ನವದೆಹಲಿ: ಜಗತ್ತಿನಾದ್ಯಂತ ಕೋವಿಡ್ -19 ಕಾರಣದಿಂದಾಗಿ ಎಲ್ಲಾ ಉದ್ದಿಮೆಗಳು ನಷ್ಟದ ಹಾದಿಯಲ್ಲಿರುವಾಗಲೇ ಐಷಾರಾಮಿ ಕಾರು ತಯಾರಿಕಾ ಕಂಪನಿಗಳಾದ ರೋಲ್ಸ್ ರಾಯ್ಸ್ ಹಾಗೂ BMW, 2021ರಲ್ಲಿ ಮಾರಾಟದಲ್ಲಿ ನೂತನ ದಾಖಲೆ ಬರೆದಿದೆ. 117 ವರ್ಷಗಳ ಕಂಪನಿಯ ಚರಿತ್ರೆಯಲ್ಲಿಯೇ ಕಳೆದ ವರ್ಷ ಅತಿಹೆಚ್ಚು ಅಂದರೆ 5,586 ಕಾರುಗಳನ್ನು ಮಾರಾಟ ಮಾಡಿರುವುದಾಗಿ ರೋಲ್ಸ್ ರಾಯ್ಸ್ ಹೇಳಿದೆ.
2020ಕ್ಕೆ ಹೋಲಿಸಿದರೆ ರೋಲ್ಸ್ ರಾಯ್ಸ್ ಕಾರುಗಳ ಮಾರಾಟದಲ್ಲಿ ಶೇ.49ರಷ್ಟು ಪ್ರಗತಿ ಸಾಧಿಸಿದೆ. ಅಮೆರಿಕ, ಚೀನಾ, ಭಾರತ ಸೇರಿದಂತೆ ಜಗತ್ತಿನ 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ರೋಲ್ಸ್ ರಾಯ್ಸ್ ‘ರಾಯಲ್’ ಗ್ರಾಹಕರಿಗೆ 5,586 ಕಾರುಗಳನ್ನು ಮಾರಾಟ ಮಾಡಿದೆ. ಅದಾಗಿಯೂ ಗ್ರಾಹಕರ ಬೇಡಿಕೆ ಹೆಚ್ಚಿದ್ದು, ಅದಕ್ಕನುಗುಣವಾಗಿ ವಾಹನಗಳನ್ನು ಪೂರೈಸಲು ಸಾಧ್ಯವಾಗಿಲ್ಲ ಎಂದು ರೋಲ್ಸ್ ರಾಯ್ಸ್ CEO ಟೋರ್ಸ್ಟನ್ ಮುಲ್ಲರ್ ಹೇಳಿದ್ದಾರೆ.
ಮತ್ತೊಂದೆಡೆ ಇದೇ ಮೊದಲ ಬಾರಿಗೆ ವರ್ಷವೊಂದರಲ್ಲಿ 2.21 ಮಿಲಿಯನ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ಪ್ರಮುಖ ಪ್ರೀಮಿಯಂ ಕಾರು ಬ್ರ್ಯಾಂಡ್ BMW ಅಮೋಘ ಸಾಧನೆ ದಾಖಲಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ BMW ಕಾರುಗಳ ಮಾರಾಟದಲ್ಲಿ ಶೇ.9.1ರಷ್ಟು ಏರಿಕೆ ಕಂಡಿದೆ. ಇದರ ಹೊರತಾಗಿ 2.52 ಮಿಲಿಯನ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿರುವುದಾಗಿ BMW ಹೇಳಿದೆ. ಕಳೆದ ವರ್ಷದ ಸಂಖ್ಯೆಗೆ ಹೋಲಿಸಿದರೆ ಇದು ದುಪ್ಪಟ್ಟಾಗಿದೆ. ಇದರಲ್ಲಿ ಅತಿ ಹೆಚ್ಚು ಕಾರುಗಳು ಯರೋಪ್’ನಲ್ಲಿ (ಶೇ.23) ಮಾರಾಟವಾಗಿದೆ ಎಂದು ಕಂಪನಿ ತಿಳಿಸಿದೆ