ಆರೆಸ್ಸೆಸ್ ಬೆಂಬಲಿತ IAS ಕೋಚಿಂಗ್ ಸಂಸ್ಥೆಯಿಂದ 1986ರಿಂದಲೂ ಸದ್ದಿಲ್ಲದೆ ತಯಾರಾಗುತ್ತಿದ್ದಾರೆ ‘ರಾಷ್ಟ್ರೀಯವಾದಿ ನಾಗರಿಕ ಸೇವಕರು’ !

Prasthutha|

ನವದೆಹಲಿ : ದೇಶದ ಪ್ರತಿಷ್ಠಿತ ನಾಗರಿಕ ಸೇವೆಗಳಾದ ಐಎಎಸ್, ಐಪಿಎಸ್ ಗೆ ಸಂಬಂಧಿಸಿದ ಯುಪಿಎಸ್ ಸಿ ಪರೀಕ್ಷೆಗಳಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಇತ್ತೀಚೆಗಷ್ಟೇ ‘ಯುಪಿಎಸ್ ಸಿ ಜಿಹಾದ್’ ಎಂಬ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿ, ಬಿಜೆಪಿ ಬೆಂಬಲಿಗ ಪತ್ರಕರ್ತರೊಬ್ಬರು ದೇಶಾದ್ಯಂತ ಛೀಮಾರಿಸಿಕೊಂಡಿದ್ದರು. ಯುಪಿಎಸ್ ಸಿ ಪರೀಕ್ಷೆಯಲ್ಲಿ ಮುಸ್ಲಿಮ್ ಅಭ್ಯರ್ಥಿಗಳ ಯಶಸ್ಸು ಹೆಚ್ಚುವಿಕೆಗೆ ಜಾಮಿಯಾ ಮತ್ತು ಝಕಾತ್ ಫೌಂಡೇಶನ್ ನಂತಹ ಕೋಚಿಂಗ್ ಸಂಸ್ಥೆಗಳ ವಿರುದ್ಧ ಕೆಂಗಣ್ಣು ಬೀರಲಾಗುತ್ತಿದೆ. ಇಂತಹ ಹೊತ್ತಲ್ಲಿ, 1986ರಿಂದಲೂ ಆರೆಸ್ಸೆಸ್ ಬೆಂಬಲಿತ ಕೋಚಿಂಗ್ ಸಂಸ್ಥೆಯೊಂದು, ನಾಗರಿಕ ಸೇವಾ ಪರೀಕ್ಷೆ ಅಭ್ಯರ್ಥಿಗಳಿಗೆ ಕೋಚಿಂಗ್ ನೀಡುತ್ತಿದ್ದು, ಈ ವರ್ಷ ತಮ್ಮ ಸಂಸ್ಥೆಯ ಶೇ.61 ಅಭ್ಯರ್ಥಿಗಳು ಯಶಸ್ಸು ಸಾಧಿಸಿದ್ದಾರೆ ಎಂದು ಹೇಳಿಕೊಂಡಿದೆ ಎಂದು ‘ದ ಪ್ರಿಂಟ್’ ವರದಿ ಮಾಡಿದೆ.
ಈ ವರ್ಷ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ 759 ಅಭ್ಯರ್ಥಿಗಳಲ್ಲಿ, 466 ಮಂದಿ ಸಂಕಲ್ಪದ ‘ಇಂಟರ್ವ್ಯೂ ಗೈಡೆನ್ಸ್ ಪ್ರೋಗ್ರಾಮ್(ಐಜಿಪಿ)’ನಲ್ಲಿ ಭಾಗಿಯಾಗಿದ್ದಾರೆ ಎಂದು ಸಂಸ್ಥೆ ಹೇಳಿಕೊಂಡಿದೆ.

2018ರಲ್ಲಿ ಯುಪಿಎಸ್ ಸಿಯಿಂದ ಆಯ್ಕೆಯಾದ 990 ಅಭ್ಯರ್ಥಿಗಳಲ್ಲಿ 649 ಅಭ್ಯರ್ಥಿಗಳು ಐಜಿಪಿಗೆ ದಾಖಲಾಗಿದ್ದರು. 2017, 2016, 2015ರ ಅವಧಿಯಲ್ಲಿ ಕ್ರಮವಾಗಿ 1,099, 1078 ಮತ್ತು 1236 ಅಭ್ಯರ್ಥಿಗಳು ಯುಪಿಎಸ್ ಸಿಗೆ ಆಯ್ಕೆಯಾಗಿದ್ದರೆ, ಐಜಿಪಿ ಸೇರ್ಪಡೆಗೊಂಡಿದ್ದವರಲ್ಲಿ 689, 648 ಮತ್ತು 670 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಸಂಕಲ್ಪದಲ್ಲಿ ಪ್ರಿಲಿಮಿನರಿ ಹಂತದಿಂದ ಸಂದರ್ಶನ ಹಂತದ ವರೆಗೆ ತರಬೇತಾದ ಅಭ್ಯರ್ಥಿಗಳ ವಾಸ್ತವ ಸಂಖ್ಯೆಗಳ ಬಗ್ಗೆ ಸಂಸ್ಥೆಯ ವೆಬ್ ಸೈಟ್ ನಲ್ಲಿ ಮಾಹಿತಿಯಿಲ್ಲ. ಆದರೆ, ಸಂಸ್ಥೆಯಿಂದ ಅಂತಿಮವಾಗಿ ಆಯ್ಕೆಯಾಗುವ ಅಭ್ಯರ್ಥಿಗಳ ಸಂಖ್ಯೆ ಶೇ.10ರಷ್ಟಿರಬಹುದು ಎಂದು ಸಂಸ್ಥೆಯ ಒಳಗಿನವರು ಹೇಳುತ್ತಾರೆ ಎಂದು ವರದಿ ತಿಳಿಸಿದೆ.

- Advertisement -

ವರ್ಷಗಳಿಂದ ‘ಸಂಕಲ್ಪ’ ದೇಶದ ಸಿವಿಲ್ ಸರ್ವಿಸಸ್ ಕೋಚಿಂಗ್ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಗಳಲ್ಲಿ ಒಂದು. ಆದರೆ, ಇತರ ವಾಣಿಜ್ಯ ಕೋಚಿಂಗ್ ಕೇಂದ್ರಗಳಿಗಿಂತ ‘ಸಂಕಲ್ಪ’ ಮಾಧ್ಯಮ ಪ್ರಚಾರದಲ್ಲಿ ಹೆಚ್ಚು ಆಸಕ್ತವಾಗಿಲ್ಲ ಮತ್ತು ಲಾಭದಾಯಕ ಉದ್ದೇಶವನ್ನೂ ಹೊಂದಿಲ್ಲ ಎನ್ನಲಾಗುತ್ತಿದೆ.
ಆರೆಸ್ಸೆಸ್ ನಂಟು ಹೊಂದಿರುವ ಈ ಸಂಸ್ಥೆಗೆ ಹೆಚ್ಚು ಪ್ರಚಾರದ ಅಗತ್ಯವಿಲ್ಲವಂತೆ, ಆದರೆ, ಪ್ರತಿವರ್ಷ ಇದರ ಕಾರ್ಯಕ್ರಮಗಳಲ್ಲಿ ಬಿಜೆಪಿ ನಾಯಕರು ಭಾಗವಹಿಸುತ್ತಾರೆ. ಮುಂದಿನ ಭಾನುವಾರ ನಡೆಯಲಿರುವ ಕಾರ್ಯಕ್ರಮವೊಂದಕ್ಕೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ನಾಗಾಲ್ಯಾಂಡ್ ರಾಜ್ಯಪಾಲ ಮತ್ತು ಮಾಜಿ ಐಪಿಎಸ್ ಅಧಿಕಾರಿ ಆರ್.ಎನ್. ರವಿ ಭಾಗವಹಿಸಲಿದ್ದಾರೆ ಎಂದು ವರದಿ ತಿಳಿಸಿದೆ.

ಕಳೆದ ವರ್ಷ ‘ಸಂಕಲ್ಪ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಆರೆಸ್ಸೆಸ್ ಮುಖಂಡ ಕೃಷ್ಣ ಗೋಪಾಲ್ ಭಾಗವಹಿಸಿದ್ದರು. ಗೋಪಾಲ್ ಅವರು ಸಂಸ್ಥೆಯ ಹಿರಿಯ ‘ಮಾರ್ಗದರ್ಶಕ’ರಲ್ಲಿ ಒಬ್ಬರು. ಸಂಸ್ಥೆಯ ವೆಬ್ ಸೈಟ್ ಗ್ಯಾಲರಿಯಲ್ಲಿ ಪ್ರಕಟಿಸಲಾಗಿರುವ ಹಳೆ ವಿದ್ಯಾರ್ಥಿಗಳ ಫೋಟೊಗಳಲ್ಲಿ ಬಿಜೆಪಿ ಸಚಿವರುಗಳಾದ ಸ್ಮೃತಿ ಇರಾನಿ, ಪ್ರಕಾಶ್ ಜಾವಡೇಕರ್, ರಮೇಶ್ ಪೊಖ್ರಿಯಾಲ್ ಅವರ ಭಾವಚಿತ್ರಗಳೂ ಇವೆ. ಆರೆಸ್ಸೆಸ್ ನಂಟಿನ ಬಗ್ಗೆ ಪ್ರಶ್ನಿಸಿದರೆ, ನಮ್ಮದು ಸ್ವತಂತ್ರ ಸಂಸ್ಥೆ ಎಂದು ಸಂಸ್ಥೆಯ ಪ್ರಮುಖರು ಹೇಳುತ್ತಾರೆ ಎಂದು ವರದಿ ತಿಳಿಸಿದೆ.
“ಸಂಕಲ್ಪವನ್ನು ನೀವು ಆರೆಸ್ಸೆಸ್ ಸಂಯೋಜಿತ ಸಂಸ್ಥೆ ಅನ್ನುವುದಕ್ಕಿಂತ, ಆರೆಸ್ಸೆಸ್ ಸ್ಫೂರ್ತಿ ಹೊಂದಿದ ಸಂಸ್ಥೆ ಎಂದು ಹೇಳಬಹುದು’’ ಎಂದು ಹೆಸರು ಹೇಳಲಿಚ್ಚಿಸದ ಆರೆಸ್ಸೆಸ್ ಕಾರ್ಯಕರ್ತರೊಬ್ಬರು ಹೇಳುತ್ತಾರೆ ಎಂದು ವರದಿ ತಿಳಿಸಿದೆ.

- Advertisement -