ನವದೆಹಲಿ: ಜೆಎನ್ ಯು ಕ್ಯಾಂಪಸ್ ನಲ್ಲಿ ಹಿಂದೂ ಸೇನೆ ಹಾಕಿದ್ದ ಬ್ಯಾನರ್ ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ.
ದಿಲ್ಲಿಯ ಜೆಎನ್ ಯು- ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಕ್ಯಾಂಪಸಿನಲ್ಲಿ ಹಿಂದೂ ಸೇನೆಯವರು ಭಗವಾ ಧ್ವಜ ಮತ್ತು ಬ್ಯಾನರ್ ಗಳನ್ನು ಹಾಕಿದ್ದರು. ಇದು ಗಮನಕ್ಕೆ ಬರುತ್ತಲೇ ಶುಕ್ರವಾರ ಬೆಳಿಗ್ಗೆ ಪೊಲೀಸರು ಬ್ಯಾನರ್ ಮತ್ತು ಬಾವುಟವನ್ನು ತೆರವು ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತ, ಪೊಲೀಸರು ಕೇಸರಿ ಧ್ವಜ ಎತ್ತಂಗಡಿ ಮಾಡುವ ಮೂಲಕ ಸಂವಿಧಾನವನ್ನು ಅಗೌರವಿಸಿದ್ದಾರೆ ಎಂದರು.
“ಕ್ಯಾಂಪಸಿನ ಒಳಗಡೆ ಹಿಂದುತ್ವ ಮತ್ತು ಕೇಸರಿಗೆ ಅವಮಾನ ಆಗುತ್ತಿದೆ. ಇದು ತಪ್ಪು ಮತ್ತು ದುರದೃಷ್ಟಕರ. ರಾಮ ನವಮಿಯಂದು ನಾವು ಗಲಾಟೆ ನೋಡಿದೆವು. ಇವರೇಕೆ ಕೇಸರಿ ವಿರೋಧಿಸುತ್ತಾರೆ? ಕೇಸರಿ ಮತ್ತು ಹಿಂದುತ್ವ ನಮ್ಮ ಸಂಸ್ಕೃತಿ. ಸುಪ್ರೀಂ ಕೋರ್ಟು ಸಹ ಹಿಂದೂ ನಮ್ಮ ಸಂಸ್ಕೃತಿ ಎಂದು ಹೇಳಿದೆ. ಅದನ್ನು ರಕ್ಷಿಸಬೇಕಾದುದು ನಮ್ಮ ಕರ್ತವ್ಯ. ಇದನ್ನು ಒಪ್ಪದವರು ದೇಶದ್ರೋಹಿಗಳು. ಹಿಂದೂ ಸಂಸ್ಕೃತಿಯಿಂದ ತೊಂದರೆ ಎನ್ನುವವರು ದೇಶ ಬಿಟ್ಟು ಹೋಗಬಹುದು” ಎಂದು ವಿಷ್ಣು ಗುಪ್ತ ಹೇಳಿದರು.
ಹಿಂದೂ ಸೇನೆಯ ಉಪಾಧ್ಯಕ್ಷ ಸುರ್ಜಿತ್ ಯಾದವ್ ವೀಡಿಯೋ ಕ್ಲಿಪ್ ಮೂಲಕ ಕಿಡಿ ಕಾರಿದ್ದಾರೆ. “ಜೆಎನ್ ಯುನಲ್ಲಿ ವಿರೋಧಿಗಳು ಕೇಸರಿಗೆ ಅವಮಾನ ಮಾಡುತ್ತಿದ್ದಾರೆ. ಅವರು ದಾರಿ ಸರಿ ಮಾಡಿಕೊಳ್ಳುವಂತೆ ಹಿಂದೂ ಸೇನೆ ಎಚ್ಚರಿಸುತ್ತದೆ. ಕೇಸರಿಯನ್ನು ಅವಮಾನಿಸಲು ಪ್ರಯತ್ನಿಸಬೇಡಿ. ನಾವು ನಿಮ್ಮನ್ನು ಮತ್ತು ಎಲ್ಲ ಧರ್ಮಗಳನ್ನು ಗೌರವಿಸುತ್ತೇವೆ. ಆದರೆ ಜೆಎನ್ ಯುನಲ್ಲಿ ಕೇಸರಿಗೆ ಅವಮಾನ ಆಗುತ್ತಲೇ ಇದ್ದರೆ ನಾವು ಇನ್ನೂ ಕಠಿಣ ಕಾರ್ಯದ ಮೂಲಕ ಪ್ರತಭಟಿಸಬೇಕಾಗುತ್ತದೆ.”
“ನಮಗೆ ಜೆಎನ್ ಯು ಕ್ಯಾಂಪಸಿನಲ್ಲಿ ಕೆಲವು ಬ್ಯಾನರ್ ಗಳನ್ನು ಮತ್ತು ಬಾವುಟ ಹಾರಿಸಿರುವುದು ಏಪ್ರಿಲ್ 15ರ ಶುಕ್ರವಾರ ಬೆಳಿಗ್ಗೆ ಗಮನಕ್ಕೆ ಬಂತು. ಇತ್ತೀಚಿನ ಅಹಿತಕರ ಘಟನೆಯ ಕಾರಣ ಕೂಡಲೆ ಅವನ್ನು ತೆರವು ಗೊಳಿಸಲಾಯಿತು ಮತ್ತು ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಲಾಗುವುದು.” ಎಂದು ವಾಯವ್ಯ ವಲಯದ ಡಿಸಿಪಿ ಮನೋಜ್ ಸಿ. ಹೇಳಿದರು.
ಕಳೆದ ಭಾನುವಾರ ಜೆಎನ್ ಯು ಕ್ಯಾಂಪಸಿನಲ್ಲಿ ಎಡರಂಗದ ವಿದ್ಯಾರ್ಥಿಗಳು ಮತ್ತು ಎಬಿವಿಪಿ ವಿದ್ಯಾರ್ಥಿಗಳ ನಡುವೆ ಹಿಂಸಾಚಾರ ನಡೆದಿತ್ತು. ಕಾವೇರಿ ಹಾಸ್ಟೆಲ್ ನಲ್ಲಿ ಮಾಂಸಾಹಾರ ಮತ್ತು ಸಸ್ಯಾಹಾರದ ಗಲಾಟೆಯಲ್ಲಿ ನೆತ್ತರು ಚೆಲ್ಲಿತ್ತು.