“ಮುಖ್ಯಮಂತ್ರಿ ರೈತ ವಿದ್ಯಾನಿಧಿ” ಯೋಜನೆಗೆ ಚಾಲನೆ: ಮತ್ತೆ ಕಂಡು ಬಂದ ಹಾರ-ತುರಾಯಿ

Prasthutha|

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ “ಮುಖ್ಯಮಂತ್ರಿ ರೈತ ವಿದ್ಯಾನಿಧಿ” ಯೋಜನೆಗೆ ಚಾಲನೆ ನೀಡಿದರು.

- Advertisement -


ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳ ಖಾತೆಗೆ ನೇರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದರು. ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ವಿದ್ಯಾರ್ಥಿ ವೇತನ ವಿತರಿಸಿದರು.
ಬಳಿಕ ಮುಖ್ಯಮಂತ್ರಿ ಮಾತನಾಡಿ, ರೈತರ ಜೀವನಮಟ್ಟ ಸುಧಾರಣೆಗೆ ಮತ್ತು ಸುಸ್ಥಿರ ಆರ್ಥಿಕತೆಗೆ ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಅನಿವಾರ್ಯ ಎಂದು ಹೇಳಿದರು.


ಕೇಂದ್ರ ಕೃಷಿ ಕಲ್ಯಾಣ ಸಚಿ ನರೇಂದ್ರ ಸಿಂಗ್ ತೋಮರ್ ಮಾತನಾಡಿ, ಇಂದು ಕರ್ನಾಟಕ ರಾಜ್ಯಕ್ಕೆ ಮಹತ್ವಪೂರ್ಣ ಹಾಗೂ ಸಂತಸ ದಿನ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಲೆಲ್ಲಾ ಅಭಿವೃದ್ಧಿ ಹಾಗೂ ರೈತರ ಪ್ರಗತಿಗೆ ದುಡಿದಿದೆ. ಈಗ ಬಸವರಾಜ ಬೊಮ್ಮಾಯಿ ಸಹ ಮುಖ್ಯಮಂತ್ರಿಯಾಗಿ ರೈತ ಮಕ್ಕಳ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡಿದ್ದಾರೆ. ರೈತ ಮಕ್ಕಳಿಗಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಉನ್ನತ ಶಿಕ್ಷಣಕ್ಕೆ ಇಂತಹ ಯೋಜನೆ ರೂಪಿಸಿರುವುದು ಶ್ಲಾಘನೀಯ. ಇದಕ್ಕಾಗಿ ಬೊಮ್ಮಾಯಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

- Advertisement -


ರೈತ ಎಷ್ಟೇ ತೊಂದರೆಯಲ್ಲಿದ್ದರೂ ತನ್ನ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕೆಂಬ ಉನ್ನತ ಹುದ್ದೆಗೇರಬೇಕೆಂಬ ಕನಸು ಇದ್ದೇ ಇರುತ್ತದೆ. ಇಂತಹ ಕನಸನ್ನು ಬೊಮ್ಮಾಯಿ ಈಡೇರಿಸುತ್ತಿದ್ದಾರೆ ಎಂದರು.
ಕೇಂದ್ರ ಕೃಷಿ ಕಲ್ಯಾಣ ರೈತ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ದೇಶದ ಯಾವುದೇ ಯೋಜನೆಯಾಗಲೀ ಅದರ ರುವಾರಿ ಎಂದರೆ ಅದು ಕರ್ನಾಟಕ. ಕಿಸಾನ್ ಬಜೆಟ್ ಮಂಡಿಸಿದ ಮೊದಲ ಹೆಗ್ಗಳಿಕೆ ಮಾಜಿ ಸಿಎಂ ಯಡಿಯೂರಪ್ಪ ಅವರದ್ದಾಗಿದೆ ಎಂದು ಶ್ಲಾಘಿಸಿದ್ದಾರೆ.


ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಸಂತುಷ್ಟ ರೈತನಿಂದ ಸಮೃದ್ಧ ಭಾರತ ಸಾಧ್ಯವಾಗಿದ್ದು,ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜೊತೆ ಕರ್ನಾಟಕ ಸರ್ಕಾರವು ಕಟಿಬದ್ಧವಾಗಿ ದುಡಿಯುತ್ತಿದೆ ಎಂದು ಹೇಳಿದರು.
ಸಚಿವ ಸಂಪುಟದ ಇತರ ಸದಸ್ಯರಾದ ಪ್ರಭು ಚೌವ್ಹಾಣ್, ಎನ್. ಮುನಿರತ್ನ, ಬಿ.ಸಿ. ನಾಗೇಶ್, ಸಾವಯವ ಕೃಷಿ ಕುರಿತ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ಎ.ಎಸ್. ಆನಂದ್, ಸಂಸದರು, ಶಾಸಕರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಮತ್ತೆ ಬಂದ ಹಾರ ತುರಾಯಿ


ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ-ತುರಾಯಿ ನಿಷೇಧ ಮಾಡಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರದ ಪ್ರತಿನಿಧಿಗಳೇ ಇಂದು ನಡೆದ ಸಮಾರಂಭದಲ್ಲಿ ಹಾರ ತುರಾಯಿಗೆ ತಲೆಯೊಡ್ಡುತ್ತಿರುವುದು ಕಂಡುಬಂತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಥೋಮರ್ ಸೇರಿದಂತೆ ಎಲ್ಲಾ ಸಚಿವರು ಹಾರ ತುರಾಯಿ ಹಾಕಿಕೊಂಡು ತಾವೇ ನೀಡಿದ್ದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದಿರುವುದು ಕಂಡುಬಂತು.



Join Whatsapp