ಬೆಂಗಳೂರು ಗಲಭೆಯ ಸತ್ಯಶೋಧನಾ ವರದಿ ಸಲ್ಲಿಕೆಗೆ ‘ಸಿಟಿಝೆನ್ಸ್ ಫಾರ್ ಡೆಮಾಕ್ರಸಿ’ ಹೆಸರು ದುರ್ಬಳಕೆ । ಎಸ್ ಆರ್ ಹಿರೇಮಠ್ ಆಕ್ಷೇಪ

Prasthutha|

ಬೆಂಗಳೂರು : ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪೂರ್ವ ಯೋಜಿತ ಮತ್ತು ಸಂಘಟಿತವಾಗಿದ್ದು, ಹಿಂದುಗಳನ್ನೇ ಗುರಿಯಾಗಿಸಲಾಗಿತ್ತು ಎಂದು ಸತ್ಯಶೋಧನಾ ವರದಿ ನೀಡಿರುವ ನಿವೃತ್ತ ನ್ಯಾಯಮೂರ್ತಿ ಶ್ರೀಕಾಂತ್ ಡಿ. ಬಬಲಾಡಿ ನೇತೃತ್ವದ ಸಮಿತಿಯು, ಲೋಕನಾಯಕ ಜಯಪ್ರಕಾಶ್ ನಾರಾಯಣ್ ಸ್ಥಾಪಿಸಿ, ನೋಂದಾಯಿಸಿದ್ದ ‘ಸಿಟಿಝೆನ್ಸ್ ಫಾರ್ ಡೆಮಾಕ್ರಸಿ’ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಈ ಹೆಸರಿನ ಸಂಘಟನೆಯನ್ನು ಜಯಪ್ರಕಾಶ್ ನಾರಾಯಣ್ ಅವರು 46 ವರ್ಷಗಳ ಹಿಂದೆಯೇ ಸ್ಥಾಪಿಸಿ, ನೋಂದಾಯಿಸಿದ್ದರು ಎಂದು ತಿಳಿದು ಬಂದಿದೆ.

- Advertisement -

ಸಿಟಿಝೆನ್ಸ್ ಫಾರ್ ಡೆಮಾಕ್ರಸಿ ಸಂಘಟನೆಯ ಹೆಸರನ್ನು ಸಮಿತಿಯು ದುರ್ಬಳಕೆ ಮಾಡಿಕೊಂಡಿದೆ ಎಂದು ಸಂಘಟನೆಯ ಹಾಲಿ ಅಧ್ಯಕ್ಷ ಎಸ್.ಆರ್. ಹಿರೇಮಠ್ ಆಪಾದಿಸಿರುವುದಾಗಿ ‘ದಿ ಫೈಲ್ ಡಾಟ್ ಇನ್’ ವರದಿ ಮಾಡಿದೆ. ಕೂಡಲೇ ಸಿಟಿಝೆನ್ಸ್ ಫಾರ್ ಡೆಮಾಕ್ರಸಿ ಹೆಸರನ್ನು ಕೈಬಿಟ್ಟು ತಮ್ಮದೇ ಸಂಘಟನೆ ರೂಪಿಸಿ, ಅದರ ಹೆಸರಲ್ಲಿ ವರದಿ ಸಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಎಸ್.ಆರ್. ಹಿರೇಮಠ್ ಅವರು ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಭ್ರಷ್ಟಾಚಾರದ ವಿರುದ್ಧ ಮಾತ್ರ ಹೋರಾಡಿಲ್ಲ. ಅವರು ತುರ್ತು ಪರಿಸ್ಥಿತಿ ಹೇರಿಕೆ ಸಂದರ್ಭ, ಅಮೇರಿಕದಲ್ಲಿ ಹೋರಾಟ ನಡೆಸಿದ್ದರು. ಪರಿಸರ ಹೋರಾಟ ಸೇರಿದಂತೆ ಹಲವಾರು ಸಂವಿಧಾನಾತ್ಮಕ ಹೋರಾಟಗಳ ಬಗ್ಗೆ ಅವರು ಹೋರಾಟ ನಡೆಸಿದ್ದರು. ಹೀಗಾಗಿ ಅವರನ್ನು ಸಿಟಿಝೆನ್ಸ್ ಫಾರ್ ಡೆಮಾಕ್ರಸಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ.

- Advertisement -

1974ರ ಏ.13ರಂದು ಸಿಟಿಝೆನ್ಸ್ ಫಾರ್ ಡೆಮಾಕ್ರಸಿ ಸಂಘಟನೆ ಸಂಸ್ಥಾಪನೆಯಾಗಿತ್ತು. ಅದರ ಪ್ರಥಮ ಅಧ್ಯಕ್ಷರಾಗಿ ಜಯ ಪ್ರಕಾಶ್ ನಾರಾಯಣ್ ಆಯ್ಕೆಯಾಗಿದ್ದರು. ಹಲವಾರು ಪ್ರತಿಷ್ಠಿತರು ಈ ಸಂಘಟನೆಯ ಮುಖ್ಯಸ್ಥರಾಗಿದ್ದರು. ಈಗ ಹಿರೇಮಠ್ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದೀಗ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿಯಾಗಿ, ಬೆಂಗಳೂರು ಹಿಂಸಾಚಾರ ಕುರಿತ ವರದಿ ಸಲ್ಲಿಸಿದ್ದ ಸಿಟಿಝೆನ್ಸ್ ಫಾರ್ ಡೆಮಾಕ್ರಸಿ ಸಂಘಟನೆಯ ನಿಯೋಗದ ನೇತೃತ್ವ ನಿವೃತ್ತ ಜಿಲ್ಲಾ ನ್ಯಾಯಾಧೀಶ ಶ್ರೀಕಾಂತ್ ಡಿ. ಬಬಲಾಡಿ ವಹಿಸಿದ್ದರು. ನಿಯೋಗದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್, ನಿವೃತ್ತ ಐಎಎಫ್ ಎಸ್ ಅಧಿಕಾರಿ ಡಾ. ರಾಜು, ಡಾ. ಪ್ರಕಾಶ್, ನಿವೃತ್ತ ಡಿಜಿಪಿ ಎಂ.ಎನ್. ಕೃಷ್ಣಮೂರ್ತಿ, ಪತ್ರಕರ್ತ ಆರ್.ಕೆ. ಮಟ್ಟು, ಸಂತೋಷ್ ತಮ್ಮಯ್ಯ ಮುಂತಾದವರು ಇದ್ದರು.

Join Whatsapp