ವಿದ್ಯಾರ್ಥಿಗಳನ್ನು ಬಳಸಿಕೊಂಡು ಪುತ್ತೂರಿನಲ್ಲಿ ಕೋಮುಗಲಭೆಗೆ ಸಂಚು ರೂಪಿಸುತ್ತಿರುವ ಸಂಘಪರಿವಾರ: ಕ್ಯಾಂಪಸ್ ಫ್ರಂಟ್

Prasthutha: November 25, 2021
ಆರೋಪಿಗಳನ್ನು ಬಂಧಿಸದಿದ್ದರೆ "ಪುತ್ತೂರು ಚಲೋ"

ಪುತ್ತೂರು: ಪುತ್ತೂರಿನ ಕೊಂಬೆಟ್ಟುಸರಕಾರಿ ಪಿ ಯು ಕಾಲೇಜಿನಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮೇಲಿನ ಹಲ್ಲೆ, ತ್ರಿಶೂಲ ದಾಳಿ, ಬೆದರಿಕೆಗಳು ನಡೆಯಲು ವಿದ್ಯಾರ್ಥಿಗಳನ್ನು ಪ್ರಚೋದಿಸಿದ ಸಂಘಪರಿವಾರದ ನಾಯಕರಾದ ಅರುಣ್ ಕುಮಾರ್ ಪುತ್ತಿಲ, ಚಿನ್ಮಯ ಈಶ್ವರಮಂಗಳ ನೇರ ಹೊಣೆಯಾಗಿದ್ದಾರೆ. ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ ABVP ಪುಂಡರನ್ನು ಮತ್ತು ಪ್ರಚೋದನೆ ನೀಡಿದ ಸಂಘಪರಿವಾರದ ನಾಯಕರನ್ನು ಶೀಘ್ರ ಬಂಧಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರ ಒತ್ತಾಯಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ತಾಲೂಕು ದ.ಕ ಜಿಲ್ಲೆಯಲ್ಲಿ ಎರಡನೇ ಶೈಕ್ಷಣಿಕ ಕೇಂದ್ರವಾಗಿ ಬೆಳೆಯುತ್ತಿದೆ, ಸಾವಿರಾರು ವಿದ್ಯಾರ್ಥಿಗಳು ಪರಸ್ಪರ ಸಾಮರಸ್ಯದಿಂದ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ಸೌಹಾರ್ದಯುತವಾಗಿ ವಿದ್ಯಾರ್ಜನೆ ಮಾಡುವುದನ್ನು ಸಹಿಸದ ಸಂಘಪರಿವಾರ ದುಷ್ಕರ್ಮಿಗಳು, ABVP ಸಂಘಟನೆಯ ಕಾರ್ಯಕರ್ತರ ಮೂಲಕ ತಾಲೂಕಿನ ಎಲ್ಲಾ ಕಾಲೇಜಿನಲ್ಲಿ ಕೋಮು ಪ್ರಚೋದನಾ ಭಾಷಣ ಮಾಡುತ್ತಿದ್ದಾರೆ.

ಸಂಘಪರಿವಾರದ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ ಮತ್ತು ಚಿನ್ಮಯ ಎಂಬುವವರ ಒಂದು ತಂಡವು ಎಲ್ಲಾ ಕಾಲೇಜುಗಳಿಗೆ ತರಳಿ ಹಿಂದು ಹುಡುಗಿಯರ ರಕ್ಷಣೆ, ಲವ್ ಜಿಹಾದ್, ಮುಂತಾದ ಮತೀಯ ವಿಚಾರಗಳ ಬಗ್ಗೆ ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸುವಂತೆ ಮತ್ತು ಯಾರಾದರೂ ಹಿಂದು ಹಿಡುಗಿಯರ ಬಳಿ ಮಾತನಾಡಿದರೆ ಹಲ್ಲೆ ಮಾಡುವಂತೆ ಪ್ರಚೋದಿಸಿದ್ದಾರೆ. ಅಲ್ಲದೇ ಕಳೆದ ವಾರ ಸರಕಾರಿ ಪಿ ಯು ಕಾಲೇಜು ಕೊಂಬೆಟ್ಟು ಪರಿಸರದ ನಟರಾಜ ವೇದಿಕೆಗೆ ಹಿಂದೂ ವಿದ್ಯಾರ್ಥಿಗಳನ್ನು ಕರೆಸಿ ಈ ಕಾರ್ಯಕ್ರಮ ಕೂಡ ನಡೆಸಿದ್ದಾರೆ. ಸಂಘಪರಿವಾರದ ಕೋಮು ಪ್ರಚೋದನೆಗೆ ಒಳಗಾಗಿ ಕೊಂಬೆಟ್ಟು ಕಾಲೇಜಿನಲ್ಲಿ ಇತ್ತೀಚಿಗೆ ನಾಲ್ಕು ಹಲ್ಲೆ ಪ್ರಕರಣಗಳು ನಡೆದಿವೆ. ಇದೆಲ್ಲವೂ ಕ್ಷುಲ್ಲಕ ವಿಚಾರವನ್ನು ನೆಪವಾಗಿಟ್ಟುಕೊಂಡು ನಡೆದ ಘಟನೆಯಾಗಿದೆ ಎಂದು ಅವರು ಆರೋಪಿಸಿದರು.


ಮೂರನೇ ಘಟನೆಯಲ್ಲಿ ಹಲ್ಲೆಯಾದ ವಿದ್ಯಾರ್ಥಿಗೆ ನ್ಯಾಯ ಒದಗಿಸುವಂತೆ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ ನಡೆಸಿತ್ತು. ಅಲ್ಲದೇ ಕಾಲೇಜಿಗೆ ನಿಯೋಗ ತೆರಳಿ ಹಲ್ಲೆ ಮಾಡಿದ ಎಬಿವಿಪಿ ಪುಂಡರನ್ನು ಅಮಾನತು ಮಾಡುವಂತೆ ಮನವಿ ಮಾಡಿತ್ತು. ಇದನ್ನರಿತ ಸಂಘಪರಿವಾರಿವು ಹಿಂದು ವಿದ್ಯಾರ್ಥಿಗಳಿಗೆ ‘ಹಲ್ಲೆಯತ್ನವಾಗಿದೆ’ ಎಂದು ಗಾಳಿ ಸುದ್ದಿ ಹಬ್ಬಿಸಿ ಬುಧವಾರದಂದು ಎಬಿವಿಪಿ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾ ಮಾಡಿ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಲಾಗಿದೆ. ಈ ಪ್ರತಿಭಟನೆಗೆ ಸಂಘಪರಿವಾರವು ಹೊರಗಿನ ಹಲವು ಕಾರ್ಯಕರ್ತರನ್ನೂ ಕೂಡ ಸೇರಿಸಿ ಅಲ್ಲಿ ಕೈಫುದ್ದೀನ್, ಇಮ್ರಾನ್, ತೌಸೀಫ್ ಎಂಬ ವಿದ್ಯಾರ್ಥಿಗಳಿಗೆ ವಿನಾಕಾರಣ ತ್ರಿಶೂಲದಿಂದ ಹಲ್ಲೆಮಾಡಿದ್ದಾರೆ ಎಂದು ಅವರು ದೂರಿದರು.

ಒಟ್ಟಾರೆ ಘಟನೆಯನ್ನು ನೋಡುವಾಗ ಸಂಘಪರಿವಾರವು ವಿದ್ಯಾರ್ಥಿಗಳನ್ನು ಬಳಸಿ ಅವರ ಕೈಗೆ ಆಯುಧಗಳನ್ನು ನೀಡಿ ಕೋಮುಗಲಭೆಗೆ ಪ್ರಚೋದಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಇದೆಲ್ಲಾ ನಡೆಯುತ್ತಿದ್ದರೂ ಪೋಲಿಸ್ ಇಲಾಖೆಯು ಮೌನವಾಗಿರುವುದು ಸಂಶಯಕ್ಕೆಡೆ ಮಾಡಿಕೊಟ್ಟಿದೆ. ಆದ್ದರಿಂದ ಈ ಎಲ್ಲಾ ಘಟನೆಗಳ ಬಗ್ಗೆ ಸೂಕ್ತ ತನಿಖೆ ನಡೆಸಲು ಇಲಾಖೆಯು ಉನ್ನತ ಅಧಿಕಾರಿಗಳನ್ನು ನೇಮಿಸಿಬೇಕು. ದುಷ್ಕರ್ಮಿಗಳಿಗೆ ಸೂಕ್ತ ಶಿಕ್ಷೆ ನೀಡಿ ಅಮಾಯಕ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು. ತ್ರಿಶೂಲದಿಂದ ಹಲ್ಲೆ ನಡೆಸಿದ ಆರೋಪಿಗಳನ್ನು ಶೀಘ್ರ ಬಂಧಿಸದಿದ್ದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳನ್ನು ಸೇರಿಸಿ “ಪುತ್ತೂರು ಚಲೋ” ನಡೆಸಲಾಗುವುದು ಎಂದು ಅನೀಸ್ ಕುಂಬ್ರ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ಜಿಲ್ಲಾ ಮುಖಂಡ ರಿಯಾಝ್ ಅಂಕತ್ತಡ್ಕ, ಜಿಲ್ಲಾ ಕಾರ್ಯದರ್ಶಿ ಮುಸ್ತಫಾ ಕೊಡಿಪ್ಪಾಡಿ ಉಪಸ್ಥಿತರಿದ್ದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!