ಮಂಗಳೂರಿನ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ: ಮೂವರು ಕಾರ್ಮಿಕರು ಸಾವು, ಹಲವರು ಅಸ್ವಸ್ಥ

Prasthutha|


ಮಂಗಳೂರು: ನಗರದ ಕಾರ್ಖಾನೆಯೊಂದರಲ್ಲಿ ವಿಷಾನಿಲ ಸೋರಿಕೆಯಾಗಿ ಮೂವರು ಕಾರ್ಮಿಕರು ಸಾವನ್ನಪ್ಪಿ 5ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಕಳೆದ ರಾತ್ರಿ ನಡೆದಿದೆ.
ಅವಘಡ ಹಿನ್ನೆಲೆಯಲ್ಲಿ ಫ್ಯಾಕ್ಟರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ರಾಸಾಯನಿಕ ಸೋರಿಕೆಯಾದ ಮಾಹಿತಿ ಸಿಗುತ್ತಿದ್ದಂತೆ ನಗರ ಪೊಲೀಸರು ಆಸ್ಪತ್ರೆ, ಫ್ಯಾಕ್ಟರಿಗೆ ದೌಡಾಯಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

- Advertisement -

ಮೃತಪಟ್ಟ ಕಾರ್ಮಿಕರೆಲ್ಲರೂ ಪಶ್ಚಿಮ ಬಂಗಾಳ ಮೂಲದವರು ಎಂದು ತಿಳಿದು ಬಂದಿದೆ. ಸಮಿರುಲ್ಲಾ ಇಸ್ಲಾಂ, ಉಮರ್ ಫಾರೂಕ್ ಹಾಗೂ ನಿಜಾಮುದ್ದೀನ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮಿರಾಜುಲ್ಲ್ ಇಸ್ಲಾಂ, ಸರಾಫತ್ ಆಲಿ, ಅಜನ್ ಆಲಿ, ಕರೀಬುಲ್ಲ, ಅಫ್ತಲ್ ಮಲ್ಲಿಕ್ ಸೇರಿದಂತೆ ಹಲವರು ಗಂಭೀರ ಗಾಯಗೊಂಡಿದ್ದಾರೆ.

ಎಸ್‌ಇಝೆಡ್ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೀನಿನ ಫ್ಯಾಕ್ಟರಿಯಲ್ಲಿ ಭಾನುವಾರ ರಾತ್ರಿ ಕಾರ್ಮಿಕನೊಬ್ಬ ಮೀನಿನ ತ್ಯಾಜ್ಯದ ಟ್ಯಾಂಕನ್ನು ಶುಚಿಗೊಳಿಸಲು ಕೆಳಗಿಳಿದಿದ್ದಾನೆ. ಈ ವೇಳೆ ಏಕಾಏಕಿ ಅಸ್ವಸ್ಥಗೊಂಡು ಕೆಳಗೆ ಬಿದ್ದಿದ್ದಾನೆ. ಕೂಡಲೇ ಆತನನ್ನು ರಕ್ಷಿಸಲು 8 ಮಂದಿ ಕಾರ್ಮಿಕರು ಹೋಗಿದ್ದಾರೆ. ಈ ವೇಳೆ ಅವರು ಕೂಡಾ ಅಸ್ವಸ್ಥಗೊಂಡು, ಉಸಿರಾಟದಲ್ಲಿ ಏರುಪೇರಾಗಿದೆ. ಅಸ್ವಸ್ಥಗೊಂಡವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ ಮೂವರು ಮೃತಪಟ್ಟು 5 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

- Advertisement -

Join Whatsapp