ಕರ್ನಾಟಕವನ್ನು ಉತ್ತರ ಪ್ರದೇಶವನ್ನಾಗಿ ಮಾಡುವ ಕುಟಿಲ ತಂತ್ರವನ್ನು ವಿಫಲಗೊಳಿಸಿ: ಟಿ.ಎ ನಾರಾಯಣಗೌಡ

Prasthutha|

- Advertisement -

ಬೆಂಗಳೂರು: ಕರ್ನಾಟಕದ ಶಾಲೆ ಕಾಲೇಜುಗಳಲ್ಲಿ ಭುಗಿಲೆದ್ದಿರುವ ವಿವಾದ ದುರುದ್ದೇಶಪೂರ್ವಕವಾಗಿದ್ದು, ನಾಡಿನ ಶಾಂತಿ, ಸೌಹಾರ್ದತೆ, ಸಹಬಾಳ್ವೆಗೆ ಧಕ್ಕೆ ತಂದಿದೆ. ಕರ್ನಾಟಕವನ್ನು ಉತ್ತರ ಪ್ರದೇಶವನ್ನಾಗಿಸುವ ಈ ಕುಟಿಲ ತಂತ್ರವನ್ನು ರಾಜ್ಯದ ಶಾಂತಿಪ್ರಿಯ ನಾಗರಿಕರು ವಿಫಲಗೊಳಿಸಬೇಕು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡರವರು ಮನವಿ ಮಾಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ  ಅವರು, ಉಡುಪಿಯ ಒಂದು ಕಾಲೇಜಿನಲ್ಲಿ ಆರಂಭಗೊಂಡ ಸಮಸ್ಯೆ ಇಡೀ ರಾಜ್ಯಕ್ಕೆ ವ್ಯಾಪಿಸಲು ಕಾರಣವಾದರೂ ಏನು? ಎಲ್ಲೆಡೆ ಶಾಂತಿ ಕದಡಿ ಗಲಭೆಯೆಬ್ಬಿಸಲು ಹಿನ್ನೆಲೆಯಲ್ಲಿ ನಿಂತು ಸಂಚು ರೂಪಿಸಿದ ಸಂಘಟನೆಗಳಾದರೂ ಯಾವುವು? ಈ ಸಂಘಟನೆಗಳಿಗೆ ಸರ್ಕಾರದ ಬೆಂಬಲವಿದೆಯೇ? ವಿವಾದ ಆರಂಭಗೊಂಡಾಗಲೇ ಸರ್ಕಾರ ಮಧ್ಯಪ್ರವೇಶಿಸಿ, ಸೌಹಾರ್ದಯುತವಾಗಿ ಬಗೆಹರಿಸಬಹುದಿತ್ತು. ಆದರೆ ಸರ್ಕಾರದ ಮಂತ್ರಿಗಳು, ಸಂಸದರು, ಶಾಸಕರುಗಳು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿ ಪ್ರತ್ಯಕ್ಷವಾಗಿ ಗಲಭೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದು ಅಕ್ಷಮ್ಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಶಿವಮೊಗ್ಗ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಧ್ವಜಸ್ಥಂಬದಲ್ಲಿ ಕೇಸರಿ ಧ್ವಜ ಹಾರಿಸಿದ್ದಾರೆ. ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ. ತದನಂತರ ಕಾಲೇಜಿನ ಇತರ ವಿದ್ಯಾರ್ಥಿಗಳು ಮುಸ್ಲಿಂ ಹೆಣ್ಣು ಮಕ್ಕಳಿಗೆ ಮಾನವ ಸರಪಳಿ ಮೂಲಕ ರಕ್ಷಣೆ ನೀಡಿದ್ದಾರೆ. 

ಶಾಲೆ, ಕಾಲೇಜುಗಳಲ್ಲಿ ಶಿರವಸ್ತ್ರ ಧರಿಸಬಹುದೇ ಇಲ್ಲವೇ ಎಂಬುದನ್ನು ಭಾರತ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ನ್ಯಾಯಾಲಯಗಳು ತೀರ್ಮಾನಿಸಲಿ. ಆದರೆ ನ್ಯಾಯಾಲಯದ ವಿಚಾರಣೆ ನಡೆಯುತ್ತಿರುವಾಗಲೇ ಮಕ್ಕಳನ್ನು ಬಳಸಿಕೊಂಡು ರಾಜಕೀಯದ ಬೇಳೆ ಬೇಯಿಸಿಕೊಳ್ಳುವುದು ಎಷ್ಟು ಸರಿ? ರಾಷ್ಟ್ರಕವಿ ಕುವೆಂಪು ಅವರು ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಕರೆದರು. ನಮ್ಮದು ಶರಣರು, ಸಂತರ ನಾಡು. ಇಂಥ ನಾಡಿಗೆ ಧರ್ಮಗಳ ಹೆಸರಲ್ಲಿ ಬೆಂಕಿ ಹಚ್ಚುತ್ತಿರುವ ದುಷ್ಟರು ಭವಿಷ್ಯದ ದಿನಗಳನ್ನು ಇನ್ನಷ್ಟು ಅಪಾಯಕಾರಿಯಾಗಿಸುತ್ತಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ ಮೂರು-ನಾಲ್ಕು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿ ನಿಜಕ್ಕೂ ನಾಡಿನ ಭವಿಷ್ಯದ ಕುರಿತು ಆತಂಕವಾಗುತ್ತಿದೆ. ನಾವು ಎಂಥ ಸಮಾಜವನ್ನು ಕಟ್ಟುತ್ತಿದ್ದೇವೆ.? ಹದಿನೈದು-ಹದಿನಾರು ವಯಸ್ಸಿನ ಮಕ್ಕಳಲ್ಲಿ ಧರ್ಮದ್ವೇಷದ ವಿಷಬೀಜ ಬಿತ್ತಲಾಗಿದೆ. ಇದರ ಪರಿಣಾಮ ಘೋರವಾಗಲಿದೆ. ರಾಜ್ಯ ಸರ್ಕಾರ ಶಾಲೆ-ಕಾಲೇಜುಗಳಿಗೆ ಮೂರುದಿನಗಳ ಕಾಲ ರಜೆ ಘೋಷಿಸಿರುವುದು ಸರಿಯಾದ ಕ್ರಮ. ಇನ್ನಷ್ಟು ಅಪಾಯಗಳು ಆಗದಂತೆ ತಡೆಯುವುದು ಅನಿವಾರ್ಯವಾಗಿತ್ತು. ಪರಿಸ್ಥಿತಿ ತಿಳಿಯಾದ ನಂತರ ಶಾಲೆ-ಕಾಲೇಜುಗಳನ್ನು ಆರಂಭಿಸಬೇಕು. ಪ್ರಚೋದನಾಕಾರಿಯಾಗಿ ಮಾತಾಡುವವರ ಬಾಯಿ ಮುಚ್ಚಿಸಬೇಕು. ಸಮಾಜಘಾತಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Join Whatsapp