ವಿದ್ಯಾರ್ಥಿಗಳಲ್ಲಿ ಕೋಮುವಾದದ ವಿಷ ಬಿತ್ತಿ ಗಲಭೆಗೆ ಸಂಚು ರೂಪಿಸುತ್ತಿರುವ ಸಂಘಪರಿವಾರ: ಪಾಪ್ಯುಲರ್ ಫ್ರಂಟ್

Prasthutha|

- Advertisement -

ಬೆಂಗಳೂರು: ಸ್ಕಾರ್ಫ್ ಗೆ ಸಂಬಂಧಿಸಿ ಅನಗತ್ಯ ವಿವಾದ ಸೃಷ್ಟಿಸುವ ಮೂಲಕ ಬಿಜೆಪಿ-ಸಂಘಪರಿವಾರವು ಕಾಲೇಜು ವಿದ್ಯಾರ್ಥಿಗಳಲ್ಲಿ ಕೋಮುವಾದದ ವಿಷ ಬಿತ್ತಿ ಗಲಭೆಗೆ ಸಂಚು ರೂಪಿಸುತ್ತಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಹೇಳಿದ್ದಾರೆ.

ಉಡುಪಿಯ ಸರಕಾರಿ ಕಾಲೇಜಿನಲ್ಲಿ ಸ್ಕಾರ್ಫ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಿಸಿದ ಬಳಿಕ ದಿನ ಕಳೆದಂತೆ ರಾಜ್ಯದ ಇತರ ಜಿಲ್ಲೆಗಳ ಕೆಲವೊಂದು ಕಾಲೇಜುಗಳಲ್ಲಿ ಸಂಘಪರಿವಾರಪ್ರೇರಿತ ವಿದ್ಯಾರ್ಥಿಗಳು ಬಿಗುವಿನ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಕೇಸರಿ ಶಾಲು ಧರಿಸಿ ರಾದ್ದಾಂತ ಸೃಷ್ಟಿ, ಕಾಲೇಜಿಗೆ ಕಲ್ಲು ತೂರಾಟ, ಕಾಲೇಜಿನ ಧ್ವಜ ಸ್ಥಂಭಕ್ಕೆ ಭಗವಾಧ್ವಜ ಅಳವಡಿಸಿದ್ದು ಜೊತೆಗೆ ಕೆಲವೊಂದು ಕಾಲೇಜು ಕ್ಯಾಂಪಸ್ ಗಳಲ್ಲಿ ಕಾಲೇಜಿಗೆ ಸಂಬಂಧಿಸದ ವ್ಯಕ್ತಿಗಳು ಕೇಸರಿ ಶಾಲು ಧರಿಸಿ ಬಂದಿರುವುದು, ಸಂಘಪರಿವಾರದ ನಾಯಕರು ಕೇಸರಿ ಶಾಲು ಪೂರೈಸುತ್ತಿರುವುದು ವರದಿಯಾಗಿದೆ. ಈ ನಡುವೆ ಬಜರಂಗದಳದ ನಾಯಕರು ಅಶಾಂತಿ ಹರಡಲು ವಿದ್ಯಾರ್ಥಿಗಳಿಗೆ ನೈತಿಕ ಸ್ಥೈರ್ಯ ತುಂಬುತ್ತಿರುವುದು ಕಂಡು ಬಂದಿದೆ. ಈ ಎಲ್ಲಾ ಕೃತ್ಯಗಳನ್ನು ಗಮನಿಸಿದರೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಒಡಕುಂಟು ಮಾಡಿ ಕಾಲೇಜು ಕ್ಯಾಂಪಸ್ ಗಳನ್ನು ದ್ವೇಷ ರಾಜಕಾರಣದ ಪ್ರಯೋಗ ಶಾಲೆಗಳಾಗಿ ಮಾರ್ಪಡಿಸುತ್ತಿರುವ ಪ್ರಯತ್ನಗಳು ನಡೆಯುತ್ತಿರುವುದು ಸ್ಷಷ್ಟವಾಗುತ್ತಿದೆ. ಈ ಘಟನೆಗಳ ಹಿಂದಿನ ಕಾಣದ ಕೈಗಳ ಕೈವಾಡವನ್ನು ಪೊಲೀಸ್ ಇಲಾಖೆ ರಾಜ್ಯದ ಜನತೆಯ ಮುಂದೆ ಬಹಿರಂಗಪಡಿಸಿ ಕ್ಯಾಂಪಸ್ ನೊಳಗಿನ ಸೌಹಾರ್ದ, ಸಹಬಾಳ್ವೆಯ ವಾತಾವರಣವನ್ನು ಮರುಸ್ಥಾಪಿಸಬೇಕು. ಎಲ್ಲಾ ವರ್ಗಗಳಿಗೆ ತಮ್ಮ ಸಂವಿಧಾನಿಕ ಹಕ್ಕುಗಳನ್ನು ಖಾತರಿಪಡಿಸಿಕೊಂಡು, ಸೌಹಾರ್ದ ವಾತಾವರಣ ನಿರ್ಮಿಸುವ ಹೊಣೆಗಾರಿಕೆ ಹೊಂದಿರುವ ರಾಜ್ಯ ಸರಕಾರ ಪಕ್ಷಪಾತ ಧೋರಣೆ ಅನುಸರಿಸುತ್ತಿರುವುದು ಕಳವಳಕಾರಿಯಾಗಿದೆ ಎಂದು ಹೇಳಿದರು.

- Advertisement -

ಈ ಎಲ್ಲವುಗಳ ಮಧ್ಯೆ, ಉನ್ನತ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕಾದ ವಿದ್ಯಾರ್ಥಿಗಳನ್ನು ಕೋಮು ಆಧಾರಿತವಾಗಿ ವಿಭಜಿಸುವ ಸಂಘಪರಿವಾರದ ಹೀನ ಮನೋಸ್ಥಿತಿಯನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳಬೇಕಾಗಿದೆ. ಸ್ಕಾರ್ಫ್ ಅನ್ನು ವಿವಾದಕ್ಕೊಳಪಡಿಸಿರುವುದರ ಹಿಂದಿನ ಪಿತೂರಿಯ ಬಗ್ಗೆ ಪೋಷಕ ವರ್ಗವು ಜಾಗೃತವಾಗಿ ಮಕ್ಕಳ ಶೈಕ್ಷಣಿಕ ಹಿತಾಸಕ್ತಿಗೆ ಒತ್ತು ನೀಡಬೇಕು. ಯಾವುದೇ ಸಮುದಾಯದ ಮಕ್ಕಳು ವಿಶೇಷವಾಗಿ ಮುಸ್ಲಿಮ್ ಹೆಣ್ಮಕ್ಕಳು ತಮ್ಮ ಶಿಕ್ಷಣದ ಮೂಲಭೂತ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಂಡು ಅವರ ಸಬಲೀಕರಣದ ಹಾದಿಯನ್ನು ಸುಗಮಗೊಳಿಸಬೇಕಾಗಿದೆ ಎಂದು ಯಾಸಿರ್ ಹಸನ್ ಹೇಳಿದ್ದಾರೆ.

Join Whatsapp