ಕೀವ್: ರಷ್ಯಾ – ಉಕ್ರೇನ್ ಸಂಘರ್ಷ ತಾರಕಕ್ಕೇರಿದ್ದು, ರಷ್ಯಾ ಪಡೆ ಸೈನಿಕರಿಂದ ಅಪಹೃತ ಮೆಲಿಟೊಪೋಲ್ ನಗರ ಮೇಯರ್ ಅವರನ್ನು ಬಿಡುಗಡೆಗೆ ನೆರವಾಗುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಇಸ್ರೇಲ್ ಪ್ರಧಾನಿಯನ್ನು ಕೋರಿದ್ದಾರೆ.
ರಷ್ಯಾ ಪಡೆಗಳಿಂದ ಅಪಹರಣಗೊಂಡ ಮೆಲಿಟೊಪೋಲ್ ಮೇಯರ್ ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ರಷ್ಯಾವನ್ನು ಒತ್ತಾಯಿಸಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ಈ ಸಂಬಂಧ ರಷ್ಯಾದ ಮೇಲೆ ಒತ್ತಡ ಹೇರುವಂತೆ ವಿಶ್ವ ನಾಯಕರಲ್ಲಿ ಮನವಿ ಮಾಡಿದ್ದಾರೆ.
ಮೆಲಿಟೊಪೋಲ್ ಮೇಯರ್ ಅವರನ್ನು ಅಪಹರಿಸಿರುವ ವಿಚಾರವಾಗಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರೊಂದಿಗೆ ಸಮಾಲೋಚನೆ ನಡೆಸಿದ ಝೆಲೆನ್ಸ್ಕಿ, ಮೇಯರ್ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ರಷ್ಯಾಕ್ಕೆ ಒತ್ತಡ ಹೇರುವಂತೆ ಬೆನೆಟ್ ಅವರನ್ನು ಒತ್ತಾಯಿಸಿದ್ದಾರೆ.
ಮಾತ್ರವಲ್ಲ ಈ ಸಂಬಂಧ ಝೆಲೆನ್ಸ್ಕಿ ಅವರು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದಾಗಿನಿಂದ ಇಲ್ಲಿಯವರೆಗೆ ರಷ್ಯಾ ಸೈನಿಕರು ಉಕ್ರೇನ್ ನಗರವನ್ನು ಗುರಿಯಾಗಿಸಿ ಸುಮಾರು 350 ಕ್ಕೂ ಅಧಿಕ ಕ್ಷಿಪಣಿ ದಾಳಿ ನಡೆಸಿದೆ. ಈ ಮಧ್ಯೆ ಮೆಲಿಟೊಪೋಲ್ ನಗರದ ಮೇಯರ್ ಅನ್ನು ಅಪಹರಣ ನಡೆಸಲಾಗಿದೆ ಎಂದು ಉಕ್ರೇನ್ ಸೇನಾ ಮುಖ್ಯಸ್ಥರು ಆರೋಪಿಸಿದ್ದಾರೆ.