ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆಗೆ ಕಾರಣರಾಗಿರುವ ಸಚಿವ ಈಶ್ವರಪ್ಪ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆಗೆ ಮುತ್ತಿಗೆ ಹಾಕಲು ಹೊರಟ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಇತರ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದು ಬಳಿಕ ಬಿಡುಗಡೆ ಮಾಡಿದರು.
ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಮತ್ತಿತರ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ರೇಸ್ ಕೋರ್ಸ್ ರಸ್ತೆಯಲ್ಲಿ ಗುರುವಾರ ಬಂಧಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಸಲೀಂ ಅಹ್ಮದ್, ಧ್ರುವನಾರಾಯಣ್, ಶಾಸಕರಾದ ಪ್ರಿಯಾಂಕ್ ಖರ್ಗೆ, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಗೋವಿಂದರಾಜ್ ಮತ್ತಿತರರು ಬಂಧನಕ್ಕೆ ಒಳಗಾದರು.
ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಿಂದ ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ರ‍್ಯಾಲಿ ನಡೆಸಿ, ಮುಖ್ಯಮಂತ್ರಿಗೆ ನಿವಾಸದ ಕಡೆಗೆ ಕಾಲ್ನಡಿಗೆಯಲ್ಲಿ ಹೊರಟರು. ಭಾರಿ ಸಂಖ್ಯೆಯಲ್ಲಿದ್ದ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ರೇಸ್ ಕೋರ್ಸ್ ರಸ್ತೆ ದಾಟಿ ಹೋಗದಂತೆ ಬ್ಯಾರಿಕೇಡ್ ಗಳನ್ನು ಅಳವಡಿಸಿ ತಡೆದು ಪೊಲೀಸರು ವಶಕ್ಕೆ ಪಡೆದರು.
ರ‍್ಯಾಲಿಯ ವೇಳೆ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಬಿಜೆಪಿ ಮತ್ತು ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿದರು. ಭ್ರಷ್ಟ ಸರ್ಕಾರ, ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ಮಧ್ಯೆ ವಾಗ್ವಾದ, ನೂಕಾಟ. ತಳ್ಳಾಟ ನಡೆಯಿತು.
ಕಾಂಗ್ರೆಸ್ ನಾಯಕರು ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕಲು ಯೋಜನೆ ಹಾಕಿಕೊಂಡಿದ್ದರಿಂದ ಕುಮಾರಕೃಪ ರಸ್ತೆಯಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಪೊಲೀಸರು ಸಂಚಾರ ನಿರ್ಬಂಧಿಸಿದರು. ರೇಸ್ ಕೋರ್ಸ್ ರಸ್ತೆಯಯಲ್ಲಿ ಖಾಕಿ ಸರ್ಪಗಾವಲು ಹಾಕಲಾಗಿತ್ತು.
ಬ್ಯಾರಿಕೇಡ್ ಮೇಲೆ ಜಿಗಿದ ಡಿಕೆಶಿ
ಬ್ಯಾರಿಕೇಡ್ ಮೇಲೆ ಜಿಗಿದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸುರ್ಜೇವಾಲಾ, ಸಲೀಂ ಅಹಮದ್ ಮುಂದೆ ಸಾಗಿದರು. ಈ ವೇಳೆ ಪೊಲೀಸರು ಮತ್ತು ಕಾಂಗ್ರೆಸ್ ನಾಯಕರ ನಡುವೆ ವಾಗ್ವಾದ ನಡೆಯಿತು.
ಮುಖ್ಯಮಂತ್ರಿ ನಿವಾಸ ತಲುಪುವ ಮಾರ್ಗಮಧ್ಯದಲ್ಲೇ ಪ್ರತಿಭಟನಕಾರರನ್ನು ಬ್ಯಾರಿಕೇಡ್ ಹಾಕಿ ಮುಂದೆ ಹೋಗದಂತೆ ತಡೆದ ಪೊಲೀಸರು, ಕೈ ನಾಯಕರನ್ನು ವಶಕ್ಕೆ ಪಡೆದರು.