ಹೆಣ್ಣು ಮಕ್ಕಳ ವಿವಾಹ ವಯಸ್ಸು ಏರಿಕೆ ಅವೈಜ್ಞಾನಿಕ

Prasthutha|

ಹಲವು ಪರ-ವಿರೋಧಗಳ ನಡುವೆ ಹೆಣ್ಣುಮಕ್ಕಳ ವಿವಾಹದ ವಯಸ್ಸನ್ನು 18ರಿಂದ 21ಕ್ಕೆ ಏರಿಸುವುದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ವಯಸ್ಸು ಏರಿಕೆಗೆ ನಿರ್ದಿಷ್ಟ ಕಾರಣವನ್ನು ತಿಳಿಸದಿದ್ದರೂ ಲಿಂಗ ತಾರತಮ್ಯ, ಶಿಕ್ಷಣ, ಸಬಲೀಕರಣ, ಮರಣದರ, ಅಪೌಷ್ಟಿಕತೆ, ಬಾಲ್ಯವಿವಾಹ, ಜನಸಂಖ್ಯಾ ನಿಯಂತ್ರಣ, ಪ್ರಬುದ್ಧತೆಯ ಕೊರತೆ ಇವೆಲ್ಲವೂ ಚರ್ಚೆಗೆ ಬಂದಂತಹ ವಿಚಾರಗಳಾಗಿವೆ. ಮೇಲ್ನೋಟಕ್ಕೆ ಇವೆಲ್ಲವೂ ಸರಿ ಎಂದೆನಿಸಿದರೂ ಎಳೆಎಳೆಯಾಗಿ ಬಿಡಿಸಿ ಆಳವಾಗಿ ಚಿಂತನೆ ನಡೆಸಿದರೆ ಹೆಣ್ಣುಮಕ್ಕಳ ಜೀವನ ಇನ್ನೂ ದುರಂತಕ್ಕೆ ತಲುಪಬಹುದು ಎಂದು ಭಾಸವಾಗುತ್ತಿದೆ. ಹೆಣ್ಣುಮಕ್ಕಳ ವಿವಾಹ ವಯಸ್ಸನ್ನು ಏರಿಸುವ ಮೂಲಕ ಇವೆಲ್ಲವೂ ನೀಗಬಹುದೇ ಅಥವಾ ತಕ್ಕಮಟ್ಟಿಗಾದರೂ ನಿಯಂತ್ರಣಕ್ಕೆ ಬರಬಹುದೇ ಎಂಬ ಅವಲೋಕನದ ಅಗತ್ಯವಿದೆ.

- Advertisement -

ಸಮಾಜದ ಆಗುಹೋಗುಗಳನ್ನು ಗಮನಿಸುವಾಗ, ಆಧುನಿಕ ತಂತ್ರಜ್ಞಾನಗಳು ಅಭಿವೃದ್ಧಿ ಹೊಂದಿದಂತೆ ಮಕ್ಕಳೂ ಇಂದು ಬೇಗನೆ ಪ್ರಾಪ್ತರಾಗುತ್ತಿದ್ದಾರೆ. 14-15ನೇ ವಯಸ್ಸಿನಲ್ಲಿಯೇ ಗಂಡು-ಹೆಣ್ಣಿನ ನಡುವಿನ ಪ್ರೇಮ ಸಂಬಂಧಗಳು ಹೆಚ್ಚುತ್ತಿವೆ. ಈ ಸಂಬಂಧವು ಯಾವಾಗ ಕಾನೂನುಬದ್ಧವಾಗಲಿದೆ ಎಂದು ತುದಿಗಾಲಲ್ಲಿ ನಿಂತು ಕಾಯುತ್ತಿರುತ್ತಾರೆ.  ಒಂದು ವೇಳೆ ವಿವಾಹದ ವಯಸ್ಸು ಹೆಚ್ಚಿಸಲ್ಪಟ್ಟರೆ ಇನ್ನೂ ನಾಲ್ಕು ವರ್ಷ ಹೆಚ್ಚು ಕಾಯಬೇಕಾದ ಪರಿಸ್ಥಿತಿ ಅವರದಾಗುತ್ತದೆ. ಈ ಸಂದರ್ಭದಲ್ಲಿ ವಿವಾಹಪೂರ್ವ ಸಹಜೀವನ (Living Together) ನಡೆಸುವ ಅವಕಾಶಗಳು ಹೆಚ್ಚಾಗುತ್ತವೆ. ಇದು ಅನೇಕ ಅನಾಹುತ, ಅವಘಡಗಳಿಗೆ ಎಡೆಮಾಡಿಕೊಡಬಹುದು. ಮಾತ್ರವಲ್ಲ ಸಮಾಜದಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಾಗುವ ಆತಂಕವಿದೆ. ಈ ವಿವಾಹಪೂರ್ವ ಸಹ ಜೀವನ ದುರಂತದಲ್ಲಿಯೇ ಮುಕ್ತಾಯವಾಗುತ್ತಿರುವುದು ಹೆಚ್ಚು. ಈ ಸಂದರ್ಭದಲ್ಲಿ ಹೆಣ್ಣು, ಪುರುಷನಿಂದ ಉಪೇಕ್ಷಿಸಲ್ಪಟ್ಟರೆ ಅದು ಅಪರಾಧವಾಗುವುದಿಲ್ಲ. ಓರ್ವ ವಿಚ್ಛೇದಿತ ಪತ್ನಿಗೆ ಸಿಗುವ ಪರಿಹಾರ, ಸೌಲಭ್ಯಗಳು ಈ ಹೆಣ್ಣಿಗೆ ಸಿಗಲಾರದು. ಒಂದು ವೇಳೆ ಆಕೆ ಈ ಸಮಯದಲ್ಲಿ ಮಗುವಿಗೆ ಜನ್ಮ ನೀಡಿದರೆ ಆ ಮಗು, ತಂದೆಯಿಲ್ಲದ ಮಗುವಾಗಿ, ಪ್ರಾಧಾನ್ಯತೆ ಇಲ್ಲದೆ ಸಮಾಜದಲ್ಲಿ ಬೆಳೆಯಬೇಕಾಗುತ್ತದೆ. ತಾಯಿಯೂ ಮಗುವನ್ನು ತ್ಯಜಿಸಿದರೆ ಅನಾಥ ಮಕ್ಕಳ ಹೆಚ್ಚಳ ಉಂಟಾಗಬಹುದು. ಈ ನಡುವೆ ಆತ ಮರಣಹೊಂದಿದರೂ, ಓರ್ವ ವಿಧವೆಗೆ ಸಿಗುವ ಕುಟುಂಬದ ಆಶ್ರಯ, ಆರ್ಥಿಕ ಸಹಕಾರ, ಬೆಂಬಲ ವಿವಾಹಪೂರ್ವ ಸಹಜೀವನದ ಸ್ತ್ರೀಗೆ ಲಭಿಸದೆ ಆಕೆ ಸಮಾಜದಲ್ಲಿ ಒಂಟಿಯಾಗುತ್ತಾಳೆ. ಇದು ಆಕೆಯನ್ನು ಇನ್ನೂ ದುರಂತಮಯ ಜೀವನಕ್ಕೆ ಕೊಂಡೊಯ್ಯುತ್ತವೆ ಎಂಬುದು ವಾಸ್ತವ ಸತ್ಯವಾಗಿದೆ. ನಮ್ಮ ದೇಶದಲ್ಲಿ ವಿವಾಹಪೂರ್ವ ಸಹಜೀವನಕ್ಕೆ ವಯಸ್ಸಿನ ಮಿತಿಯಿಲ್ಲದೆ, ಕಾನೂನುಬದ್ಧ ವಿವಾಹಕ್ಕೆ ವಯಸ್ಸಿನ ಮಿತಿ ಹೇರುವುದು ಒಂದು ಹಾಸ್ಯಾಸ್ಪದ ವಿಷಯವಾಗಿದೆ.

ಭಾರತೀಯ ಸಮಾಜದಲ್ಲಿ ಎಲ್ಲಾ ಜಾತಿ, ವರ್ಗ, ಧರ್ಮ, ಸಮುದಾಯದಲ್ಲಿ ವಿವಾಹವೆಂದರೆ ಈರ್ವರ ನಡುವೆ ನಡೆಯುವ ಒಪ್ಪಂದ ಮಾತ್ರವಲ್ಲ, ಅದು ಎರಡು ಕುಟುಂಬಗಳ ನಡುವೆ ಸ್ಥಾಪಿಸಲ್ಪಡುವ ಸಂಬಂಧವಾಗಿದೆ. ಇದನ್ನು ನಾವು ಲಿವಿಂಗ್ ಟುಗೆದರ್‌ ನಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ.

- Advertisement -

 ತಾನು ಹೇಗೆ, ಯಾವಾಗ, ಯಾರನ್ನು ವಿವಾಹವಾಗಬೇಕು ಎನ್ನುವುದನ್ನು ಆಕೆ ಮತ್ತು ಆಕೆಯ ಪೋಷಕರು ನಿರ್ಧರಿಸುವಂತಾಗಬೇಕು. ಇದರಲ್ಲಿ ಬೇರೆ ಯಾರದೇ ಹಸ್ತಕ್ಷೇಪ ಸಲ್ಲದು. ಈಗ 21 ವರ್ಷದ ನಂತರವೇ ವಿವಾಹವಾಗಲು ಬಯಸುವವರು ಹೆಚ್ಚು. ಆದ್ದರಿಂದ ಇದಕ್ಕಾಗಿ ಕಾನೂನಿನ ಅಗತ್ಯವಿದೆಯೇ? ಜಾಗೃತಿ ಮೂಡಿಸಿದರೆ ಸಾಲದೇ?

ಮಹಿಳೆಯರ ಸುರಕ್ಷತೆ ಬಗ್ಗೆ ಕಾಳಜಿ ವಹಿಸಬೇಕಾದ, ಕಠಿಣ ಕಾನೂನುಕ್ರಮಗಳನ್ನು ಕೈಗೊಳ್ಳಬೇಕಾದ ಇತರೇ ಹಲವಾರು ಸಮಸ್ಯೆಗಳು ದೇಶದಲ್ಲಿವೆ. ಇವೆಲ್ಲವನ್ನೂ ಅವಗಣಿಸಿ ಮದುವೆಯ ವಯಸ್ಸು ದೇಶದ ದೊಡ್ಡ ಸಮಸ್ಯೆ ಎಂಬಂತೆ ಬಿಂಬಿಸುತ್ತಿರುವುದು ಎಷ್ಟು ಸರಿ.

 ಅತ್ಯಾಚಾರವೊಂದನ್ನೇ ತೆಗೆದುಕೊಳ್ಳುವುದಾದರೂ ಇದರ ಸಂತ್ರಸ್ತ ಹೆಣ್ಣುಮಕ್ಕಳಿಗೆ ಅದೆಷ್ಟು ಕೌನ್ಸಿಲಿಂಗ್ ಅಥವಾ ಆತ್ಮವಿಶ್ವಾಸವನ್ನು ನೀಡಿದರೂ ಜೀವನಪೂರ್ತಿ ಮಾನಸಿಕವಾಗಿ ನೊಂದು ಜೀವಂತವಿದ್ದು ಸತ್ತಂತೆ ಬದುಕುತ್ತಿದ್ದಾರೆ. ಇದರಿಂದ ಹೊರಬರಲು ಅವರಿಗೆ ಸಾಧ್ಯವಾಗುವುದಿಲ್ಲ. ಎಲ್ಲಿಯಾದರೂ ಅಪರಾಧಿ ಕಠಿಣ ಶಿಕ್ಷೆಗೆ ಒಳಪಟ್ಟರೆ ಅಲ್ಪವಾದರೂ ಸಮಾಧಾನದಿಂದ ಜೀವಿಸುವಂತಾಗಬಹುದು. ದೇಶದ ಅತ್ಯಾಚಾರ ಪ್ರಕರಣಗಳನ್ನು ತೆಗೆದುಕೊಂಡರೂ ಆರೋಪಿ ಶಿಕ್ಷೆಗೊಳಪಟ್ಟಿದ್ದು ತುಂಬಾ ಕಡಿಮೆ. ಉನ್ನಾವೋ, ಹತ್ರಾಸ್ ಪ್ರಕರಣಗಳೇ ಇದಕ್ಕೆ ಸಾಕ್ಷಿ. ರಾಷ್ಟ್ರೀಯ ಮಹಿಳಾ ಆಯೋಗ (NCW) ದ ವರದಿ ಪ್ರಕಾರ, ಮಹಿಳಾ ವಿರೋಧಿ ಅಪರಾಧಗಳ ದೂರುಗಳು 2020ಕ್ಕಿಂತ 2021ರಲ್ಲಿ ಶೇಕಡಾ 30ರಷ್ಟು ಹೆಚ್ಚಳವಾಗಿದೆ.  2021ರಲ್ಲಿ ಲೈಂಗಿಕ ದೌರ್ಜನ್ಯದ ಅತೀ ಹೆಚ್ಚು ಬಲಿಪಶುಗಳು ಅಪ್ರಾಪ್ತ ವಯಸ್ಸಿನ ಮಕ್ಕಳು.  ಆರೋಪಿಗಳು ಪ್ರಭಾವಿಗಳ, ರಾಜಕಾರಣಿಗಳ ಬೆಂಬಲದಿಂದ ಜೈಲಿನಿಂದ ಹೊರಬಂದು ರಾಜಾರೋಷದಿಂದ ತಿರುಗಾಡುತ್ತಿರುವಾಗ, ಸಂತ್ರಸ್ತರಾದವರು ನೆಮ್ಮದಿಯಿಂದ ಬದುಕಲು ಸಾಧ್ಯವೇ? ಹೊಸ ಹೊಸ ಕಾಯಿದೆಗಳನ್ನು ಜಾರಿಗೆ ತರುವ ಬದಲು ಇದ್ದ ಕಾನೂನುಗಳನ್ನು ಸರಿಯಾಗಿ ಉಪಯೋಗಿಸಿ ಸಮಾಜದಲ್ಲಿ ನ್ಯಾಯ ಶಾಂತಿ ನೆಲೆಸುವಂತೆ ಮಾಡಬಹುದಲ್ಲವೇ  ಹೆಣ್ಣು ಮಕ್ಕಳು ಮಾನಸಿಕವಾಗಿ ಕುಗ್ಗಿದರೆ ಆಕೆಯ ದೈಹಿಕ ಬೆಳವಣಿಗೆಗೂ, ಸಬಲೀಕರಣಕ್ಕೂ ಹೊಡೆತವುಂಟಾಗುತ್ತದೆ ಎಂಬುದನ್ನು ಸರಕಾರಕ್ಕೆ ಬೇರೆ ತಿಳಿಸಬೇಕೇ?

ಜಾಗತಿಕ ಹಸಿವು ಸೂಚ್ಯಂಕ 2021ರಲ್ಲಿ ಭಾರತ 116 ರಾಷ್ಟ್ರಗಳ ಪಟ್ಟಿಯಲ್ಲಿ 101ನೇ ಸ್ಥಾನದಲ್ಲಿದೆ. ಭಾರತ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ಮತ್ತು ನೇಪಾಳ ರಾಷ್ಟ್ರಗಳಿಗಿಂತಲೂ ಕೆಳ ಸ್ಥಾನದಲ್ಲಿದೆ. ಹಸಿವು ಸೂಚ್ಯಂಕ ಈ ಮಟ್ಟದಲ್ಲಿ ಏರುತ್ತಿರುವಾಗ, ಪೌಷ್ಟಿಕಾಂಶದ ಕೊರತೆಯಿಂದ ಶಿಶು ಮರಣ ದರ, ತಾಯಂದಿರ ಮರಣ ದರ ಹೆಚ್ಚುವುದು ಸಹಜ ತಾನೇ. ವಿವಾಹ ವಯಸ್ಸನ್ನು ಏರಿಸಿದ ತಕ್ಷಣ ಪೌಷ್ಟಿಕಾಂಶ ಹೆಚ್ಚಲು ಸಾಧ್ಯವಿಲ್ಲ. ಬಾಲ್ಯದಿಂದಲೇ ಪೌಷ್ಟಿಕಾಂಶ ಆಹಾರವನ್ನು  ನೀಡುವಂತಹ ವ್ಯವಸ್ಥೆಯನ್ನು ಮಾಡಬೇಕು. ಇಂದು ಸರಕಾರದ ವತಿಯಿಂದಲೇ ರೇಷನ್ ಕಡಿತಗೊಳಿಸುವ, ಮೊಟ್ಟೆಯನ್ನು ಕಸಿಯುವ ಪ್ರಯತ್ನಗಳು ನಡೆಯುತ್ತಿವೆ. ಪ್ರತಿಯೊಂದು ವಸ್ತುವಿಗೂ ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಲೇ ಇದೆ. ಬಡ, ಮಧ್ಯಮ ವರ್ಗದವರಿಗೆ ಕೈಗೆಟುಕುವಂತಹ ಬೆಲೆಯನ್ನು ರೂಪಿಸಬೇಕು. ಮಕ್ಕಳಿಗೆ, ಪ್ರಸವಪೂರ್ವ ಮತ್ತು ಪ್ರಸವಾನಂತರ ಮಹಿಳೆಯರಿಗೆ ಮತ್ತು ಹೆಣ್ಣುಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರ ಪೂರೈಕೆಗೆ ಬೇರೆಯೇ ಯೋಜನೆಯನ್ನು ಹಾಕಬೇಕು.

2019-20ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿಯ ಪ್ರಕಾರ, 15 – 49ರ ವಯೋಮಾನದ ಮಹಿಳೆಯರಲ್ಲಿ ಶೇಕಡಾ 57ರಷ್ಟು ಮಂದಿಯಲ್ಲಿ ರಕ್ತಹೀನತೆ ಸಮಸ್ಯೆ ಇದ್ದರೆ, ಶೇಕಡ 25ರಷ್ಟು ಪುರುಷರಲ್ಲಿ ಈ ಸಮಸ್ಯೆ ಇದೆ. ರಾಜ್ಯದಲ್ಲಿಯೂ 15ರಿಂದ 19ರ ವಯೋಮಾನದ ಬಾಲಕಿಯರಲ್ಲಿ ಶೇಕಡಾ 49.4ರಷ್ಟು ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದರೆ, ಶೇಕಡಾ 26.5ರಷ್ಟು ಬಾಲಕರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಅಂಕಿ-ಅಂಶಗಳು ಲಿಂಗ ತಾರತಮ್ಯ ಬಗ್ಗೆ ಬೆಳಕು ಚೆಲ್ಲುತ್ತಿವೆ. ಇದಕ್ಕೆ ಪರಿಹಾರ ವಿವಾಹದ ವಯಸ್ಸನ್ನು ಏರಿಸುವ ಮೂಲಕವಲ್ಲ, ಬದಲಾಗಿ ಪ್ರತಿಯೊಂದು ಮನೆಯಲ್ಲಿಯೂ ಲಿಂಗ ತಾರತಮ್ಯ, ಅಸಮಾನತೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಶಿಕ್ಷಣವನ್ನು ನೀಡುವ ಮೂಲಕವಾಗಿದೆ.

 ಈಗ ಕಾಲ ಬದಲಾಗಿದೆ. ವಿವಾಹದ ತಕ್ಷಣ ಶಿಕ್ಷಣವನ್ನು ಮೊಟಕುಗೊಳಿಸುತ್ತಿರುವವರು ತುಂಬಾ ಕಡಿಮೆ. ವಿವಾಹದ ನಂತರವೂ ಉನ್ನತ ಶಿಕ್ಷಣವನ್ನು ಪಡೆದವರಿದ್ದಾರೆ, ಪಡೆಯುತ್ತಿದ್ದಾರೆ. ಇದು ನಗರ ಪ್ರದೇಶದ ಚಿತ್ರಣವಾದರೆ, ಗ್ರಾಮೀಣ ಪ್ರದೇಶದಲ್ಲಿ ದೂರದೂರಿಗೆ ಹೋಗಿ ಶಿಕ್ಷಣವನ್ನು ಪಡೆಯುವಲ್ಲಿ ಹೆಣ್ಣುಮಕ್ಕಳು ಹಿಂದುಳಿದಿದ್ದಾರೆ. ಇದಕ್ಕೆ ಆರ್ಥಿಕ ಸಮಸ್ಯೆ ಮತ್ತು ಅಭದ್ರತೆಯೇ ಮುಖ್ಯ ಕಾರಣ. ವಿದ್ಯಾರ್ಥಿ ವೇತನಗಳನ್ನು ಹೆಚ್ಚಿಸುವ ಮೂಲಕ ಆರ್ಥಿಕ ಸಹಕಾರ ನೀಡಬಹುದು. ಅದೇ ರೀತಿ ಹಳ್ಳಿಹಳ್ಳಿಗಳಲ್ಲೂ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕು. ಈ ಮೂಲಕ ಅಸುರಕ್ಷತೆಯ ಭಾವನೆ ನೀಗಿ ವಿದ್ಯಾಭ್ಯಾಸವನ್ನು ಪಡೆಯಲು ಮುಂದಡಿಯಿಡಬಹುದು.

 ಸರಪಂಚರ, ಪೊಲೀಸರ ಸಮ್ಮುಖದಲ್ಲಿಯೇ ಇಂದು ಕೂಡ ಬಾಲ್ಯವಿವಾಹ ನಡೆಯುತ್ತಿರುತ್ತದೆ. ಯುನಿಸೆಫ್‌ ನ ಒಂದು ಅಂದಾಜು ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 15 ಲಕ್ಷ ಹೆಣ್ಣು ಮಕ್ಕಳ ಬಾಲ್ಯವಿವಾಹ ನಡೆಯುತ್ತದೆ. ವಿವಾಹ ವಯಸ್ಸು ಏರಿಸಿದ ತಕ್ಷಣ ಇದು ನಿಲ್ಲಲಾರದು ಇದಕ್ಕೆ ಕಠಿಣ ಕಾನೂನು ಕ್ರಮ ಜಾರಿಯ ಅಗತ್ಯವಿದೆ.

 ಇಂದು ಸರಕಾರ ನಿರಂತರವಾಗಿ ನಿಯಮಗಳನ್ನು ಹೇರಿ ನಾಗರಿಕರ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿಯುತ್ತಿದೆ. ಏನು ತಿನ್ನಬೇಕು, ಏನು ಧರಿಸಬೇಕು, ಏನು ಮಾತಾಡಬೇಕು ಎಂಬುದನ್ನು ಸರಕಾರ ನಿರ್ಧರಿಸುತ್ತಿದೆ.

18 ವರ್ಷದಲ್ಲಿ ಓರ್ವ ಹೆಣ್ಣು ಸರಕಾರವನ್ನು ಆಯ್ಕೆ ಮಾಡಲು ಪ್ರಬುದ್ಧಳಾಗಿದ್ದಾಳೆ ಎಂದಾಗಿದ್ದರೆ, ತನ್ನ ಜೀವನ ಸಂಗಾತಿಯನ್ನು ಆಯ್ಕೆ ಮಾಡಲು ಆಕೆಗೆ ಏಕೆ ಸಾಧ್ಯವಾಗುವುದಿಲ್ಲ. ಓರ್ವ ಪ್ರಬುದ್ಧ ಯುವತಿಯನ್ನು ವಿವಾಹವಾಗಲು ಬಲಾತ್ಕರಿಸುವುದು, ಒತ್ತಾಯಿಸುವುದು ಎಷ್ಟು ತಪ್ಪೋ ವಿವಾಹದಿಂದ ನಿರ್ಬಂಧಿಸುವುದೂ ಕೂಡ ಅಷ್ಟೇ ತಪ್ಪು ಎಂಬ ಅರಿವಿರಬೇಕಾಗಿದೆ.



Join Whatsapp