‘ಪುನೀತ್ ರಾಜ್ ಕುಮಾರ್’ ಹೆಸರಿನಲ್ಲಿ ಉಪಗ್ರಹ ಉಡಾವಣೆ

Prasthutha|

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರಕಾರಿ ಶಾಲೆಗಳ ಮಕ್ಕಳೇ ಉಪಗ್ರಹ ಅಭಿವೃದ್ಧಿ ಮಾಡಲಿದ್ದು, ಇದಕ್ಕೆ ದಿವಂಗತ ನಟ ಪುನೀತ್ ರಾಜಕುಮಾರ್ ಗೌರವಾರ್ಥವಾಗಿ ಅವರ ಹೆಸರನ್ನೇ ಇಡಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

- Advertisement -

`ರಾಷ್ಟ್ರೀಯ ವಿಜ್ಞಾನ ದಿನ’ದ ಅಂಗವಾಗಿ ಮಲ್ಲೇಶ್ವರಂನ 18ನೇ ಅಡ್ಡರಸ್ತೆಯಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್) ಮತ್ತು ಭಾರತೀಯ ತಂತ್ರಜ್ಞಾನ ಸಮಾವೇಶ ಒಕ್ಕೂಟ (ಐಟಿಸಿಎ) ಮಾಡಿಕೊಂಡ ಒಡಂಬಡಿಕೆಯನ್ನು ವಿನಿಮಯ ಮಾಡಿಕೊಳ್ಳಲಾಯಿತು. ಸಮಾರಂಭದಲ್ಲಿ ಮಾತನಾಡಿದ ಸಚಿವರು, “ಸ್ವಾತಂತ್ರ್ಯದ 75ನೇ ವರ್ಷಾಚರಣೆ ಅಂಗವಾಗಿ ಐಟಿಸಿಎ 75 ಉಪಗ್ರಹಗಳನ್ನು ಉಡಾಯಿಸುತ್ತಿದೆ. ಈ ಪೈಕಿ ಒಂದು ಉಪಗ್ರಹವನ್ನು ರಾಜ್ಯ ಸರಕಾರದ ಸಹಕಾರದಲ್ಲಿ ಸರಕಾರಿ ಶಾಲೆಗಳ ಮಕ್ಕಳು ನಿರ್ಮಿಸುತ್ತಿದ್ದು, ಇದಕ್ಕೆ 1.90 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ,’ ಎಂದರು. ಉದ್ದೇಶಿತ ಉಪಗ್ರಹವು 1.50 ಕೆ.ಜಿ. ತೂಕವಿರಲಿದ್ದು, ಯೋಜನೆಯ ಗ್ರೌಂಡ್ ಸ್ಟೇಷನ್ ಕೂಡ ಮಲ್ಲೇಶ್ವರದ ಇದೇ ಕಾಲೇಜಿನ ಆವರಣದಲ್ಲಿ ಇರಲಿದೆ. ಎಲ್ಲ ನಿರ್ವಹಣೆಯೂ ಇಲ್ಲಿಂದಲೇ ಆಗಲಿದೆ.

ಯೋಜನೆಗೆ 20 ಸರಕಾರಿ ಶಾಲೆಗಳ 100 ಪ್ರತಿಭಾವಂತ ಮಕ್ಕಳನ್ನು ನಾನಾ ಸ್ಪರ್ಧೆ ಮತ್ತು ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಈ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಆನ್-ಲೈನ್, ಆಫ್-ಲೈನ್, ಹ್ಯಾಂಡ್ಸ್-ಆನ್ ಮತ್ತು ಟ್ಯುಟೋರಿಯಲ್ ಮಾದರಿಗಳಲ್ಲಿ ಪರಿಚಯಾತ್ಮಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಜತೆಗೆ, ಎರಡೂ ಭಾಷೆಗಳಲ್ಲಿ ಅಗತ್ಯ ಪಠ್ಯಗಳ ವೆಬ್-ಲಿಂಕ್ ಒದಗಿಸಲಾಗುವುದು. ಈ ಸಂಬಂಧದ ತರಗತಿಗಳು ಏಪ್ರಿಲ್ 22ರಿಂದ ಆರಂಭವಾಗಲಿವೆ ಎಂದು ಅವರು ಮಾಹಿತಿ ನೀಡಿದರು. ಈ ತರಬೇತಿಯಲ್ಲಿ ಉಪಗ್ರಹ ಪೇಲೋಡ್ ತಿಳಿವಳಿಕೆ, ನ್ಯಾನೋ ಉಪಗ್ರಹಗಳ ಪರಿಚಯ, ಬೆಂಗಳೂರಿನಲ್ಲಿರುವ ವೈಜ್ಞಾನಿಕ ಸಂಸ್ಥೆಗಳಿಗೆ ಭೇಟಿ, ಉಡಾವಣೆ ಸಮಯದಲ್ಲಿ ಶ್ರೀಹರಿಕೋಟಾಗೆ ಭೇಟಿ, ವಿಜ್ಞಾನಿಗಳೊಂದಿಗೆ ಸಂವಾದ, ಗ್ರೌಂಡ್ ಸ್ಟೇಷನ್ ನಲ್ಲಿ ತರಬೇತಿ, ಅಗತ್ಯ ಪುಸ್ತಕಗಳ ಪ್ರಕಟಣೆ ಮುಂತಾದ ಚಟುವಟಿಕೆಗಳು ಇರಲಿವೆ ಎಂದು ಅಶ್ವತ್ಥನಾರಾಯಣ ತಿಳಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಡಿ.ವಿ.ಸದಾನಂದ ಗೌಡ, ಸಮಾಜದ ಸಬಲೀಕರಣಕ್ಕೆ ವಿಜ್ಞಾನದ ಆವಿಷ್ಕಾರಗಳಲ್ಲಿ ಪರಿಹಾರೋಪಾಯಗಳಿವೆ.

- Advertisement -

ಆದ್ದರಿಂದ ಯುವಜನರಲ್ಲಿ ಮೊದಲಿನಿಂದಲೇ ವೈಜ್ಞಾನಿಕ ಕುತೂಹಲ ಬೆಳೆಸಬೇಕು,’ ಎಂದರು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಸ್. ಅಯ್ಯಪ್ಪನ್ ಮಾತನಾಡಿ, `ದೇಶದಲ್ಲಿ ಪ್ರತೀ ಒಂದು ಕೋಟಿ ಜನಸಂಖ್ಯೆಗೆ ಕೇವಲ 2,500 ಸಂಶೋಧಕರು ಮಾತ್ರವೇ ಇದ್ದಾರೆ. ಅಂದರೆ, ಒಟ್ಟಾರೆಯಾಗಿ ಈ ಸಂಖ್ಯೆ 5 ಲಕ್ಷವನ್ನೂ ದಾಟುವುದಿಲ್ಲ. ಹೀಗಾಗಿ ನಮ್ಮಲ್ಲಿ ಆಹಾರ-ಧಾನ್ಯಗಳು ವ್ಯರ್ಥವಾಗುತ್ತಿವೆ. ಮುಂದುವರಿದ ದೇಶಗಳಿಗೆ ಹೋಲಿಸಿದರೆ ಇದು ತೀರಾ ಕಡಿಮೆಯಾಗಿದೆ. ಜಾಗತಿಕ ಚಿಂತನೆ ಮತ್ತು ಸ್ಥಳೀಯ ಉಪಯುಕ್ತತೆ ಎನ್ನುವ ಸೂತ್ರ ನಮ್ಮದಾಗಬೇಕು,’ ಎಂದರು. ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ನ್ಯಾನೋ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷ ಡಾ.ನವಕಾಂತ ಭಟ್, ಪ್ರೊ.ಎಚ್.ಎಸ್. ನಾಗರಾಜು, ಡಾ.ಹೇಮಂತಕುಮಾರ್, ಅಶೋಕ್ ರಾಯಚೂರು, ಸೌಮ್ಯಾ ವೈದ್ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಜ್ಞಾನ ಕಿಟ್ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿರ್ದೇಶಕ ಬಸವರಾಜ ಅವರು ಸ್ವಾಗತಿಸಿದರು. ವಿಜ್ಞಾನ ಪ್ರದರ್ಶನದ ಆಕರ್ಷಣೆ ಮಲ್ಲೇಶ್ವರದ ಪಿಯು ಕಾಲೇಜು ಮೈದಾನದಲ್ಲಿ ವಿಜ್ಞಾನ ಪ್ರದರ್ಶನ ಏರ್ಪಡಿಸಲಾಗಿತ್ತು. ಮಳಿಗೆಗಳಿಗೆ ಭೇಟಿ ನೀಡಿದ ಸಚಿವರು, ಸಂಸದರು ಮತ್ತು ವಿಜ್ಞಾನಿಗಳು, ಅಲ್ಲಿ ಪ್ರದರ್ಶನಕ್ಕಿಟ್ಟಿದ್ದ ವೈಜ್ಞಾನಿಕ ಸಾಧನಗಳು ಮತ್ತು ಉಪಕರಣಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಪ್ರದರ್ಶನಕ್ಕೆ ಸಾವಿರಾರು ವಿಜ್ಞಾನಾಸಕ್ತರು ಕೂಡ ಭೇಟಿ ನೀಡಿದ್ದು, ಗಮನಾರ್ಹವಾಗಿತ್ತು. ಕಾರ್ಯಕ್ರಮದಲ್ಲಿ ಉಪಗ್ರಹಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಕೈಪಿಡಿಯನ್ನೂ ಬಿಡುಗಡೆ ಮಾಡಲಾಯಿತು. ಜೊತೆಗೆ, ಎರಡು ಸರಕಾರಿ ಶಾಲೆಗಳಿಗೆ ಸಾಂಕೇತಿಕವಾಗಿ ವಿಜ್ಞಾನದ ಪ್ರಯೋಗ ಕಿಟ್ ವಿತರಿಸಲಾಯಿತು. ಉಳಿದ ಶಾಲೆಗಳಿಗೆ ಬಿಇಒಗಳ ಮೂಲಕ ಈ ಕಿಟ್ ತಲುಪಿಸಲಾಗುವುದು ಎಂದು ಸಚಿವರು ತಿಳಿಸಿದರು.



Join Whatsapp