ದೆಹಲಿ ಗಲಭೆ ಚಾರ್ಜ್ ಶೀಟಿನಲ್ಲಿ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಶಿದ್ ಹೆಸರು !

Prasthutha|

ದೆಹಲಿ ಪೊಲೀಸರ ತಾರತಮ್ಯ ನೀತಿಯ ಉಚ್ಚಾಯ ಸ್ಥಿತಿಯಂತಿರುವ ದೆಹಲಿ ಗಲಭೆಯ ಚಾರ್ಜ್ ಶೀಟಿನಲ್ಲಿ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಮಂತ್ರಿ ಸಲ್ಮಾನ್  ಖುರ್ಶಿದ್ ಅವರ ಹೆಸರನ್ನು ಕೂಡಾ ಉಲ್ಲೇಖಿಸಲಾಗಿದೆ.  ಸೆಪ್ಟಂಬರ್ 17 ರಂದು ದೆಹಲಿ ಪೊಲೀಸರು ಸಲ್ಲಿಸಿದ್ದ 17,000 ಪುಟಗಳ ಚಾರ್ಜ್ ಶೀಟಿನಲ್ಲಿ ಸಿಎಎ ಕರಾಳ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟಿಸಿದ್ದವರ ಹೆಸರನ್ನು ಮಾತ್ರ ಉಲ್ಲೇಖಿಸಲಾಗಿತ್ತು ಎಂಬ ಆರೋಪವಿತ್ತು.  ಇದೀಗ ಚಾರ್ಜ್ ಶೀಟಿನಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿದ್ದರು ಎಂಬ ಕಾರಣಕ್ಕೆ ಸಲ್ಮಾನ್ ಖುರ್ಶಿದ್, ಬೃಂದಾ ಕಾರಟ್, ಕವಿತಾ ಕೃಷ್ಣನ್ ಅವರ ಹೆಸರನ್ನೂ ಚಾರ್ಜ್ ಶೀಟಿನಲ್ಲಿ ಹೆಸರಿಸಲಾಗಿದೆ ಎನ್ನಲಾಗಿದೆ.

ಚಾರ್ಜ್ ಶೀಟಿನಲ್ಲಿ ಉಲ್ಲೇಖಿಸಿರುವಂತೆ ಸಲ್ಮಾನ್ ಖುರ್ಶಿದ್, ಉಮರ್ ಖಾಲಿದ್, ನದೀಮ್ ಖಾನ್ ಇವರೆಲ್ಲಾ ಪ್ರತಿಭಟನಾ ಸ್ಥಳಗಳಿಗೆ ಬಂದು ಪ್ರಚೋದನಾತ್ಮಕ ಭಾಷಣ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆ ನೀಡಿದ್ದರು. ಆ ಪ್ರಕಾರ ಅವರೆಲ್ಲರನ್ನು ಹೆಸರಿಸಲಾಗಿದೆ.  ತನ್ನ ಹೆಸರು ಚಾರ್ಜ್ ಶೀಟಿನಲ್ಲಿ ಉಲ್ಲೇಖಿಸಿರುವ ಕುರಿತಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಲ್ಮಾನ್ ಖುರ್ಶಿದ್, “ನೀವು ಕಸ ಹೆಕ್ಕುವ ಕೆಲಸ ಮಾಡಿದ್ರೆ ತಮಗೆ ಸಾಕಷ್ಟು ಹೊಲಸು ಸಿಗುತ್ತದೆ. ಕಸ ಹೆಕ್ಕುವವರು ತಮ್ಮ ಕೆಲಸವನ್ನು ಸರಿಯಾಗಿ ಮಾಡಲ್ಲ, ಅವರಿಗೆ ಯಾರೇ ಕಸ ಕೊಟ್ಟರೂ ಅವರು ಅದನ್ನು ಪಡೆಯುತ್ತಾರೆ. ಈ ಪ್ರಚೋದನಾತ್ಮಕ ಭಾಷಣ ಎಂದರೇನು ಎಂದು ತಿಳಿಯಲು ಕುತೂಹಲವಿದೆ” ಎಂದವರು ಹೇಳಿದ್ದಾರೆ.  

- Advertisement -

“ನಾನು ಪ್ರಚೊದನಾತ್ಮಕ ಭಾಷಣ ಮಾಡಿದ್ದೇನೆ ಎಂದಾದರೆ ಪೊಲೀಸರು ಯಾಕೆ ಇಷ್ಟು ದಿನ ನನ್ನ ವಿರುದ್ಧ  ಕ್ರಮ ಕೈಗೊಂಡಿಲ್ಲ. ಪ್ರತ್ಯಕ್ಷದರ್ಶಿ ನಾನು ಭಾಷಣ ಮಾಡಿದ್ದೇನೆ ಎಂದು ಹೇಳಿರುವುದು ಸುಳ್ಳಲ್ಲವೇ?” ಎಂದವರು ಪ್ರಶ್ನಿಸಿದ್ದಾರೆ.

ಮುಖ್ಯವಾಗಿ ದೆಹಲಿ ಗಲಭೆಗಿಂತ ಮುಂಚೆ ಪೊಲೀಸ್ ಅಧಿಕಾರಿಗಳನ್ನು ತನ್ನ ಪಕ್ಕದಲ್ಲಿರಿಸಿಕೊಂಡು “ ಪೌರತ್ವ ವಿರೋಧಿ ಪ್ರತಿಭಟನೆಕಾರರು ತಮ್ಮ ಪ್ರತಿಭಟನೆ ನಿಲ್ಲಿಸದಿದ್ದರೆ ಟ್ರಂಪ್ ಹೋಗುವರೆಗೆ ಕಾಯಲಿದ್ದೇವೆ, ಆ ನಂತರ ನೋಡಿ ನಾವು ಏನು ಮಾಡಲಿದ್ದೇವೆ” ಎಂದು ಹೇಳಿಕೆ ನೀಡಿದ್ದ ದೆಹಲಿ ಗಲಭೆಯ ಮುಖ್ಯ ಕಾರಣಕರ್ತ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಕುರಿತಂತೆ ದೆಹಲಿ ಪೊಲೀಸರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ದೆಹಲಿ ಪೊಲೀಸರು ಪಕ್ಷಪಾತಿಯಾಗಿ ಕಾರ್ಯುನಿರ್ವಹಿಸುತ್ತಿದ್ದಾರೆ ಎಂಬ ಪ್ರಬಲ ಆರೋಪಗಳ ಮಧ್ಯೆಯೇ ಅವರ ಪ್ರತಿಯೊಂದು ನಡೆಗಳು ಸಾರ್ವಜನಿಕರ ಆರೋಪಗಳನ್ನು ಸಾಬೀತುಗೊಳಿಸುತ್ತಿದೆ

- Advertisement -