ಬೆಂಗಳೂರು: ಸಂಚಾರಿ ನಿಯಮಗಳನ್ನು ನಿಖರವಾಗಿ ಪಾಲಿಸುವಂತೆ ಯುವ ಸಮೂಹಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣ ಮೂರ್ತಿ ಕರೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬೆಂಗಳೂರು ನಗರ ಜಿಲ್ಲೆ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾದ “ರಸ್ತೆ ಅಪಘಾತ ತಡೆ ದಿನಾಚರಣೆ – 2022” ಉದ್ಘಾಟಿಸಿ ಮಾತನಾಡಿದ ಅವರು, ಸಂಚಾರಿ ನಿಯಮಗಳ ಪಾಲನೆಯಿಂದ ಅಪಘಾತ ತಪ್ಪಿಸುವ ಜೊತೆಗೆ ಪಾದಚಾರಿಗಳಿಗೆ ಹೆಚ್ಚಿನ ಅನುಕೂಲವಾಗಿದೆ ಎಂದರು.
ಕಾರ್ಮಿಕ ಇಲಾಖೆ ಜಂಟಿ ಆಯುಕ್ತ ರವಿ ಕುಮಾರ್ ಮಾತನಾಡಿ, ಸಂಚಾರಿ ನಿಯಮಗಳ ಪಾಲನೆ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಸ್ವಯಂ ಸೇವೆಕರು ಈ ಕುರಿತು ಜನಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಚಿತ್ರನಟಿ ಸಂಯುಕ್ತ ಹೆಗಡೆ ಮಾತನಾಡಿ, ಯುವ ಜನರಲ್ಲಿ ಸಮಯ ಪ್ರಜ್ಞೆ ಮತ್ತು ಸಾಮಾಜಿಕ ಕಳಕಳಿ ಇರಬೇಕು ಎಂದು ಕರೆ ನೀಡಿದರು.
ರೆಡ್ ಕ್ರಾಸ್ ಸಭಾಪತಿ ಬಾಲಕೃಷ್ಣ ಶೆಟ್ಟಿ, ಉಪ ಸಭಾಪತಿ ಮುಹಮ್ಮದ್ ತಸಿಲುಲ್ಲಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಇಂದಿರಾ ಕಗಾಡಿ, ಭಾಸ್ಕರ್ ನಾಯಕ್, ಪಿ.ವಿ. ಶೆಟ್ಟಿ, ರವಿ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.