ಕೆಫೆ ಕಾಫಿ ಡೇ: ಎರಡು ವರ್ಷದಲ್ಲಿ 4 ಸಾವಿರ ಕೋಟಿ ರೂಪಾಯಿ ಸಾಲ ತೀರಿಸಿದ ಮಾಳವಿಕಾ ಹೆಗಡೆ !

Prasthutha|

ಬೆಂಗಳೂರು: ಬರೋಬ್ಬರಿ 7,200 ಕೋಟಿ ರೂಪಾಯಿ ಸಾಲ ಉಳಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಕೆಫೆ ಕಾಫಿ ಡೇ ಮಾಲಿಕ ಸಿದ್ಧಾರ್ಥ ಹೆಗಡೆ ಬಳಿಕ ಕಂಪನಿಯನ್ನು ಮುನ್ನಡೆಸುವ ಕ್ಲಿಷ್ಟಕರ ಜವಾಬ್ಧಾರಿ ಹೊತ್ತಿದ್ದ ಅವರ ಪತ್ನಿ ಮಾಳವಿಕಾ ಹೆಗಡೆ, ಇದೀಗ ಎಲ್ಲರ ನಿರೀಕ್ಷೆಗಳನ್ನೂ ಮೀರಿಸುವ ಸಾಧನೆಯ ಮೂಲಕ ಸುದ್ದಿಯಾಗಿದ್ದಾರೆ. 7,200 ಕೋಟಿ ರೂಪಾಯಿಯಷ್ಟಿದ್ದ ಸಾಲವನ್ನು ಕೇವಲ ಎರಡು ವರ್ಷಗಳಲ್ಲಿ 3,100 ಕೋಟಿ ರೂಪಾಯಿಗೆ ಇಳಿಸುವಲ್ಲಿ ಮಾಳವಿಕಾ ಹೆಗಡೆ ಯಶಸ್ವಿಯಾಗಿದ್ದಾರೆ.

- Advertisement -

ಸಿದ್ಧಾರ್ಥ್‌ ಹೆಗಡೆ ಸಾವಿನ ಬೆನ್ನಲ್ಲೇ ಕೆಫೆ ಕಾಫಿ ಡೇ ಬಾಗಿಲು ಮುಚ್ಚಲಿದೆ, ಸಾಲದ ಸುಳಿಯಲ್ಲಿರುವ ಉದ್ಯಮ ಮುಂದುವರಿಸುವುದು ಕಷ್ಟಸಾಧ್ಯ ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು. ಆದರೆ, ಪತಿಯ ಅಗಲಿಕೆಯ ನೋವು, ವ್ಯವಹಾರದಲ್ಲಿನ ನಷ್ಟ, ಸಾವಿರಾರು ಉದ್ಯೋಗಿಗಳ ಭವಿಷ್ಯದ ಚಿಂತೆಯ ಕಠಿಣ ಪರಿಸ್ಥಿತಿಯ ನಡುವೆಯೂ ಕಂಪನಿಯನ್ನು ಮುನ್ನಡೆಸುವ ಜವಾಬ್ದಾರಿ ತೆಗೆದುಕೊಂಡ ಮಾಳವಿಕಾ ಹೆಗಡೆ, ಎಲ್ಲರ ನಿರೀಕ್ಷೆಗೂ ಮೀರಿ ಎರಡೇ ವರ್ಷದಲ್ಲಿ ಕಂಪನಿಯ ಸಾಲವನ್ನು ಅರ್ಧಕ್ಕೆ ಇಳಿಸಿದ್ದಾರೆ.

ದಿ ಎಕನಾಮಿಕ್ ಟೈಮ್ಸ್‌’ಗೆ ನೀಡಿರುವ ಸಂದರ್ಶನದಲ್ಲಿ ಕಳೆದ ಎರಡು ವರ್ಷಗಳಲ್ಲಿ ತಾವು ನಡೆದುಬಂದ ಹಾದಿ ಹಾಗೂ ಮುಂದಿನ ಯೋಜನೆಗಳ ಬಗ್ಗೆ ಮಾಳವಿಕಾ ಹೆಗಡೆ ಮಾತನಾಡಿದ್ದಾರೆ. ಉಳಿವಿನ ಹೋರಾಟದಲ್ಲಿ ಜೊತೆನಿಂತ ಸಾವಿರಾರು ಉದ್ಯೋಗಿಗಳು ಹಾಗೂ ತಮ್ಮ ಮೇಲೆ ನಂಬಿಕೆಯಿಟ್ಟು ತಾಳ್ಮೆಯಿಂದ ಕಾದ ಬ್ಯಾಂಕ್’ಗಳಿಗೆ ಮಾಳವಿಕಾ ಧನ್ಯವಾದ ಸಲ್ಲಿಸಿದ್ದಾರೆ. ಜೊತೆಗೆ ಕಂಪನಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತೇನೆ ಮತ್ತು ತನ್ನ ಗಂಡನ ಕನಸುಗಳನ್ನು ನನಸಾಗಿಸಲು ಶ್ರಮಿಸುತ್ತೇನೆ ಎಂದು ಆತ್ಮವಿಶ್ವಾಸದ ನುಡಿಗಳನ್ನಾಡಿದ್ದಾರೆ.

Join Whatsapp