ವಿಧಾನಸೌಧಕ್ಕೆ ಅಕ್ರಮವಾಗಿ 10.5 ಲಕ್ಷ ರೂ. ಸಾಗಿಸುತ್ತಿದ್ದ ಇಂಜಿನಿಯರ್ ವಶಕ್ಕೆ

Prasthutha|

ಬೆಂಗಳೂರು: ಶಕ್ತಿ ಸೌಧಕ್ಕೆ ಅನಧಿಕೃತವಾಗಿ 10.5 ಲಕ್ಷ ರೂ. ನಗದು ಸಾಗಿಸುತ್ತಿದ್ದಾಗ ಸಹಾಯಕ ಇಂಜಿನಿಯರ್ ಒಬ್ಬರು ವಿಧಾನಸೌಧ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

- Advertisement -


ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ನಿನ್ನೆ ಸಂಜೆ 7 ಗಂಟೆಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಜಗದೀಶ್ ಅನಧಿಕೃತವಾಗಿ ಹಣ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.


ಗೇಟ್’ನಲ್ಲಿ ಪೊಲೀಸರು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಮಂಡ್ಯ ಮೂಲದ ಜಗದೀಶ್ ಬ್ಯಾಗ್’ನಲ್ಲಿ ದೊಡ್ಡ ಮೊತ್ತದ ಹಣ ಇರುವುದು ಪತ್ತೆಯಾಗಿದೆ. ಆದರೆ ಹಣದ ಮೂಲದ ಕುರಿತಾಗಿ ಪೊಲೀಸರು ಪ್ರಶ್ನಿಸಿದಾಗ ಯಾವುದೇ ಸ್ಪಷ್ಟವಾದ ಮಾಹಿತಿಯನ್ನು ಈ ವ್ಯಕ್ತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಎಫ್’ಐಆರ್ ಕೂಡಾ ದಾಖಲಾಗಿದೆ. ಹಣ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -


ಆದರೆ ಈ ವ್ಯಕ್ತಿ ಇಷ್ಟು ಮೊತ್ತದ ಹಣವನ್ನು ವಿಧಾನಸೌಧಕ್ಕೆ ಏಕೆ ತೆಗೆದುಕೊಂಡು ಹೋಗುತ್ತಿದ್ದರು ಎಂಬುವುದು ಇನ್ನೂ ದೃಢಪಟ್ಟಿಲ್ಲ.
ಹಣದ ಮೂಲದ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇಷ್ಟು ದೊಡ್ಡ ಮೊತ್ತವನ್ನು ವಿಧಾನಸೌಧಕ್ಕೆ ತಂದಿದ್ದ ಉದ್ದೇಶ ಏನು? ಯಾರಿಗೆ ನೀಡಲು ಹಣವನ್ನು ತಂದಿದ್ದ ಎಂಬುವುದು ಸ್ಪಷ್ಟಗೊಂಡಿಲ್ಲ.


2016ರಲ್ಲಿ ಇದೇ ರೀತಿ ಅಕ್ರಮವಾಗಿ 2.5 ಕೋಟಿ ರುಪಾಯಿ ನಗದನ್ನು ಸಾಗಿಸುತ್ತಿದ್ದ ಕಾರನ್ನು ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಪೊಲೀಸರು ಜಪ್ತಿ ಮಾಡಿದ್ದರು. ಆಗಿನ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಕಚೇರಿ ಸಿಬ್ಬಂದಿ ಬಳಿ 25.76 ಲಕ್ಷ ರೂ ನಗದು ಹಣ ಪತ್ತೆಯಾಗಿತ್ತು.

Join Whatsapp