►ಮಿತ್ರ ಪಕ್ಷ ಕಾಂಗ್ರೆಸ್, NCP ಗಳಲ್ಲಿ ತಳಮಳ !
ಮುಂಬೈ : ಬಿಜೆಪಿ ಮುಖಂಡ ಮತ್ತು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ರನ್ನು ಶಿವಸೇನೆಯ ಮುಖಂಡ ಸಂಜಯ್ ರಾವತ್ ಅವರು ರಹಸ್ಯವಾಗಿ ಭೇಟಿ ಮಾಡಿದ್ದಾರೆ. ಮುಂಬೈನ ಹೋಟೆಲೊಂದರಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದ್ದಾರೆಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅವರ ರಹಸ್ಯ ಸಭೆ ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇದೇ ವೇಳೆ ಈ ಭೇಟಿ ಶಿವಸೇನೆಯ ಮಿತ್ರಪಕ್ಷಗಳಾದ ಕಾಂಗ್ರೆಸ್ ಹಾಗೂ NCP ಗಳಲ್ಲಿ ತಳಮಳ ಸೃಷ್ಟಿಸಿದೆ ಎನ್ನಲಾಗಿದೆ.
ಆದರೆ, ಈ ಸಭೆಯು ರಾಜಕೀಯವಲ್ಲ ಎಂದು ಬಿಜೆಪಿ ನಂತರ ಸ್ಪಷ್ಟಪಡಿಸಿದೆ. “ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಸಂಜಯ್ ರಾವತ್ ಪಡ್ನವೀಸ್ ಅವರನ್ನು ಸಂದರ್ಶನ ನಡೆಸಲಿದ್ದಾರೆ,ಅದಕ್ಕಾಗಿ ಈ ಬಗ್ಗೆ ಚರ್ಚಿಸಲು ಇಬ್ಬರೂ ಭೇಟಿಯಾಗಿದ್ದಾರೆ” ಎಂದು ಬಿಜೆಪಿಯ ರಾಜ್ಯ ವಕ್ತಾರ ಕೇಶವ್ ಉಪಾಧ್ಯಾಯ ಟ್ವೀಟ್ ಮಾಡಿದ್ದಾರೆ. ಬಿಹಾರ ಚುನಾವಣಾ ಪ್ರಚಾರದ ನಂತರ ಸಂದರ್ಶನ ನಡೆಸುವುದಾಗಿ ಪಡ್ನವೀಸ್ ಸಂಜಯ್ ರಾವತ್ ಅವರಿಗೆ ಭರವಸೆ ನೀಡಿದ್ದಾರೆ ಎಂದು ಉಪಾಧ್ಯಾಯ ಹೇಳಿದ್ದಾರೆ.
ಎರಡೂ ಪಕ್ಷಗಳ ಹೇಳಿಕೆಗಳೇನೇ ಇದ್ದರೂ ಬಿಹಾರ ಚುನಾವಣೆಯ ಈ ಸಂದರ್ಭದಲ್ಲಿ ನಡೆದ ಈ ಭೇಟಿ ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಚುನಾಯಿತ ಸರ್ಕಾರಗಳನ್ನು ಅನೈತಿಕ ಮಾರ್ಗಗಳ ಮೂಲಕ ಬುಡಮೇಲುಗೊಳಿಸಿದ ಇತಿಹಾಸವಿರುವ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಅಧಿಕಾರ ಕೈತಪ್ಪಿರುವುದು ನುಂಗಲಾರದ ತುತ್ತಾಗಿದೆ. ಅಲ್ಲಿ ಯಾವ ಮಾರ್ಗದ ಮೂಲಕವಾದರೂ ಅಧಿಕಾರ ಮರಳಿ ಪಡೆಯಲು ಹಲವು ಕುತಂತ್ರಗಳ ಪ್ರಯತ್ನಗಳನ್ನು ನಡೆಸುತ್ತಲೇ ಇದೆ. ಹೀಗಿರುವಾಗ ಈ ಭೇಟಿ ಚರ್ಚಾ ವಿಷಯವಾಗಿದೆ.