿವರಿಸಲಾಗಿದೆ.

ಕಾಪ್ಪನ್ ಹೆಸರಿನಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾವು ರೂ. 45,000 ಸಾವಿರ ಹಣ ಹಾಕಿದ್ದು, ಉಗ್ರ ಚಟುವಟಿಕೆ ನಡೆಸಲು ಆ ಹಣ ಹಾಕಲಾಗಿದೆ ಎಂದು ಯುಎಪಿಎ ಕಾಯ್ದೆಯಡಿ ನಮ್ಮ ಕಕ್ಷಿದಾರರನ್ನು ಬಂಧನದಲ್ಲಿಡಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.   

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಗ್ರ ಸಂಘಟನೆಯಲ್ಲ. ಯಾರು ಹಣ ಠೇವಣಿ ಮಾಡಿದ್ದಾರೆ ಎನ್ನುವ ಬಗ್ಗೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಇದೊಂದು ಖಾಲಿ ಹಾಳೆಯ ಆರೋಪ ಎಂದು ಕಪಿಲ್ ಸಿಬಲ್ ವಾದ ಮಾಡಿದರು.

ಪಿಎಫ್ ಐಗೂ ಕಾಪ್ಪನ್  ಗೂ ಯಾವುದೇ ಸಂಬಂಧವಿಲ್ಲ. ಆತ ಪತ್ರಕರ್ತನಾಗಿ ಒಂದು ಪತ್ರಿಕೆಗೆ ಕೆಲಸ ಮಾಡುತ್ತಿದ್ದ; ಆ ಪತ್ರಿಕೆ ಪಿಎಫ್ ಐ ಜೊತೆಗೆ ಸಂಬಂಧ ಹೊಂದಿರಬಹುದು ಎಂದು ಹೇಳಿದರು.

  ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 2020ರಲ್ಲಿ ನಡೆದ ದಲಿತ ಹೆಣ್ಣಿನ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ಹೆಚ್ಚಿನ ಸುದ್ದಿ ಸಂಗ್ರಹಿಸಲು ಹೋಗಿದ್ದ ವೃತ್ತಿನಿರತ ಪತ್ರಕರ್ತ ಕಾಪ್ಪನ್ ರನ್ನು ಕಾರಣವಿಲ್ಲದೆ ಬಂಧಿಸಲಾಗಿದೆ. ಅಕ್ಟೋಬರ್ 5ರಂದು ಹತ್ರಾಸ್ ಗೆ ಕಾರೊಂದರಲ್ಲಿ ಹೊರಟಿದ್ದ ಕಾಪ್ಪನ್ ರನ್ನು ಬಂಧಿಸಿ ಕರೆದೊಯ್ಯಲಾಗಿದೆ ಎಂದರು.

“ಆ ಕಾರಿನಲ್ಲಿ ಕಾಪ್ಪನ್ ಜೊತೆಗೆ ಇದ್ದ ಇತರರು ಯಾರು?” ಎಂದು ಮುಖ್ಯ ನ್ಯಾಯಮೂರ್ತಿ ಲಲಿತ್ ಕೇಳಿದರು.  

“ಒಬ್ಬ ಕಾರು ಚಾಲಕ, ಆತನಿಗೆ ಜಾಮೀನು ನೀಡಲಾಗಿದೆ. ಇತರ ಇಬ್ಬರು ಪಿಎಫ್ ಐ ಕಾರ್ಯಕರ್ತರು. ಅವರಿಬ್ಬರು ಸಹ ಪೊಲೀಸ್ ಕಸ್ಟಡಿಯಲ್ಲಿದ್ದು, ಅವರ ಮೇಲಿನ ಆರೋಪದ  ವಿರುದ್ಧ ಹೋರಾಡುತ್ತಿದ್ದಾರೆ” ಎಂದು ಕಪಿಲ್ ಸಿಬಲ್ ಹೇಳಿದರು.

ಉತ್ತರ ಪ್ರದೇಶದ ಹೆಚ್ಚುವರಿ ಅಡ್ವಕೇಟ್  ಜನರಲ್ ಆದ ಗರಿಮಾ ಪ್ರಸಾದ್ ಅವರು ಈ ಮೊಕದ್ದಮೆಯಲ್ಲಿ ಎಂಟು ಆರೋಪಿಗಳು ಇರುವುದಾಗಿ ಹೇಳಿದರು ಕಾರು ಚಾಲಕನಿಗೆ ಮಾತ್ರ ಜಾಮೀನು ನೀಡಲಾಗಿದೆ. ಆರೋಪಿಗಳಲ್ಲಿ ಒಬ್ಬನು ದಿಲ್ಲಿ ಗಲಭೆಗೆ ಸಂಬಂಧಿಸಿದವನಾದರೆ ಉಳಿದವರು ಬುಲಂದ್ ಶಹರ್ ಗಲಭೆಗೆ ಸಂಬಂಧಿಸಿದವರಾಗಿದ್ದಾರೆ.

“ಬಹು ಹಿಂದೆಯೇ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಒಬ್ಬನು ಜಾಮೀನಿನ ಮೇಲೆ ಹೊರಗೆ ಹೋಗಿದ್ದಾನೆ. ಜಾಮೀನುರಹಿತ ವಾರಂಟ್ ಹೊರಡಿಸಿದ್ದರೂ ಆತ ಕೋರ್ಟಿಗೆ ಹಾಜರಾಗಿಲ್ಲ” ಎಂದು ಗರಿಮಾ ಕೋರ್ಟಿಗೆ ತಿಳಿಸಿದರು.

ಚಾರ್ಜ್ ಶೀಟ್ 5,000 ಪುಟಗಳದ್ದಾಗಿದೆ. ಅದರಲ್ಲಿ ಕೆಲವು ಪುಟಗಳನ್ನಷ್ಟೆ ಆರೋಪಿಗಳಿಗೆ ತೋರಿಸಲಾಗಿದೆ ಎಂದು ಕಪಿಲ್ ಸಿಬಲ್ ಪೀಠದ ಗಮನಕ್ಕೆ ತಂದರು.

ಕಾಪ್ಪನ್ ಪರ ವಕೀಲರು ಹೇಳುವ ಎಲ್ಲವನ್ನು ದಾಖಲಿಸಿಕೊಂಡು ಅದಕ್ಕೆ ಸೂಕ್ತ ರೀತಿಯ ಬದಲುತ್ತರಗಳನ್ನು, ಸಮಜಾಯಿಸಿಯನ್ನು ತಯಾರಿಸಿ, ಮುಂದಿನ ವಿಚಾರಣೆಯ ದಿನ ಸಲ್ಲಿಸುವಂತೆ ಸುಪ್ರೀಂ ಪೀಠವು ಉತ್ತರ ಪ್ರದೇಶದ ಅಡ್ವಕೇಟ್ ಜನರಲ್ ರಿಗೆ ತಿಳಿಸಿ ವಿಚಾರಣೆಯನ್ನು ಮುಂದೂಡಿದರು.

Join Whatsapp