ನವದೆಹಲಿ: ಚುನಾವಣಾ ಬಾಂಡ್ಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ನೀಡಲು ಭಾರತೀಯ ಸ್ಟೇಟ್ ಬ್ಯಾಂಕ್ ನಿರಾಕರಿಸಿದೆ.
ಚುನಾವಣಾ ಬಾಂಡ್ಗಳಿಗೆ ಸಂಬಂಧಿಸಿದ ಸಂಪೂರ್ಣ ವಿವರವನ್ನು, ಚುನಾವಣಾ ಆಯೋಗಕ್ಕೆ ಸಲ್ಲಿಸಿದ ರೀತಿಯಲ್ಲಿ ಡಿಜಿಟಲ್ ರೂಪದಲ್ಲಿ ನೀಡಬೇಕು ಎಂದು ಆರ್ಟಿಐ ಕಾರ್ಯಕರ್ತ, ನಿವೃತ್ತ ಕಮಡೋರ್ ಲೋಕೇಶ್ ಬಾತ್ರಾ ಎಂಬವರು ಮಾರ್ಚ್ 13ರಂದು ಎಸ್ಬಿಐಗೆ ಆರ್ಟಿಐ ಅಡಿ ಕೋರಿಕೆ ಸಲ್ಲಿಸಿದ್ದರು.
ಆದರೆ, ಇದಕ್ಕೆ ನಿರಾಕರಿಸಿದ ಎಸ್ಬಿಐ, ಮಾಹಿತಿ ಬಹಿರಂಗಕ್ಕೆ ವಿನಾಯಿತಿ ನೀಡಿರುವ ಆರ್ಟಿಐ ಕಾಯ್ದೆಯ ಸೆಕ್ಷನ್ 8ನ್ನು ಉಲ್ಲೇಖಿಸಿದೆ.
ನೀವು ಕೋರಿರುವ ಮಾಹಿತಿಯು ಬಾಂಡ್ ಖರೀದಿ ಮಾಡಿದವರು ಹಾಗೂ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದೆ. ಇವು ಪರಸ್ಪರ ವಿಶ್ವಾಸವನ್ನು ಆಧರಿಸಿವೆ. ಇವುಗಳ ಮಾಹಿತಿಯನ್ನು ಆರ್ಟಿಐ ಅಡಿ ನೀಡುವುದಕ್ಕೆ ಸೆಕ್ಷನ್ 8(1)(ಇ) ಹಾಗೂ (ಜೆ) ಅಡಿಯಲ್ಲಿ ವಿನಾಯಿತಿ ಇದೆ ಎಂದು ಎಸ್ಬಿಐ ಅರ್ಜಿದಾರರಿಗೆ ಪ್ರತಿಕ್ರಿಯಿಸಿದೆ.
ಬಾಂಡ್ಗಳಿಗೆ ಸಂಬಂಧಿಸಿದ ವಿವರಗಳು ಸುಪ್ರೀಂ ಕೋರ್ಟ್ನ ಸೂಚನೆಯ ಪರಿಣಾಮವಾಗಿ ಈಗಾಗಲೇ ಬಹಿರಂಗಗೊಂಡಿವೆ ಎಂಬುದೂ ಗಮನಾರ್ಹ.