22 ಟನ್ ಅಕ್ರಮ ಅಕ್ಕಿ ವಶಪಡಿಸಿಕೊಂಡ ಹಾಸನ ಪೊಲೀಸರು

Prasthutha|

- Advertisement -

ಹಾಸನ: ನಗರದ ಕೈಗಾರಿಕಾ ಪ್ರದೇಶದ ಗೋದಾಮಿಗೆ ಅಕ್ರಮವಾಗಿ ದಾಸ್ತಾನು ಮಾಡುತ್ತಿದ್ದ 471 ಚೀಲ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.ಖಚಿತ ಮಾಹಿತಿ ಮೇರೆಗೆ ಸೋಮವಾರ ಸಂಜೆ ದಾಳಿ ನಡೆಸಿದ ಡಿಸಿಐಬಿ ಪೊಲೀಸರು ಸುಮಾರು ಇಪ್ಪತ್ತೆರಡೂವರೆ ಟನ್ ಅಕ್ಕಿ ಕಳ್ಳ ಸಾಗಣೆ ಪತ್ತೆ ಹಚ್ಚಿದೆ.

ಅಕ್ಕಿ ತುಂಬಿದ್ದ ಲಾರಿ ಭದ್ರಾವತಿ ಮೂಲದ್ದಾಗಿದ್ದು, ಚಾಲಕನನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಗೊಬ್ಬರ ಸಾಗಣೆಗೆಂದು ಸದರಿ ಲಾರಿ ಶನಿವಾರ ಭದ್ರಾವತಿಯಿಂದ ಹಾಸನಕ್ಕೆ ಬಂದಿತ್ತು. ಈ ನಡುವೆ ಮತ್ತೊಂದು ಬಾಡಿಗೆ ಇದೆ. ಅದಕ್ಕೆ ಲಾರಿ ನೀಡಿದರೆ ಸಾಕು ಎಂದು ಮಾಲೀಕ ಚಾಲಕನಿಗೆ ತಿಳಿಸಿದ್ದರು ಎನ್ನಲಾಗಿದೆ. ಅದರಂತೆ ಬೇರೊಬ್ಬ ಚಾಲಕ ಲಾರಿ ಕೊಂಡೊಯ್ದು, ಅದರಲ್ಲಿ ಅಕ್ಕಿ ತುಂಬಿಸಿಕೊಂಡು ಬಂದಿದ್ದ. ನಂತರ ಇದನ್ನು ನಗರದ ಕಾಟೀಹಳ್ಳಿಯ ಗೋದಾಮೊಂದಕ್ಕೆ ಅನ್‌ಲೋಡ್ ಮಾಡಿ ಬರುವಂತೆ ಚಾಲಕನಿಗೆ ತಿಳಿಸಿದ್ದ. ಈ ವಿಷಯ ತಿಳಿದ ಪೊಲೀಸರು ದಾಳಿ ನಡೆಸಿ ಅಕ್ರಮ ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಬಗ್ಗೆ ನನಗೇನು ತಿಳಿದಿಲ್ಲ ಎಂದು ಚಾಲಕ ಹೇಳಿದ್ದಾನೆ.

- Advertisement -

ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕಿ ವಸಂತ ಕುಮಾರಿ ಹಾಗೂ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಮೇಲ್ನೋಟಕ್ಕೆ ಇದು ಪಡಿತರ ಅಕ್ಕಿ ಎಂದು ತಿಳಿದು ಬಂದಿದೆ. ಆದರೆ ಇದು ಎಲ್ಲಿಂದ ಬಂದಿದೆ, ಎಲ್ಲಿಗೆ ಹೋಗುತ್ತಿತ್ತು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.ಪಡಿತರ ಅಕ್ಕಿಯನ್ನು ಬೇರೆ ಚೀಲಕ್ಕೆ ಬದಲಾಯಿಸಿ ದಂಧೆ ನಡೆಸುತ್ತಿರುವುದಂತೆ ಕಾಣುತ್ತಿದೆ. ಈ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುವುದು ಎಂದರು.ಈ ಸಂಬಂಧ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp