ಪಾಟ್ನಾ: 2013 ರಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರಿಗೆ ಬಿಹಾರ ಬಿಜೆಪಿ ಘಟಕ ಆಯೋಜಿಸಿದ್ದ ರಾಜಕೀಯ ಜಾಥಾದ ವೇಳೆ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್.ಐ.ಎ. ನ್ಯಾಯಾಲಯ 10 ಮಂದಿಯನ್ನ ಅಪರಾಧಿಗಳೆಂದು ಘೋಷಿಸಿ, ಒಬ್ಬನನ್ನು ಖುಲಾಸೆಗೊಳಿಸಿ ಆದೇಶ ನೀಡಿದೆ.
ಸದ್ಯ ಆರೋಪಿಗಳಲ್ಲಿ ಓರ್ವನನ್ನು ಸಾಕ್ಷ್ಯದ ಕೊರತೆಯಿಂದ ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ ಎಂದು ಎನ್.ಐ.ಎ ನ್ಯಾಯಾಧೀಶರಾದ ಗುರ್ವಿಂದರ್ ಮೆಹೋತ್ರ ತಿಳಿಸಿದರು.
ಪಾಟ್ನಾ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಓರ್ವನನ್ನು ಹೊರತುಪಡಿಸಿ ಇತರ 10 ಮಂದಿಯ ಶಿಕ್ಷೆಯನ್ನು ನವೆಂಬರ್ 1 ರಂದು ಪ್ರಕಟಿಸಲಾಗುವುದೆಂದು ತನಿಖಾ ಸಂಸ್ಥೆಯ ಪರವಾಗಿ ಹಾಜರಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಲಾಲನ್ ಪ್ರಸಾದ್ ಸಿಂಗ್ ತಿಳಿಸಿದರು.
ಇಂತಿಯಾಝ್ ಅನ್ಸಾರಿ, ಮುಜೀಬುಲ್ಲಾ, ಹೈದರ್ ಅಲಿ, ಪಿರೋಝ್ ಅಸ್ಲಂ, ಒಮರ್ ಅನ್ಸಾರಿ, ಇಫೀಕಾರ್, ಅಹ್ಮದ್ ಹುಸೈನ್, ಉಮೈರ್ ಸಿದ್ದೀಕಿ ಮತ್ತು ಅಝರುದ್ದೀನ್ ಎಂಬವರನ್ನು ದೋಷಿಗಳೆಂದು ನ್ಯಾಯಾಲಯ ಘೋಷಿಸಿದೆ. ಫಕ್ರುದ್ದೀನ್ ಎಂಬಾತನನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.