ಬೆಂಗಳೂರು: ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ನಾಯಕ ಮತ್ತು ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಬಂಧನ ಮುಂಬರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ತನ್ನ ವಿರೋಧಿಗಳನ್ನು ಹತ್ತಿಕ್ಕಲು ಸಂಘ ಪರಿವಾರದ ತಾಜಾ ಕ್ರಮವಾಗಿದೆ ಎಂದು ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ ಸೋರೆನ್ ಅವರನ್ನು ಬಂಧಿಸಿದೆ. ದೇಶದ ಕಾನೂನನ್ನು ಉಲ್ಲಂಘಿಸುವವರು ಯಾವುದೇ ಪಕ್ಷದವರಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇಲ್ಲಿ ಚರ್ಚೆ ಇರುವುದು ಪ್ರಕರಣದ ಸರಿ ತಪ್ಪುಗಳ ವಿಚಾರದಲ್ಲಲ್ಲ, ಬದಲಿಗೆ ಆರೋಪಿ ಯಾವ ಪಕ್ಷದವರು ಎಂಬುದರ ಆಧಾರ ಮೇಲೆ ಕ್ರಮ ನಿರ್ಧರಿಸಲಾಗುತ್ತಿರುವ ದ್ವಂದ್ವ ನೀತಿ ಕಳವಳ ಉಂಟುಮಾಡುತ್ತಿದೆ ಎಂದರು.
ಬಹಳ ಕಾಲದಿಂದ ಕೇಂದ್ರೀಯ ಸಂಸ್ಥೆಗಳು ಆಡಳಿತ ವಿರೋಧಿ ಧ್ವನಿಗಳನ್ನು ಬೆದರಿಸಲು ಮತ್ತು ಅಡಗಿಸಲು ಆಡಳಿತ ಪಕ್ಷದ ಸಾಧನಗಳಾಗಿ ಮಾರ್ಪಟ್ಟಿವೆ. ಎದುರಾಳಿಗಳಿಲ್ಲದ ಚುನಾವಣಾ ಪ್ರಕ್ರಿಯೆ ಪ್ರಜಾಪ್ರಭುತ್ವವಲ್ಲ, ಅದು ಪ್ರಜಾಪ್ರಭುತ್ವದ ಅಣಕು ಎಂದರು.