ಮತಾಂತರದ ಮೊದಲು ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು ಎಂಬ ನಿಯಮ ಸಂವಿಧಾನಬಾಹಿರ: ಮಧ್ಯಪ್ರದೇಶ ಹೈಕೋರ್ಟ್

Prasthutha|

ಭೋಪಾಲ್: ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮತಾಂತರ ವಿರೋಧಿ ಕಾಯ್ದೆ ಅಡಿಯಲ್ಲಿ ವ್ಯಕ್ತಿಯೊಬ್ಬರು ಮತಾಂತರ ಆಗುವ ಮೊದಲು ಜಿಲ್ಲಾಡಳಿತಕ್ಕೆ ಮಾಹಿತಿ ಕೊಡಬೇಕು ಎಂಬ ನಿಯಮ ಸಂವಿಧಾನಬಾಹಿರವಾಗಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ತಿಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಈ ಕಾಯ್ದೆಯ ಈ ನಿಯಮಾವಳಿಯನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳದಂತೆ ನ್ಯಾಯಾಲಯವು ಅಧಿಕಾರಿಗಳಿಗೆ ಸೂಚಿಸಿದೆ.

- Advertisement -

ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ-2021ರ ಸೆಕ್ಷನ್ 10 ರ ಅನ್ವಯ, ಯಾವುದೇ ವ್ಯಕ್ತಿ ತಮ್ಮ ಧರ್ಮವನ್ನು ಬದಲಾಯಿಸಲು ಬಯಸಿದರೆ ತಾನು ಯಾವುದೆ ಬಲವಂತವಿಲ್ಲದೆ,ದಬ್ಬಾಳಿಕೆ ರಹಿತವಾಗಿ, ಒತ್ತಡ, ಪ್ರಭಾವ ಅಥವಾ ಆಮಿಷದಿಂದ ಮತಾಂತರ ಆಗುತ್ತಿಲ್ಲ ಎಂದು 60 ದಿನಗಳ ಮುಂಚಿತವಾಗಿ ಜಿಲ್ಲಾಧಿಕಾರಿಗೆ ಅಫಿದಾವಿತ್ ಅನ್ನು ಸಲ್ಲಿಸಬೇಕೆಂಬುದು ನಿಯಮವಾಗಿದೆ. ಈ ನಿಯಮವನ್ನು ಉಲ್ಲಂಘಿಸಿದವರಿಗೆ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ 50,000 ರೂ. ದಂಡವನ್ನು ವಿಧಿಸಬಹುದಾಗಿದೆ ಎಂದು ನೂತನ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿತ್ತು.

ಮಧ್ಯಪ್ರದೇಶ ಸರ್ಕಾರದ ಮತಾಂತರ ವಿರೋಧಿ ಕಾನೂನನ್ನು ಕಳೆದ ವರ್ಷ ಅಧಿಸೂಚನೆ ಹೊರಡಿಸಲಾಗಿದ್ದು, ಈ ಕಾನೂನು ಯಾವುದೇ ವ್ಯಕ್ತಿ ತಮ್ಮ ಧರ್ಮವನ್ನು ಬದಲಾಯಿಸಲು ಬಲವಂತವಾಗಿ ಮದುವೆಯನ್ನು ಅಸ್ತ್ರವಾಗಿ ಬಳಸಿದವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆಗೆ ಅವಕಾಶವಿದೆ ಎಂದೂ ನೂತನ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿತ್ತು.

- Advertisement -

ಈ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಗಳಾದ ಸುಜೋಯ್ ಪಾಲ್, ನ್ಯಾಯಮೂರ್ತಿ ಪ್ರಕಾಶ್ ಚಂದ್ರ ಗುಪ್ತಾ ಅವರನ್ನೊಳಗೊಂಡ ಪೀಠವು ಬಲವಂತದ ಮತಾಂತರ ಅಲ್ಲದೆ ತಮ್ಮ ಇಚ್ಛೆಯಂತೆ ಮದುವೆಯಾದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸದಂತೆ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಾಗಿ ಸೂಚಿಸಿದೆ.

ಮತಾಂತರ ವಿರೋಧಿ ಕಾನೂನಿನ ಸಾಂವಿಧಾನಿಕ ಮೌಲ್ಯವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಮಧ್ಯಪ್ರದೇಶ ಹೈಕೋರ್ಟ್ ನಡೆಸುತ್ತಿದ್ದು, ಪ್ರಕರಣದ ವಿಚಾರಣೆ ನಡೆಯುವವರೆಗೆ ಕಾನೂನಿನಡಿಯಲ್ಲಿ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸದಂತೆ ಸರ್ಕಾರವನ್ನು ನಿರ್ಬಂಧಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಒತ್ತಾಯಿಸಿದ್ದರು.



Join Whatsapp