ಮೊಹಾಲಿ: ಪಂಜಾಬ್ ರಾಜ್ಯ ಗುಪ್ತಚರ ವಿಭಾಗದ ಕೇಂದ್ರ ಕಚೇರಿಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಪರಾರಿಯಾಗಿದ್ದಾರೆ. ಇದರಿಂದಾಗಿ ಕಟ್ಟಡದ ಗಾಜುಗಳು ಪುಡಿ ಪುಡಿಯಾಗಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಮೊಹಾಲಿಯ ಸೆಕ್ಟರ್ 77 ರಲ್ಲಿರುವ ಪಂಜಾಬ್ ಪೊಲೀಸ್ ಇಂಟೆಲಿಜೆನ್ಸ್ ಕಟ್ಟಡದಲ್ಲಿ ರಾತ್ರಿ 7:45ಕ್ಕೆ ಘಟನೆ ನಡೆದಿದೆ. ಮೊದಲಿಗೆ ಇದೊಂದು ಭಯೋತ್ಪಾದಕ ದಾಳಿ ಎಂದೇ ಹೇಳಲಾಗಿತ್ತು. ಆದರೆ ಮೊಹಾಲಿ ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಭಯೋತ್ಪಾದಕರ ಕೃತ್ಯ ಅಲ್ಲ ಎಂದು ಸ್ಪಷ್ಟಪಡಿಸಿದರು. ಸ್ಫೋಟದ ನಂತರ ವಿಧಿ ವಿಜ್ಞಾನ ತಜ್ಞರ ತಂಡ ಸ್ಥಳಕ್ಕಾಗಮಿಸಿದ್ದು ಪರಿಶೀಲನೆ ನಡೆಸಿತು. ಕಟ್ಟಡದ ಸುತ್ತಮುತ್ತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.