ರಿಯಾದ್: ಸೌದಿ ಅರೇಬಿಯಾವು 2023ರ ಹಜ್ ವೇಳೆ ಕೋವಿಡ್ -19 ನಿರ್ಬಂಧಗಳನ್ನು ತೆಗೆದುಹಾಕಲಿದ್ದು, ಈ ಹಿಂದಿನಷ್ಟು ಸಂಖ್ಯೆಯ ಯಾತ್ರಾರ್ಥಿಗಳಿಗೆ ಆತಿಥ್ಯ ನೀಡಲಾಗುವುದು ಎಂದು ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯ ಸೋಮವಾರ ತಿಳಿಸಿದೆ.
2019 ರಲ್ಲಿ, ಅಂದರೆ ಕೋವಿಡ್’ನ ಹಿಂದಿನ ವರ್ಷ, ಸುಮಾರು 2.6 ಮಿಲಿಯನ್ ಜನರು ಹಜ್ ಯಾತ್ರೆ ಕೈಗೊಂಡಿದ್ದರು. 2022 ರಲ್ಲಿ ಒಂದು ಮಿಲಿಯನ್ ವಿದೇಶಿ ಯಾತ್ರಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ 2020 ಮತ್ತು 2021ರಲ್ಲಿ ಸೌದಿ ಪ್ರಜೆಗಳ ಪೈಕಿ ಸೀಮಿತ ಜನರಿಗೆ ಮಾತ್ರ ಹಜ್ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿತ್ತು. ವಿದೇಶಿಗರಿಗೆ ಹಜ್ ಯಾತ್ರೆಗೆ ಅವಕಾಶ ನೀಡಿರಲಿಲ್ಲ.
ಮಕ್ಕಾ ಮತ್ತು ಮದೀನಾದಲ್ಲಿರುವ ಇಸ್ಲಾಮಿನ ಅತ್ಯಂತ ಪವಿತ್ರ ಸ್ಥಳಗಳ ನೆಲೆಯಾಗಿರುವ ಸೌದಿ ಅರೇಬಿಯಾ ಈ ಋತುವಿನಲ್ಲಿ ವಯಸ್ಸಿನ ಮಿತಿ ಸೇರಿದಂತೆ ಯಾವುದೇ ನಿರ್ಬಂಧಗಳನ್ನು ವಿಧಿಸುವುದಿಲ್ಲ ಎಂದು ಹಜ್ ಸಚಿವಾಲಯ ಟ್ವೀಟ್’ನಲ್ಲಿ ತಿಳಿಸಿದೆ.
ಕೋವಿಡ್ ವಿರುದ್ಧ ಸಂಪೂರ್ಣವಾಗಿ ಲಸಿಕೆ ಪಡೆದ ಅಥವಾ ರೋಗನಿರೋಧಕ ಶಕ್ತಿಯನ್ನು ಪಡೆದ ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲದ 18 ರಿಂದ 65 ವರ್ಷ ವಯಸ್ಸಿನ ಯಾತ್ರಾರ್ಥಿಗಳಿಗೂ 2022 ರಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
2023 ರ ಜೂನ್ 26 ರಂದು ಹಜ್ ಋತುವು ಪ್ರಾರಂಭವಾಗುವ ನಿರೀಕ್ಷೆಯಿದೆ.
ಕಳೆದ ವರ್ಷಗಳಲ್ಲಿ, ಸೌದಿ, ಜಾಗತಿಕವಾಗಿ ಅತಿ ದೊಡ್ಡ ಧಾರ್ಮಿಕ ವಿಧಿಯಾದ ಹಜ್ ನಿರ್ವಹಣೆಗಾಗಿ ಶತಕೋಟಿ ಡಾಲರ್ ಗಳಿಗೂ ಅಧಿಕ ಮೊತ್ತವನ್ನು ವ್ಯಯಿಸಿದೆ.
ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರ ಆರ್ಥಿಕ ಸುಧಾರಣಾ ಯೋಜನೆಯು ಉಮ್ರಾ ಮತ್ತು ಹಜ್ ಸಾಮರ್ಥ್ಯವನ್ನು ವಾರ್ಷಿಕವಾಗಿ 30 ಮಿಲಿಯನ್ ಯಾತ್ರಾರ್ಥಿಗಳಿಗೆ ಹೆಚ್ಚಿಸುವುದು ಮತ್ತು 2030 ರ ವೇಳೆಗೆ 50 ಬಿಲಿಯನ್ ರಿಯಾಲ್ (13.32 ಬಿಲಿಯನ್ ಡಾಲರ್) ಆದಾಯವನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಪ್ರತಿವರ್ಷ ಸುಮಾರು 19 ಮಿಲಿಯನ್ ಜನರು ಉಮ್ರಾ ನಿರ್ವಹಿಸುತ್ತಿದ್ದಾರೆ.