ಬಡಗನ್ನೂರು ದಲಿತ ಬಾಲಕಿಯ ಅತ್ಯಾಚಾರ: ಕೊನೆಗೂ RSS ಮುಖಂಡ ನಾರಾಯಣ ರೈ ನ್ಯಾಯಾಲಯಕ್ಕೆ ಶರಣು

Prasthutha|

ಮಂಗಳೂರು: ಇಡೀ ದಕ್ಷಿಣ ಕನ್ನಡ ಜಿಲ್ಲೆಯನ್ನೇ ತಲ್ಲಣಗೊಳಿಸಿದ್ದ ಬಡಗನ್ನೂರು ಅಪ್ರಾಪ್ತ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿ ಸಂಘಪರಿವಾರದ ಮುಖಂಡ, ಸುಳ್ಯಪದವು ಪಡವನ್ನೂರು ಗ್ರಾಮದ ಕುದ್ಕಾಡಿ ನಾರಾಯಣ ರೈ ಕೊನೆಗೂ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.

- Advertisement -


ಆರೋಪಿ ನಾರಾಯಣ ರೈ ತನ್ನ ಮನೆಗೆ ಕೆಲಸಕ್ಕೆ ಬರುತ್ತಿದ್ದ ದಲಿತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ, ತನ್ನ ರಾಜಕೀಯ ಪ್ರಭಾವ ಬಳಸಿ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ್ದ. ಸಂತ್ರಸ್ತೆ ಸೆ.5ರಂದು ಮಗುವಿಗೆ ಜನ್ಮ ನೀಡಿದ್ದಳು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಾಲಕಿಯ ಕುಟುಂಬದವರು ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.


ಬುಧವಾರ ನಾರಾಯಣ ರೈ ವಕೀಲ ಮಹೇಶ್ ಕಜೆ ಜತೆ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಮುಂದೆ ಶರಣರಾಗಿದ್ದಾನೆ.
ಸೆ.23ರಂದು ಸಂತ್ರಸ್ತೆಯು ನ್ಯಾಯಾಲಯಕ್ಕೆ ಹಾಜರಾಗಿ 164ರಡಿ ಹೇಳಿಕೆ ನೀಡಿದ್ದು, ಅದರಲ್ಲಿ ಶುದ್ಧಾಡಿ ನಾರಾಯಣ ರ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದಳು. ಆರೋಪಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಆರೋಪಿ ನ್ಯಾಯಾಲಯದ ಎದುರು ಶರಣಾಗಿದ್ದಾನೆ.

- Advertisement -


ಆರೋಪಿಯ ಬಂಧನಕ್ಕೆ ಒತ್ತಾಯಿಸಿ ದಲಿತ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿತ್ತು. ದಲಿತ ಮುಖಂಡರು ಪತ್ರಿಕಾಗೋಷ್ಠಿ ಕರೆದು ಸಂತ್ರಸ್ತೆಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸಿತ್ತು.
ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಮುಖಂಡರಾದ ರಮೇಶ್ ಕೋಟ್ಯಾನ್, ಅಶೋಕ್ ಕೊಂಚಾಡಿ ರಘು ಕೆ ಎಕ್ಕಾರು, ಸರೋಜಿನಿ ಬಂಟ್ವಾಳ, ಯುಕೆ ಗಿರೀಶ್ ಕುಮಾರ್, ಆನಂದ್ ಬೆಳ್ಳಾರೆ, ಸುಧಾಕರ್ , ಕಮಲಾಕ್ಷ ಬಜಾಲ್ ಮತ್ತು ಗಣೇಶ್ ಸುದ್ದಿಗೋಷ್ಠಿ ನಡೆಸಿ, ಅಪ್ರಾಪ್ತ ವಯಸ್ಸಿನ ಬಾಲಕಿಯ ಕುಟುಂಬ ಅಲ್ಲಿನ ಭೂ ಮಾಲಕ, ಆರ್ ಎಸ್ ಎಸ್ ಮತ್ತು ಬಿಜೆಪಿಯ ಹಿರಿಯ ಮುಖಂಡ ಹಾಗೂ ಈಶ್ವರಮಂಗಲದ ಪ್ರೌಢಶಾಲೆಯೊಂದರ ಆಡಳಿತ ಮಂಡಳಿಯ ಸಂಚಾಲಕ ನಾರಾಯಣ ರೈ ಮನೆಗೆ ತೋಟದ ಕೆಲಸಕ್ಕೆ ಹೋಗುತ್ತಿತ್ತು. ಬಾಲಕಿಯ ಮನೆಯವರ ಅಸಹಾಯಕ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಆರೋಪಿ ಅಪ್ರಾಪ್ತೆಯನ್ನು ಅತ್ಯಾಚಾರವೆಸಗಿ ಆಕೆ ಮಗುವಿಗೆ ಜನನ ನೀಡುವುದಕ್ಕೆ ಕಾರಣವಾಗಿದ್ದಾನೆ ಎಂದು ಆರೋಪಿಸಿತ್ತು.


ದೂರಿನಲ್ಲಿ ನಾರಾಯಣ ರೈ ಅವರ ಹೆಸರನ್ನು ನಮೂದಿಸಿದರೆ ಪ್ರಕರಣ ದಾಖಲಿಸಿ ಜೈಲಿಗೆ ಹಾಕುವುದಾಗಿ ಪೊಲೀಸರು ಬೆದರಿಕೆ ಹಾಕಿದ್ದಾರೆ ಎಂದು ಸಮಿತಿಯು ಹೇಳಿತ್ತು. ಎಫ್ ಐಆರ್ ನಲ್ಲಿ ಪೊಲೀಸರು, ರೈಯನ್ನು ರಕ್ಷಿಸುವ ನಿರ್ದಿಷ್ಟ ಉದ್ದೇಶದಿಂದ ಆರೋಪಿಗಳ ಹೆಸರನ್ನು ಪ್ರಮೋದ್ ಎಂದು ಉಲ್ಲೇಖಿಸಿದ್ದಾರೆ ಎಂದು ಸಮಿತಿ ಆರೋಪಿಸಿತ್ತು.


ರೈ ಅವರನ್ನು ತಕ್ಷಣ ಬಂಧಿಸಬೇಕು, ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಪುತ್ತೂರು ಗ್ರಾಮಾಂತರ ಪೊಲೀಸ್ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಆರೋಪಿ ಮತ್ತು ನೊಂದ ಬಾಲಕಿಯ ಡಿಎನ್ ಎ ಪರೀಕ್ಷೆ ನಡೆಸುವಂತೆ ಸಂಘಟನೆ ಆಗ್ರಹಿಸಿತ್ತು. ಈ ಬೇಡಿಕೆಗಳನ್ನು ಈಡೇರಿಸಲು ವಿಳಂಬವಾದರೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಮುಂದೆ ಸಂಪ್ಯದಲ್ಲಿ ಪ್ರತಿಭಟನೆ ನಡೆಸಲು ಸಂಘಟನೆ ವ್ಯವಸ್ಥೆ ಮಾಡುತ್ತದೆ ಎಂದು ನಾಯಕರು ಎಚ್ಚರಿಸಿದ್ದರು.



Join Whatsapp