‘ಮುಂಬೈ ಪಾಕಿಸ್ತಾನ ಅಕ್ರಮಿತ ಕಾಶ್ಮೀರದಂತಿದೆ’ । ವಿವಾದಾತ್ಮಕ ನಟಿ ಕಂಗನಾ ರಾನಾವತ್ ಉದ್ಧಟತನದ ಹೇಳಿಕೆ !

Prasthutha|

ಬಾಲಿವುಡ್ ನ ವಿವಾದಾತ್ಮಕ ನಟಿ ಕಂಗಾನಾ ರಾಣಾವತ್ ಶಿವಸೇನೆಯ ಸಂಸದ ಸಂಜಯ್ ರಾವತ್ ರ ಹೇಳಿಕೆಯನ್ನು ಖಂಡಿಸುವ ಭರದಲ್ಲಿ ಮತ್ತೊಂದು ವಿವಾದಾತ್ಮ ಹೇಳಿಕೆ ನೀಡಿದ್ದಾಳೆ. ನಟ ಸುಶಾಂತ್ ಸಿಂಗ್ ರಾಜ್ ಪೂತ್ ಆತ್ಮಹತ್ಯೆಯಾದಂದಿನಿಂದ ಪ್ರತಿದಿನ ತನ್ನ ವೈಯುಕ್ತಿಕ ವರ್ಚಸ್ಸನ್ನು ಏರಿಸಲು ಹಾಗೂ ಜನರ ಗಮನ ತನ್ನತ್ತ ಸೆಳೆಯಲು ಒಂದಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದ  ಕಂಗನಾ, ಇದೀಗ ಉದ್ಧಟತನದ ಪರಮಾವಧಿಯ ಹೇಳಿಕೆಯನ್ನು ನೀಡಿ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಿದ್ದಾಳೆ.

ಸದ್ಯ ತನ್ನೂರು ಹಿಮಾಚಲ ಪ್ರದೇಶದಲ್ಲಿರುವ ಕಂಗನಾರ ಬಗ್ಗೆ ಬಿಜೆಪಿಯ ಶಾಸಕ ರಾಮ್ ಕದಮ್ ಎಂಬವರು, ಕಂಗನಾ ಡ್ರಗ್ ಮಾಫಿಯಾದ ಜಾಲವನ್ನು ಬಹಿರಂಗಪಡಿಸಿದ ಬಳಿಕ ಮುಂಬೈ ಪೊಲೀಸ್ ಅವಳಿಗೆ ಸೂಕ್ತ ರಕ್ಷಣೆ ಕೊಡುತ್ತಿಲ್ಲ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕಂಗನಾ, ತನಗೆ ಮುಂಬೈ ಗೂಂಡಾಗಳಿಗಿಂತ ಅಲ್ಲಿನ ಪೊಲೀಸರ ಬಗ್ಗೆಯೇ ಹೆದರಿಕೆಯಿದೆ. ಒಂದೋ ಹಿ. ಪ್ರ ಸರಕಾರ ಅಥವಾ ಕೇಂದ್ರ ಸರಕಾರ ನನಗೆ ಭದ್ರತೆ ಒದಗಿಸಬೇಕು ಎಂದಿದ್ದರು.

- Advertisement -

ಇದಕ್ಕೆ ಟ್ವೀಟ್ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಂಸದ ಸಂಜಯ್ ರಾವತ್, ದಯವಿಟ್ಟು ಅವಳು ಮುಂಬೈಗೆ ಬರುವುದು ಬೇಡ. ಇದು ಮುಂಬೈ ಪೊಲೀಸರಿಗೆ ಮಾಡಿದ ಅವಮಾನವಾಗಿದೆ. ಗೃಹ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ತಿರುಗೇಟು ನೀಡಿದ್ದರು. ಪ್ರಚಾರಕ್ಕಾಗಿ ಯಾವ ಹೇಳಿಕೆ ನೀಡಲು ತಯಾರಾಗಿರುವ ಕಂಗನಾ ಸಂಜಯ್ ರಾವತ್ ರವರ ಟ್ವೀಟ್ ಗೆ “ಸಂಜಯ್ ರಾವತ್ ಅವರು ಮುಂಬೈಗೆ ಬರದಂತೆ ನನಗೆ ಬಹಿರಂಗ ಬೆದರಿಕೆ ಹಾಕಿದ್ದಾರೆ. ಮುಂಬೈ ಪಾಕ್ ಅಕ್ರಮಿತ ಕಾಶ್ಮೀರದಂತೆ ಏಕೆ ಭಾಸವಾಗುತ್ತಿದೆ?” ಎಂದು ಉತ್ತರಿಸಿ ಮುಂಬೈಗರ ಹಾಗೂ ಎಲ್ಲಾ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದರು.  ಕಂಗಾನ ಹೇಳಿಕೆಗೆ ಕೆಂಡಾಮಂಡಲವಾಗಿರುವ ಶಿವಸೇನೆಯ ಕಾರ್ಯಕರ್ತರು ಹಾಗೂ ಮಹಿಳಾ ವಿಭಾಗದ ಸದಸ್ಯರು ಪ್ರತಿಭಟನೆ ನಡೆಸಿದ್ದರು.

ಒಟ್ಟಿನಲ್ಲಿ ತಾನೋರ್ವ ನಟಿ ಎಂದು ಜನರು ಗುರುತಿಸಲು  ಕಾರಣವಾದ ಮುಂಬೈ ನಗರದ ಬಗ್ಗೆಯೇ  ಕೀಳು ಮಟ್ಟದ ಹೋಲಿಕೆ, ಕಂಗನಾ ಪ್ರಚಾರಕ್ಕಾಗಿ ಹಾಗೂ ಜನರ ಗಮನವನ್ನು ತನ್ನತ್ತ ಸೆಳೆಯಲು ಯಾವ ಮಟ್ಟಕ್ಕೆ ಇಳಿಯಲು ಕೂಡಾ ತಾನು ತಯಾರು ಎಂಬ ಜನರ ವಾದವನ್ನು ಮತ್ತೊಮ್ಮೆ ಆಕೆಯೇ ಎತ್ತಿ ಹಿಡಿದಂತಾಗಿದೆ.

- Advertisement -