►ಆತಂಕಪಡುವ ಅಗತ್ಯವಿಲ್ಲ ಎಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಸಮೀಪದಲ್ಲಿಯೇ ರಸ್ತೆ ಕುಸಿತ ಉಂಟಾಗಿದೆ.
ರನ್ ವೇ ಕುಸಿತದಿಂದಾಗಿ ವಿಮಾನ ನಿಲ್ದಾಣದ ಸುತ್ತ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಈಗಾಗಲೇ ಅದ್ಯಪಾಡಿಯಿಂದ ಕೈಕಂಬಕ್ಕೆ ತೆರಳುವ ಮಾರ್ಗವನ್ನು ಬ್ಲಾಕ್ ಮಾಡಲಾಗಿದೆ. ಭಾರೀ ಮಳೆಯಿಂದಾಗಿ ಈ ಅವಘಡ ಸಂಭವಿಸಿದೆ. ಜಿಲ್ಲಾಡಳಿತ ರನ್ ವೇ ಸಮೀಪದಲ್ಲಿ ಉಂಟಾಗಿರುವ ರಸ್ತೆ ಕುಸಿತವನ್ನು ಸರಿಪಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ.
ಅಲ್ಲದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ, ಏರ್ ಪೋರ್ಟ್ ನಲ್ಲಿ ಕಾರ್ಯಾಚರಣೆ ಸಾಮಾನ್ಯ ರೀತಿಯಲ್ಲಿಯೇ ನಡೆಯುತ್ತಿದೆ. ರನ್ ವೇಗೆ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ . ಎರಡು ದಿನಗಳ ಹಿಂದೆ ಸತತ ನೀರಿನ ಹರಿವಿನಿಂದ ಮೋರಿಯ ಬುಡ ಕೊಚ್ಚಿ ಹೋಗಿತ್ತು. ಹೀಗಾಗಿ ರಸ್ತೆಯು ಕುಸಿತಗೊಂಡಿದೆ. ಸ್ಥಳೀಯ ಅಧಿಕಾರಿಗಳು ರಸ್ತೆ ದುರಸ್ತಿ ಕಾರ್ಯವನ್ನು ಕೈಗೊಂಡಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದೆ .
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಇಂದು ಕೂಡ ಶಾಲಾ ಕಾಲೇಜಿಗಳಿಗೆ ರಜೆ ನೀಡಲಾಗಿದೆ.