ಇತಿಹಾಸ ತಿರುಚುವ ಬಿಜೆಪಿಯವರ ಷಡ್ಯಂತ್ರದ ವಿರುದ್ಧ ಹೋರಾಟ: ಡಿಕೆಶಿ ಎಚ್ಚರಿಕೆ

Prasthutha|

ಬೆಳಗಾವಿ: ಇತಿಹಾಸ ತಿರುಚುವಲ್ಲಿ ಬಿಜೆಪಿಯವರದು ಎತ್ತಿದ ಕೈ. ಬಸವಣ್ಣ, ಕುವೆಂಪು, ನಾರಾಯಣ ಗುರು, ಅಂಬೇಡ್ಕರ್ ಸೇರಿದಂತೆ ಹಲವು ಮಹನೀಯರ ಇತಿಹಾಸ ತಿರುಚಿದ್ದ ಬಿಜೆಪಿ, ಈಗ ಉರಿಗೌಡ ನಂಜೇಗೌಡ ಎಂಬ ಹೆಸರಲ್ಲಿ ಒಕ್ಕಲಿಗರ ಇತಿಹಾಸ ತಿರುಚುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ, ಕೋಮುಗಳ ನಡುವೆ ದ್ವೇಷ ತಂದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಬಿಜೆಪಿಯವರು ಪ್ರಯತ್ನ ಮಾಡುತ್ತಿದ್ದಾರೆ. ಟಿಪ್ಪು ಸುಲ್ತಾನ್ ಸತ್ತು ಎರಡು ಶತಮಾನಗಳೇ ಕಳೆದಿವೆ. ಈಗ ಊರಿಗೌಡ, ನಂಜೇಗೌಡರನ್ನು ಬಿಜೆಪಿ ಸೃಷ್ಟಿಸಿದೆ. ಮಂಡ್ಯ ಜಿಲ್ಲೆಗೆ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಡಾ. ದೇ. ಜವರೇಗೌಡ ಅವರ ಸಂಪಾದಕತ್ವದಲ್ಲಿ ‘ಸುವರ್ಣ ಮಂಡ್ಯ ‘ ಎಂಬ ಸಂಚಿಕೆ ತರಲಾಗಿತ್ತು. ಅದರ ಪರಿಸ್ಕೃತ ಸಂಚಿಕೆಯಲ್ಲಿ ಸಂಶೋಧಕ ಹ.ಕ. ರಾಜೇಗೌಡರು ಮಂಡ್ಯ ಐವತ್ತು; ಒಂದು ಪಕ್ಷಿ ನೋಟ ಎಂಬ ಲೇಖನ ಬರೆದಿದ್ದರು. ಅದರಲ್ಲಿ ದೊಡ್ಡನಂಜೆಗೌಡ, ಉರಿಗೌಡ ಎಂಬುವರು ಹೈದರಾಲಿ, ಟಿಪ್ಪು ವಿರುದ್ಧ ಸೆಟೆದು ನಿಂತಿದ್ದರು ಎಂದು ಉಲ್ಲೇಖಿಸಿದ್ದರು. ಇತಿಹಾಸದಲ್ಲಿ ಇಲ್ಲದ ಉರಿಗೌಡ, ನಂಜೇಗೌಡರ ಬಗ್ಗೆ ಉಲ್ಲೇಖ ಮಾಡಿರುವ ಬಗ್ಗೆ ಕೆಲವರು ರಾಜೇಗೌಡರನ್ನು ಪ್ರಶ್ನೆ ಮಾಡಿದಾಗ ಒಕ್ಕಲಿಗರಿಗೆ ಪ್ರಾಮುಖ್ಯತೆ ಸಿಗಲಿ ಎಂದು ಹೀಗೆ ಬರೆದಿದ್ದೇನೆ, ಇರಲಿ ಬಿಡಿ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಸ್ಪಷ್ಟನೆ ನೀಡಲು ಈಗ ಹ.ಕ. ರಾಜೇಗೌಡರು ಜೀವಂತವಾಗಿ ಇಲ್ಲ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿಯ ವಾಟ್ಸಾಪ್ ಯೂನಿವರ್ಸಿಟಿ ಹೊಸ ಇತಿಹಾಸ ಸೃಷ್ಟಿಸಲು ಹೊರಟಿದೆ ಎಂದು ಟೀಕಾಪ್ರಹಾರ ನಡೆಸಿದರು.
ಅನೇಕ ಇತಿಹಾಸ ತಜ್ಞರು, ಸಂಶೋಧಕರು ಉರಿಗೌಡ, ನಂಜೇಗೌಡ ಕೇವಲ ಕಾಲ್ಪನಿಕ ಪಾತ್ರ ಎಂದು ಹೇಳುತ್ತಿದ್ದರೂ ಬಿಜೆಪಿಯವರು ಮಾತ್ರ ಇದನ್ನು ಬಿಡಲು ರೆಡಿ ಇಲ್ಲ. ಇತಿಹಾಸದ ಯಾವ ದಾಖಲೆಯಲ್ಲಿ ಉರಿಗೌಡ ನಂಜೇಗೌಡ ಟಿಪ್ಪು ಸುಲ್ತಾನ್ ಕೊಂದರು ಎಂಬುದು ಇದೆ ನೀವೇ ಹೇಳಿ ನೋಡೋಣ. ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನನನ್ನು ಒಕ್ಕಲಿಗರು ಕೊಂದರು, ಆ ಮೂಲಕ ಒಕ್ಕಲಿಗರು ದೇಶವಿರೋಧಿಗಳು, ಕೊಲೆಗಡುಕರು ಎಂದು ಅವರ ಗೌರವ, ಸ್ವಾಭಿಮಾನಕ್ಕೆ ಮಸಿ ಬಳಿಯಲಾಗುತ್ತಿದೆ. ಬಿಜೆಪಿಯವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯಾರನ್ನು ಬೇಕಾದರೂ ಸೃಷ್ಟಿಸುತ್ತಾರೆ, ಯಾರ ಮನೆಯನ್ನು ಬೇಕಾದರೂ ಹಾಳು ಮಾಡುತ್ತಾರೆ. ಸಿ.ಟಿ ರವಿ ಹಾಗೂ ಅಶ್ವತ್ ನಾರಾಯಣ್ ಎಂಬ ಅವಿವೇಕಿಗಳು ಈ ಉರಿಗೌಡ, ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳ ಮೂಲಕ ಒಕ್ಕಲಿಗ ಸಮುದಾಯದ ವಿರುದ್ಧ ಬೇರೆಯವರನ್ನು ಎತ್ತಿ ಕಟ್ಟುತ್ತಿದ್ದಾರೆ. ಉರಿಗೌಡ, ನಂಜೇಗೌಡ ಹೆಸರಿನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ. ಸಚಿವ ಅಶ್ವತ್ ನಾರಾಯಣ ಅವರು ಚಿತ್ರಕತೆ ಬರೆಯುತ್ತಾರಂತೆ. ಇವರಿಗೆ ಪಾಠ ಮಾಡಿದ ಶಿಕ್ಷಕರೇ ನಾವು ಇವರಿಗೆ ಈ ವಿಚಾರ ಹೇಳಿಕೊಟ್ಟಿಲ್ಲದ ಇತಿಹಾಸದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅಚ್ಚರಿ ವ್ಯಕ್ತಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

- Advertisement -

ಟಿಪ್ಪು ಇತಿಹಾಸದ ಬಗ್ಗೆ ರಾಷ್ಟ್ರಪತಿಗಳು ರಾಜ್ಯ ವಿಧಾನಮಂಡಲ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಟಿಪ್ಪು ಬದುಕು, ಸಾವು, ಸಾಧನೆ ಬಗ್ಗೆ ಹಲವು ಇತಿಹಾಸ ಪುಸ್ತಕಗಳಿವೆ. ಅವುಗಳಲ್ಲಿ ಇಲ್ಲದ ವಿಚಾರವನ್ನು ಇವರು ಸೃಷ್ಟಿಸಿದ್ದಾರೆ. ಒಕ್ಕಲಿಗ ಸಮುದಾಯದ ಹೆಸರನ್ನು ಬಳಸಿಕೊಂಡು ರಾಜಕೀಯವಾಗಿ ಬೆಳೆಯುತ್ತಿರುವ ಇವರು ಈಗ ಅದೇ ಸಮಾಜದ ಸ್ವಾಭಿಮಾನ ಹಾಗೂ ಘನತೆಗೆ ಮಸಿ ಬಳಿಯುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಹಲವು ಸಂಘಟನೆಗಳು ನನಗೆ ಒತ್ತಡ ಹೇರುತ್ತಿದ್ದು, ಇತಿಹಾಸ ತಿರುಚುವ ಈ ಷಡ್ಯಂತ್ರ ಖಂಡಿಸಿ, ಅದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದು ಡಿಕೆಶಿ ಎಚ್ಚರಿಸಿದರು.
ಈ ಹೋರಾಟಕ್ಕೆ ಒಕ್ಕಲಿಗ ಸಮುದಾಯದ ಮಾರ್ಗದರ್ಶಕರು, ತಿಲಕಪ್ರಾಯರಾದ ಆದಿಚುಂಚನಗಿರಿಯ ಶ್ರೀಗಳಾದ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡುತ್ತೇನೆ. ಸ್ವಾಮೀಜಿಗಳು ಈ ಹೋರಾಟದ ನೇತೃತ್ವ ವಹಿಸಬೇಕು. ಒಕ್ಕಲಿಗ ಸಮುದಾಯದ ಮುಖಂಡರ ಸಭೆ ಕರೆದು ಹೋರಾಟದ ರೂಪುರೇಷೆ ಬಗ್ಗೆ ಮಾರ್ಗದರ್ಶನ ಮಾಡಬೇಕು. ಸ್ವಾಮೀಜಿಗಳು ಈ ವಿಚಾರದಲ್ಲಿ ಯಾರ ಜತೆಗೂ ಸಂದಾನ ಮಾಡಿಕೊಳ್ಳಬಾರದು. ಅವರು ಸಂದಾನಕ್ಕೆ ಕರೆದರೂ ಅದಕ್ಕೆ ಹೋಗಬಾರದು. ಒಂದು ವೇಳೆ ಸಂದಾನಕ್ಕೆ ಮುಂದಾದರೆ ಈ ಒಕ್ಕಲಿಗ ಸಮಾಜಕ್ಕೆ ಅಗೌರವ ಮಾಡಿದಂತೆ ಆಗುತ್ತದೆ.ಬಿಜೆಪಿ ಅಪಪ್ರಚಾರದ ವಿರುದ್ಧ ಹೋರಾಟ ಮಾಡಿ ಸಮಾಜದ ಸ್ವಾಭಿಮಾನ ಉಳಿಸಿಕೊಳ್ಳಬೇಕು. ಬಿಜೆಪಿಯ ವಾಟ್ಸಾಪ್ ಯೂನಿವರ್ಸಿಟಿಯು ಇತಿಹಾಸ ತಿರುಚಿ, ಜಾತಿ ಸಮುದಾಯಗಳ ಮಧ್ಯೆ ವಿಷಬೀಜ ಬಿತ್ತುವ ಪ್ರಯತ್ನದ ವಿರುದ್ಧ ಹೋರಾಟ ಮಾಡಬೇಕು. ಇದು ನಿರ್ಮಲಾನಂದ ಶ್ರೀಗಳು, ನಂಜಾವಧೂತ ಸ್ವಾಮೀಜಿಗಳು ಸೇರಿದಂತೆ ಎಲ್ಲ ಧರ್ಮದ ಶ್ರೀಗಳ ಜವಾಬ್ದಾರಿ. ಸಿ.ಟಿ ರವಿ ಅವರು ಒಕ್ಕಲಿಗ ಸಮುದಾಯಕ್ಕೆ ಮಾತ್ರ ಅಪಮಾನ ಮಾಡಿಲ್ಲ. ಲಿಂಗಾಯತರಿಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿಲ್ಲ ಎಂದು ಹೇಳಿ ಅಪಮಾನ ಮಾಡಿದ್ದಾರೆ. ಈ ವಿಚಾರವಾಗಿ ಮುಂದೆ ಇನ್ನೊಂದು ಸಂದರ್ಭದಲ್ಲಿ ಮಾತನಾಡುತ್ತೇನೆ ಎಂದರು.
ಮಂಡ್ಯ ಐವತ್ತು; ಒಂದು ಪಕ್ಷಿ ನೋಟ ಸಂಚಿಕೆಯಲ್ಲಿ ಈ ಇಬ್ಬರ ಹೆಸರು ಪ್ರಸ್ತಾಪವಾಗುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ ರಾಮಾಯಣವನ್ನು ಐದಾರು ಆಯಾಮದಲ್ಲಿ ಬರೆಯಲಾಗಿದೆ. ಇತಿಹಾಸ ಎಂದರೆ ನಡೆದಿರುವುದನ್ನು ಸಾಕ್ಷಿ ಸಮೇತ ಬರೆಯುವುದು. ಆದರೆ ಯಾರೋ ಒಬ್ಬರು ತಮ್ಮ ಅನಿಸಿಕೆಯನ್ನು ಪುಸ್ತಕದಲ್ಲಿ ಬರೆದ ಮಾತ್ರಕ್ಕೆ ಅದು ಸತ್ಯ, ಅದೇ ಇತಿಹಾಸ ಎಂದು ಪರಿಣಿಸಲಾಗುವುದಿಲ್ಲ. ಸಂಶೋಧನಾಕಾರರು ಸಂಶೋಧನೆ ಮಾಡಿ ಬರೆಯುವುದು ಇತಿಹಾಸ. ಇತಿಹಾಸ ತಿರುಚುವವರ ವಿರುದ್ಧ ಪ್ರಕರಣ ದಾಖಲಿಸಬೇಕು. ಇದೆ ಕಾರಣಕ್ಕೆ ನಾವು ಡಿಜಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದ್ದೇವೆ. ಸರ್ಕಾರ ರೈತನನ್ನು ಬದುಕಿಸುವ ಬಗ್ಗೆ ಯೋಚಿಸಬೇಕು. ಅದನ್ನು ಬಿಟ್ಟು ಭ್ರಷ್ಟಾಚಾರ ಮಾಡುತ್ತಿದ್ದಾರೆ’ ಎಂದರು.
ಉರಿಗೌಡ ನಂಜೇಗೌಡ ವಿರೋಧಿಸುವವರು ದೇಶದ್ರೋಹಿಗಳು ಎಂಬ ಸಿ. ಟಿ ರವಿ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿರುವ ಶೋಭಾ ಕರಂದ್ಲಾಜೆ, ಸಿ.ಟಿ ರವಿ, ಅಶ್ವತ್ ನಾರಾಯಣ ಅವರು ದೇಶ, ರಾಜ್ಯ, ಒಕ್ಕಲಿಗ ಹಾಗೂ ಹಿಂದೂ ವಿರೋಧಿಗಳು’ ಎಂದು ಹರಿಹಾಯ್ದರು.

ಬಿಜೆಪಿಯವರು ನಿಮಗೆ ಪುಸ್ತಕ ಕಳುಹಿಸಿಕೊದುವುದಾಗಿ ಹೇಳಿದ್ದಾರೆ ಎಂದು ಕೇಳಿದಾಗ, ‘ನಾನು ಮಂತ್ರಿಯಾದ ನಂತರ ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ನನಗೂ ದೇಶ ಹಾಗೂ ರಾಜ್ಯದ ಇತಿಹಾಸ ಗೊತ್ತಿದೆ. ರಾಜ್ಯಕ್ಕಾಗಿ ಮಹಾರಾಜರು, ಟಿಪ್ಪು ಅವರ ತ್ಯಾಗದ ಬಗ್ಗೆ ತಿಳಿದಿದೆ. ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿಗಳು, ರಾಜ್ಯದ ಧರ್ಮಪೀಠಗಳ ತ್ಯಾಗದ ಬಗ್ಗೆ ಗೊತ್ತಿದೆ. ಅವರು ಎಲ್ಲ ವಿಚಾರದಲ್ಲಿ ವಿಫಲವಾಗಿದ್ದು, ಜನರ ಗಮನ ಬೇರೆಡೆ ಸೆಳೆಯಲು ಭಾವನೆಗಳ ಜತೆ ಆಟವಾಡುತ್ತಿದ್ದಾರೆ’ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ಸ್ಪರ್ಧೆಯ ಕ್ಷೇತ್ರದ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಅವರು ಪಕ್ಷಕ್ಕೆ ಅರ್ಜಿ ಹಾಕಿದ್ದಾರೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದಕ್ಕೆ ಬದ್ಧ ಎಂದು ಹೇಳಿದ್ದಾರೆ. ಉಳಿದ ವಿಚಾರ ಅವರ ಬಳಿ ಕೇಳಬೇಕು ‘ ಎಂದು ತಿಳಿಸಿದರು.
ಮುಖ್ಯಮಂತ್ರಿ ಹುದ್ದೆಗಾಗಿ ನಿಮ್ಮ ಹಾಗೂ ಸಿದ್ದರಾಮಯ್ಯ ಅವರ ಮಧ್ಯೆ ಸ್ಪರ್ಧೆ ಇದೆ ಎಂಬ ಪ್ರಶ್ನೆ ಕೇಳಿದಾಗ, ‘ ನಮ್ಮಲ್ಲಿ ಯಾವುದೇ ಸಂಘರ್ಷವಿಲ್ಲ. ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಮುಂದೆ ಪಕ್ಷ ಯಾವ ತೀರ್ಮಾನ ಮಾಡುತ್ತದೆಯೋ ಅದಕ್ಕೆ ಬದ್ಧವಾಗಿ ನಾವು ನಡೆದುಕೊಳ್ಳುತ್ತೇವೆ ‘ ಎಂದರು.
ನೀವು ಎರಡು ಕಡೆ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ, ‘ ಇಲ್ಲ ನಾನು ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ‘ ಎಂದರು.
ರಮೇಶ್ ಜಾರಕಿಹೊಳಿ ಅವರು ಕನಕಪುರಕ್ಕೆ ಆಗಮಿಸುತ್ತಾರೆ ಎಂದು ಕೇಳಿದಾಗ, ‘ ಅವರಿಗೆ ಶುಭ ಕೋರುತ್ತೇನೆ ‘ ಎಂದರು.

Join Whatsapp