ನವದೆಹಲಿ: ಬಸ್ ಚಾಲಕರೊಬ್ಬರ ಪುತ್ರಿ ಸನಾ ಅಲಿ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋದ ತಂತ್ರಜ್ಞಾನ ಎಂಜಿನಿಯರ್ ವಿಭಾಗದ ಸಹಾಯಕ ವಿಜ್ಞಾನಿಯಾಗಿ ಸೇರ್ಪಡೆಯಾಗಿದ್ದಾರೆ.
ಮಧ್ಯಪ್ರದೇಶದ ವಿಧಿಶಾ ಜಿಲ್ಲೆಗೆ ಸೇರಿದ ಸನಾ ಅಲಿಯವರು ಇಸ್ರೋದ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಹೊಸ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ.
ಸ್ಪಷ್ಟ ಗುರಿಯೊಡನೆ, ನಂಬಿಕೆಯೊಡನೆ ಕಲಿಕೆ ಮತ್ತು ಕಠಿಣ ದುಡಿಮೆಯಲ್ಲಿ ತೊಡಗಿಕೊಂಡು ಸ್ಪಷ್ಟ ಅರ್ಹತೆಯೊಡನೆ ಸನಾ ಅವರು ಈ ಹುದ್ದೆಗೆ ಏರಿದ್ದಾರೆ.
ಸನಾ ಅವರು ವಿಧಿಶಾದ ಸತಿ- ಸ್ಮಾರ್ಟ್ ಅಶೋಕ್ ಟೆಕ್ನಿಕಲ್ ಇನ್ ಸ್ಟಿಟ್ಯೂಟಿನಲ್ಲಿ ಬಿ.ಟೆಕ್. ಮತ್ತು ಎಂ. ಟೆಕ್. ಪದವಿಗಳನ್ನು ಪಡೆದಿದ್ದಾರೆ. ತಂದೆಯ ಕಡಿಮೆ ಆದಾಯದ ಕಾರಣಕ್ಕೆ ಓದು ಮುಗಿಸಲು ಸನಾ ಹಲವು ಕಷ್ಟಗಳನ್ನು ಎದುರಿಸಬೇಕಾಯಿತು.
ಸನಾರ ತಾಯಿ ಮಗಳ ಓದಿಗಾಗಿ ತನ್ನ ಆಭರಣಗಳನ್ನೆಲ್ಲ ಅಡವಿಟ್ಟರೆ, ತಂದೆ ಸಯೀದ್ ಸಾಜಿದ್ ಅಲಿಯವರು ಮಗಳ ಓದಿಗಾಗಿ ಸಾಕಷ್ಟು ಸಾಲ ಮಾಡಿದ್ದಾರೆ.
ಸನಾ ಯುವ ವಿಜ್ಞಾನಿಯಾಗಿ ಆಯ್ಕೆಯಾದ ಮೇಲೆ ಹೇಳಿದ್ದು ಇಷ್ಟು; ನಾನು ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದವಳು. ನಾನು ಎಲ್ಲ ಹೆಣ್ಣುಮಕ್ಕಳಿಗೂ ನೀಡುವ ಸಂದೇಶವೆಂದರೆ ಯಾವುದೇ ಸಮಸ್ಯೆಯನ್ನು ಪರಿಗಣಿಸದೆ ನಿಮ್ಮ ಶಿಕ್ಷಣ ಮುಗಿಸುವ ಗುರಿಯನ್ನು ಮಾತ್ರ ಹೊಂದಿರಿ. ನೀವಿದಕ್ಕೆ ಎಲ್ಲ ಬಗೆಯ ಪ್ರಯತ್ನ ಮತ್ತು ಸ್ಪಷ್ಟ ಗುರಿ ಸಾಧನೆಯ ಕಣ್ಣೋಟ ಹೊಂದಿರಬೇಕು.
“ನಿಮ್ಮನ್ನು ಕಾಡುವ ಬೆದರಿಸುವ ಎಲ್ಲ ವೈಫಲ್ಯಗಳನ್ನು ಕಠಿಣ ದುಡಿಮೆಯಿಂದ ಹಿಮ್ಮೆಟ್ಟಿಸಿ ನೀವು ಗುರಿ ಸೇರಬೇಕಾಗಿದೆ” ಎಂದು ಸನಾ ಹೇಳಿದರು.
ಮಧ್ಯ ಪ್ರದೇಶದ ಮುಖ್ಯ ಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಸನಾ ಅಲಿಯವರ ಸಾಧನೆಗಳಿಗೆ ಶುಭ ಹಾರೈಸಿದ್ದಾರೆ.
“ಸನಾ, ತುಂಬು ಹಾರೈಕೆಗಳು. ನಿನ್ನ ಭವ್ಯ ಭವಿಷ್ಯಕ್ಕಾಗಿ ನನ್ನ ಶುಭ ಹಾರೈಕೆಗಳು. ನೂರಾರು ಕಷ್ಟಗಳ ನಡುವೆಯೂ ನೀನು ಮಾಡಿರುವ ಸಾಧನೆಯು ಇಡೀ ಮಧ್ಯಪ್ರದೇಶವೇ ಹೆಮ್ಮೆ ಪಡುವಂತಾದ್ದು” ಎಂದು ಜ್ಯೋತಿರಾದಿತ್ಯ ಸಿಂಧ್ಯಾ ಟ್ವೀಟ್ ಮಾಡಿದ್ದಾರೆ.