ಬೆಂಗಳೂರು: ಹಿಂದೂ ಪದ ಅಂದರೆ ಕಾಂಗ್ರೆಸ್ ನಾಯಕರಿಗೆ ಅಶ್ಲೀಲ ಹಾಗೂ ಅದೇ ರೀತಿಯಲ್ಲಿ ಕೇಸರಿ ಎಂದರೆ ಅವರಿಗೆ ಅಲರ್ಜಿ. ಈ ನಿಲುವು ಆ ಪಕ್ಷದ ಸಿದ್ಧಾಂತದ ಒಂದು ಅವಿಭಾಜ್ಯ ಅಂಗವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಾಯಕ ಸತೀಶ್ ಜಾರಕಹೊಳಿ ಅವರು ಹಿಂದೂ ಪದದ ಬಗ್ಗೆ ಮಾತನಾಡಿದ ಬಗ್ಗೆ ಮಾಧ್ಯಮ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಅವರ ಹೇಳಿಕೆ ನನಗೆ ಆಶ್ಚರ್ಯ ತಂದಿಲ್ಲ. ಅವರು ತಮ್ಮ ಪಕ್ಷದ ನಿಜ ಧೋರಣೆಯನ್ನು, ಧ್ವನಿಸಿದ್ದಾರೆ” ಎಂದರು.
ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನಡೆಯಿಂದಾಗಿ ದೇಶದಲ್ಲಿ ಆ ಪಕ್ಷ ಅಪ್ರಸ್ತುತ ವಾಗಿದೆ ಎಂದೂ ಸಚಿವರು ಹೇಳಿದರು.
ಕೆಲವು ಸಂಘಟನೆಗಳು ಟಿಪ್ಪು ಆಚರಣೆ ನಡೆಸಲು ಮುಂದಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಸ್ಥಳೀಯ ಸಂಸ್ಥೆಗಳು ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತವೆ” ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬೆಂಗಳೂರು ಭೇಟಿಯ ಬಗ್ಗೆ ಮಾಹಿತಿ ನೀಡಿದ ಸಚಿವರು, ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ಅನಾವರಣ, ವಂದೇ ಭಾರತ್ ರೈಲಿಗೆ ಚಾಲನೆ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ನ ಉದ್ಘಾಟನೆ ಸಮಾರಂಭ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನರೇಂದ್ರ ಮೋದಿಯವರು ಸಾರ್ವಜನಿಕ ಸಮಾವೇಶವನ್ನೂ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.
ಪ್ರಧಾನಿಯವರ ಭೇಟಿಯ ಹಿನ್ನೆಲೆಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಹಾಗೂ ಭದ್ರತಾ ಕ್ರಮಗಳ ನಿರ್ವಹಣೆಗೆ ಸುಮಾರು ನಾಲ್ಕು ಸಾವಿರ ರಕ್ಷಣಾ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗುತ್ತಿದೆ ಎಂದರು.
ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.