ಕೀವ್: ಉಕ್ರೇನ್‌ನ ಪ್ರಮುಖ ನಗರವಾದ ಮರಿಯಪೋಲ್ ನ ದಕ್ಷಿಣ ಭಾಗದಲ್ಲಿ ಉಕ್ರೇನ್ ನ ಅಳಿದುಳಿದ ಸೈನಿಕರು ರಷ್ಯಾ ವಿರುದ್ಧ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ.
ಕೆಲವು ಗಂಟೆಗಳ ಕಾಲ ಯುದ್ಧ ವಿರಾಮವಿರುವುದರಿಂದ ಆ ಮೂಲಕ ತಮ್ಮ ಪ್ರಾಣ ಉಳಿಸಿಕೊಳ್ಳಲು ಒಂದು ಅವಕಾಶ ಕಲ್ಪಿಸಲಾಗುತ್ತದೆ ಎಂದು ಉಕ್ರೇನ್ ಸೈನಿಕರೊಂದಿಗೆ ರಷ್ಯಾ ಸರಕಾರ ಹೇಳಿತ್ತು.ಆದರೆ ರಷ್ಯಾದ ಆಫರ್ ತಿರಸ್ಕರಿಸಿರುವ ಉಕ್ರೇನ್ ಸೈನಿಕರು, ತಮ್ಮ ಪ್ರಾಣವಿರುವವರೆಗೆ ಹೋರಾಡುವುದಾಗಿ ಹೇಳಿ, ಕದನ ಮುಂದುವರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಉಕ್ರೇನ್‌ನ ಪ್ರಧಾನಿ ಡೆನ್ನಿಸ್ ಶಿಮಿಹಾಲ್, “ಸೈನಿಕರ ಈ ದೇಶಭಕ್ತಿಯಿಂದಾಗಿ ಮರಿಯುಪೋಲ್ ಇನ್ನೂ ರಷ್ಯಾದ ವಶವಾಗದೇ ಉಳಿದಿದೆ. ಸೈನಿಕರಿಗೆ ಬೇಕಾದ ಶಸ್ತ್ರಾಸ್ತ್ರ, ಆಹಾರ ಹಾಗೂ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಉಕ್ರೇನ್‌ಗೆ ಹೆಚ್ಚಿನ ಹಣದ ಅಗತ್ಯತೆಯಿದ್ದು ಅದಕ್ಕಾಗಿ, ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಹಾಗೂ ವಿಶ್ವಬ್ಯಾಂಕ್‌ಗಳ ಜತೆಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಉಕ್ರೇನ್‌ನ ಎರಡನೇ ಅತಿ ದೊಡ್ಡ ನಗರವಾದ ಖಾರ್ಕಿವ್ ಮೇಲೆ ರಷ್ಯಾ ವಾಯುಪಡೆ ನಡೆಸಿದ ಶೆಲ್ ದಾಳಿಯಿಂದ ಐವರು ನಾಗರಿಕರು ಸಾವನ್ನಪ್ಪಿ, ಸುಮಾರು 13 ಮಂದಿ ಗಾಯಗೊಂಡಿದ್ದಾರೆ ಎಂದು ನಗರಾಡಳಿತ ತಿಳಿಸಿದೆ. ಗಾಯಗೊಂಡವರನ್ನು ಆಸ್ಪತೆಗೆ ದಾಖಲಿಸಲಾಗಿದ್ದು, ಘಟನೆಯಲ್ಲಿ ಗಾಯಗೊಂಡಿರಬಹುದಾದ ಇನ್ನಿತರ ಗಾಯಾಳುಗಳನ್ನು ಪತ್ತೆ ಹಚ್ಚುವ ಕಾರ್ಯ ಆರಂಭಿಸಲಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.