ಕೊಚ್ಚಿ: ಮುಸ್ಲಿಂ ಲೀಗ್ ಜೊತೆಗೆ ಕೇರಳ ಆರೆಸ್ಸೆಸ್ ನಾಯಕರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಮುಸ್ಲಿಂ ಲೀಗ್’ನ ಕೇರಳ ರಾಜ್ಯ ಕಾರ್ಯದರ್ಶಿಯಾಗಿದ್ದು, ಈಗ ವಜಾಗೊಂಡಿರುವ ಶಾಸಕ ಕೆ. ಎಸ್. ಹಂಝಾ ತಿಳಿಸಿದ್ದಾರೆ.
ಮುಸ್ಲಿಂ ಲೀಗ್ ಅನ್ನು ಎಡ ರಂಗಕ್ಕೆ ಎಳೆಯಲು ಈ ಮಾತುಕತೆ ನಡೆಯಿತು. ಮುಂದಿನ ದಿನಗಳಲ್ಲಿ ಇದು ಕೇರಳದಲ್ಲಿ ಬಿಜೆಪಿಗೆ ಸಹಾಯವಾಗಲಿದೆ. ಅದಕ್ಕಾಗಿ ಆರೆಸ್ಸೆಸ್ ನವರು ಲೀಗ್ ಜೊತೆಗೆ ಮಾತುಕತೆ ಆರಂಭಿಸಿದ್ದಾರೆ ಎಂದು ಹಂಝಾ ಹೇಳಿದ್ದಾರೆ.
ಎಲ್ಲರನ್ನೂ ತಲುಪುವ ಅಭಿಯಾನದ ಅಂಗವಾಗಿ ಆರೆಸ್ಸೆಸ್, ಮುಸ್ಲಿಂ ಲೀಗ್ ಶಾಸಕರ ಜೊತೆಗೆ ಮಾತುಕತೆ ನಡೆಸಿತು ಎಂದು ಆರೆಸ್ಸೆಸ್ ನ ಪ್ರಾಂತ್ಯ ಕಾರ್ಯದರ್ಶಿ ಪಿ. ಎನ್. ಈಶ್ವರನ್ ಅವರು ಶನಿವಾರ ಹೇಳಿದ್ದಕ್ಕೆ ಪ್ರತಿಯಾಗಿ ಶಾಸಕ ಹಂಝಾ ಹೀಗೆ ಹೇಳಿದರು.
ಮುಸ್ಲಿಂ ಲೀಗ್ ಒಂದು ಜಾತ್ಯತೀತ ಪಕ್ಷ, ಉಗ್ರವಾದವನ್ನು ವಿರೋಧಿಸುತ್ತದೆ. ಅಲ್ಪ ಮಟ್ಟಿಗೆ ಮಾತ್ರ ಧಾರ್ಮಿಕ ಉದ್ದೇಶಗಳನ್ನು ಹೊಂದಿದೆ ಎಂದೂ ಆರೆಸ್ಸೆಸ್ಸಿನ ಈಶ್ವರನ್ ಹೇಳಿದ್ದರು.
ಇದನ್ನೆಲ್ಲ ಅಲ್ಲಗಳೆದ ಮುಸ್ಲಿಂ ಲೀಗ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿಎಂಎ ಸಲಾಂ, ನಮ್ಮದು ಜಾತ್ಯತೀತ ಪಕ್ಷ, ಆರೆಸ್ಸೆಸ್ ಜೊತೆಗೆ ಹೋಗಲು ಯಾವುದೇ ಸಹಮತ ಇಲ್ಲ ಎಂದು ಹೇಳಿದರು.
ಹಂಝಾ ಅವರು ನಿರಂತರವಾಗಿ ಮುಸ್ಲಿಂ ಲೀಗ್ ನಾಯಕರನ್ನು ಟೀಕಿಸುತ್ತಿದ್ದರು. ಅದರಲ್ಲೂ ಬಲಾಢ್ಯ ಮುಸ್ಲಿಂ ಲೀಗ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಮಂತ್ರಿ ಪಿ. ಕೆ. ಕುಙಾಲಿ ಕುಟ್ಟಿಯವರನ್ನು ಹಂಝಾ ಅವರು ಟೀಕಿಸುತ್ತಿದ್ದುದರಿಂದ ಪಕ್ಷದಿಂದ ಅವರನ್ನು ಹೊರ ಹಾಕಲಾಗಿದೆ ಎಂದು ಸಲಾಂ ತಿಳಿಸಿದರು.
ಆರೆಸ್ಸೆಸ್ ನಾಯಕತ್ವವು ಕುಙಾಲಿಕುಟ್ಟಿಯವರ ಜೊತೆಗೆ ಮಾತುಕತೆ ನಡೆಸಿಲ್ಲ, ಬೇರೆ ನಾಯಕರ ಜೊತೆಗೆ ನಡೆಸಿದೆ ಎಂದೂ ವಜಾಗೊಂಡಿರುವ ನಾಯಕ ಹಂಝಾ ಹೇಳಿದರು.
ಮುಸ್ಲಿಂ ಲೀಗ್’ನ ಜೊತೆಗೆ ಆರೆಸ್ಸೆಸ್ ಮಾತುಕತೆ: ಲೀಗ್ ಮಾಜಿ ನಾಯಕ ಕೆ.ಎಸ್. ಹಂಝಾ
Prasthutha|