ಬೆಂಗಳೂರು: ಐಪಿಎಸ್ ರೂಪಾ ಐಎಎಸ್ ರೋಹಿಣಿ ಸಿಂಧೂರಿ ನಡುವೆ ಆರೋಪ-ಪ್ರತ್ಯಾರೋಪದಲ್ಲಿ ನನ್ನ ಮಗನ ಹೆಸರು ಎಳೆದು ತರಬೇಡಿ ಎಂದು ದಿ. ಐಎಎಸ್ ಅಧಿಕಾರಿ ಡಿ.ಕೆ ರವಿ ಅವರ ತಾಯಿ ಗೌರಮ್ಮ ತಿಳಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ಕದರಮಂಗಳ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೀವಿಬ್ಬರೂ ಏನಾದರೂ ಕಿತ್ತಾಡಿ, ಆದರೆ ನನ್ನ ಮಗನ ಹೆಸರು ತರಬೇಡಿ ಎಂದು ಕಣ್ಣೀರಿಟ್ಟರು.
ಮಗನನ್ನು ಕಳೆದುಕೊಂಡು 8 ವರ್ಷ ಕಳೆದವು ನನ್ನನ್ನು ನೋಡಲು ಯಾರೂ ಬಂದಿಲ್ಲ. ಡಿ.ಕೆ.ರವಿಯನ್ನು ನಾನು ಸಾಕಿ ಬೆಳೆಸಿದ್ದೇನೆ. ಡಿ.ಕೆ.ರವಿ ಜತೆ ಕುಸುಮಾ 5 ವರ್ಷ ಅಷ್ಟೆ ಸಂಸಾರ ಮಾಡಿದ್ದಾಳೆ. ನನ್ನ ಮಗ ಇರುವವರೆಗೂ ಮಾತ್ರ ಆಕೆ ಸೊಸೆ. ಹೀಗಾಗಿ ನೀವ್ಯಾರೂ ನನ್ನ ಮಗನ ಹೆಸರನ್ನು ತರಬೇಡಿ ಎಂದು ಮನವಿ ಮಾಡಿದ್ದಾರೆ.